ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು : ಕೊಟ್ಟ ಮಾತು ಈಡೇರಿಸಿದ ತೃಪ್ತಿ ನನಗಿದೆ : ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ
ಶಿರಾ : ಉಪಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಕೊಟ್ಟ ಮಾತು ಈಡೇರಿಸಿದ ತೃಪ್ತಿ ನನಗಿದೆ. ನಮ್ಮ ಎಲ್ಲಾ ಬೇಡಿಕೆಗಳನ್ನು ಬಿಜೆಪಿ ಸರ್ಕಾರ ಈಡೇರಿಸಿದೆ. ಸತತ ಮೂರು ಭಾರಿ ಮದಲೂರು ಕೆರೆಗೆ ನೀರು ಹರಿಸಿದ್ದರಿಂದ ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿ ರೈತರ ಮುಖದಲ್ಲಿ ಸಂತೋಷ ಮೂಡಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ಸೋಮವಾರ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಗೆ ಬಾಗಿನ ಅರ್ಪಿಸಿ ನಂತರ ಮದಲೂರು ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟ ವಾಗ್ದಾನದಂತೆ ಚುನಾವಣೆ ಮುಗಿದ 20 ದಿನದಲ್ಲಿಯೇ ಹೇಮಾವತಿ ನೀರು ಹರಿಸಿದೆವು. ಈ ಬಾರಿಯೂ ಸೇರಿ ಮದಲೂರು ಕೆರೆಗೆ ಸತತ ಮೂರು ಬಾರಿ ಹೇಮಾವತಿ ನೀರನ್ನು ಹರಿಸಲಾಗುತ್ತಿದೆ. ಮದಲೂರು ಸೇರಿದಂತೆ ಮಾರ್ಗ ಮಧ್ಯೆ ಬರುವ 14 ಕೆರೆಗಳಿಗೆ ನೀರು ಹರಿಸಿ ಸಂಪೂರ್ಣ ಕೆರೆ ತುಂಬಿಸಲಾಗಿದೆ. ಇದರ ಪರಿಣಾಮ ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಾಗಿದೆ. ರೈತರ ಕೊಳವೆ ಬಾವಿಯಲ್ಲಿ ನೀರು ಹೆಚ್ಚಾಗಿದೆ. ಕೃಷಿಕರು ಉತ್ಸುಕರಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದರು.
ಗೌಡಗೆರೆ ಹೋಬಳಿಗೆ ಗಾಯಿತ್ರಿ ಜಲಾಶಯದಿಂದ ನೀರುಹರಿಸುವ ಸಲುವಾಗಿ ಹಿರಿಯೂರು ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಜೊತೆ ತೆರಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಸ್ತಾವನೆ ಕೊಟ್ಟಿದ್ದೇವೆ. ಹಿರಿಯೂರಿನ 3000 ಎಕೆರೆ ಅಚ್ಚುಕಟ್ಟು ಪ್ರದೇಶ, ಶಿರಾ ತಾಲ್ಲೂಕಿನ 4000 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಗಾಯಿತ್ರಿ ಜಲಾಶಯದಿಂದ ನೀರು ಹರಿಸಲು ಮನವಿ ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಸಮಗ್ರ ಯೋಜನಾ ವರದಿಗೆ ಪತ್ರವನ್ನು ಇಲಾಖೆಗೆ ಬರೆದಿದ್ದಾರೆ. ಶೀಘ್ರದಲ್ಲಿಯೇ ಗೌಡಗೆರೆ ಹೋಬಳಿಗೂ ನೀರು ದೊರಕಲಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ ಶಿರಾ ತಾಲ್ಲೂಕು 40 ವರ್ಷಗಳ ನಂತರ ಸುಭೀಕ್ಷೆ ಕಾಣುತ್ತಿದೆ. ಇಚ್ಚಾಶಕ್ತಿ ಇದ್ದರೆ ಏನಾದರೂ ಜನಪರ ಕೆಲಸಗಳನ್ನು ಮಾಡಬಹುದು ಎಂಬುದಕ್ಕೆ ಬಿಜೆಪಿ ಸರ್ಕಾರ ಕಾರಣೀಭೂತವಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಹುಲಿಕುಂಟೆ ಹೋಬಳಿಗೆ ನೀರು ಹರಿಸುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ನಾವೇಲ್ಲರೂ ಸೇರಿ ಚರ್ಚೆ ಮಾಡಿ ಲಿಫ್ಟ್ ಮಾಡುವ ಮೂಲಕ ಹುಲಿಕುಂಟೆ ಹೋಬಳಿಗೆ ನೀರು ಹರಿಸಲು ಪ್ರಯತ್ನಿಸಲಾಗುವುದು. ಇಷ್ಟು ವರ್ಷ ಮದಲೂರು ಕೆರೆ ಹೆಸರೇಳಿಕೊಂಡು ಕೆಲವರು ರಾಜಕೀಯ ಮಾಡುತ್ತಿದ್ದರು ಇನ್ನು ಮುಂದೆ ಮದಲೂರು ಕೆರೆಯ ಹೆಸರಿನಲ್ಲಿ ರಾಜಕೀಯ ಮಾಡುವುದು ನಿಲ್ಲಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ರಾಜ್ಯ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ, ಮಾಜಿ ತಾ.ಪಂ. ಉಪಾಧ್ಯಕ್ಷ ರಂಗನಾಥ್ ಗೌಡ, ನಗರಸಭೆ ಅಧ್ಯಕ್ಷ ಅಂಜಿನಪ್ಪ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಾರುತೀಶ್, ಸದಸ್ಯರಾದ ರಂಗರಾಜು, ಕೃಷ್ಣಮೂರ್ತಿ, ಬಿಜೆಪಿ ನಗರ ಅಧ್ಯಕ್ಷ ವಿಜಯರಾಜ್, ಮುಖಂಡರಾದ ಮದಲೂರು ಮೂರ್ತಿ ಮಾಸ್ಟರ್, ಪಡಿ ರಮೇಶ್, ತರೂರು ಬಸವರಾಜ್, ವಿಜಯ್‌ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.