ಚಿಕ್ಕನಾಯಕನಹಳ್ಳಿ

ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಬದುಕಿಗೆ ಆಸರೆಯಾಗುವ ಸ್ಪರ್ಧಾತ್ಮಕ ಜ್ಞಾನ ಪಡೆದುಕೊಳ್ಳಿ : ಸಚಿವ ಜೆ.ಸಿ.ಮಾಧುಸ್ವಾಮಿ

ದೇವಾಂಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಚಿಕ್ಕನಾಯಕನಹಳ್ಳಿ : ಪಾಠ ಮಾಡುವವರೆಲ್ಲ ಶಿಕ್ಷಕರಲ್ಲ, ಮಕ್ಕಳಿಗೆ ಅರ್ಥವಾಗುವ ರೀತಿ ಪಾಠ ಮಾಡಿ ಸ್ಪೂರ್ತಿ ತುಂಬುವವರು ನಿಜವಾದ ಶಿಕ್ಷಕರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ಬನಶಂಕರಿ ಪ್ರಾರ್ಥನ ಮಂದಿರದಲ್ಲಿ ಪಾರ್ಥ ಕುಟುಂಬದಿಂದ ದೇವಾಂಗ ಸಮುದಾಯದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಲ್ಲಿ ಮುಂದಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದೆ ಉಳಿದಿದ್ದಾರೆ. ಅದಕ್ಕಾಗಿ ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಆಸಕ್ತಿಯಿಂದ ಕಲಿಕೆಯ ಜೊತೆಗೆ ಬದುಕಿಗೆ ಆಸರೆಯಾಗುವ ಸ್ಪರ್ಧಾತ್ಮಕ ಜ್ಞಾನವನ್ನು ಪಡೆದು ಉನ್ನತ ಶಿಕ್ಷಣಕ್ಕೆ ತಯಾರಾಗಬೇಕಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಆದಾಯದ ಸ್ವಲ್ಪ ಭಾಗವನ್ನು ಸಮಾಜದಲ್ಲಿ ನಡೆಯುವ ಉದಾತ್ತ ಕೆಲಸಗಳಿಗೆ ವಿನಿಯೋಗಿಸಬೇಕೆಂದು ಸಲಹೆ ನೀಡಿದರು.

ಪ್ರತಿಭೆಯನ್ನು ಗುರುತಿಸುವ ಕೆಲಸ ಮೊದಲು ಮನೆಯಿಂದ ಆಗಬೇಕು. ನಂತರ ನೆರೆಹೊರೆಯವರು ಮತ್ತು ಮುಖ್ಯವಾಗಿ ಶಾಲೆಯಲ್ಲಿ ಶಿಕ್ಷಕರಿಂದ ಆಗಬೇಕಿದೆ. ಯಾವ ಮಕ್ಕಳು ದಡ್ಡರಲ್ಲ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಉತ್ತಮ ವಾತವರಣ ಕಲ್ಪಸಿಕೊಟ್ಟರೆ ಪ್ರತಿಭೆ ವಿಕಸನಗೊಳ್ಳುತ್ತದೆ. ಇತರರೊಂದಿಗೆ ತಮ್ಮ ಮಕ್ಕಳನ್ನು ಹೋಲಿಕೆ ಮಾಡಕೊಳ್ಳದೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಗೌರವಿಸಿ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ನುಡಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ 24 ಸಾವಿರ ಕೋಟಿ ಹಣವನ್ನು ಸರಕಾರ ಶಿಕ್ಷಣ ಇಲಾಖೆಗೆ ನೀಡಿದೆ. ಕಳೆದ ಎರಡು ವರ್ಷಗಳು ಶೈಕ್ಷಣಿಕ ಚಟುವಟಿಕೆಯ ಮೇಲೆ ಕರೋನದಿಂದ ಕರಿ ನೆರಳು ಆವರಿಸಿತ್ತು. ಜೊತೆಗೆ ಅನೇಕ ಉದ್ಯಮಗಳು ನೆಲ ಕಚ್ಚಿವೆ. ಸರಕಾರ ಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ಸರಬರಾಜು ಮಾಡಿದರೂ ಕಲಿಕೆಯ ಇತರೆ ವಸ್ತುಗಳನ್ನು ಹೊಂದಿಸಲು ಅನೇಕ ಕುಟುಂಬಗಳು ಇಂದಿಗೂ ಶ್ರಮ ಪಡುತ್ತಿವೆ. ದೇಶಕ್ಕೆ ಬೇಕಾದ ಸಂಸ್ಕಾರಯುತ ಮಕ್ಕಳನ್ನು ನೀಡುವುದು ಶಿಕ್ಷಕರ ಜವಾಬ್ದಾರಿ ಎಂದು ಹೇಳಿದರು.
ಪಟ್ಟಣದ ಶ್ರೀ ಆದಿತ್ಯಾದಿ ನವಗ್ರಹ ಕೃಪಾ ಪೋಷಿತ ಯಕ್ಷಗಾನ ಬಯಲು ನಾಟಕ ಕಲಾಸಂಘವು ನೂರು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಸಚಿವರು ಸಹಕಾರ ನೀಡಬೇಕೆಂದು ಕಲಾ ಸಂಘದ ಅಧ್ಯಕ್ಷ ಪಾರ್ಥ ಕುಮಾರಸ್ವಾಮಿ ಮನವಿ ಮಾಡಿದರು.
ಸಮಾರಂಭದಲ್ಲಿ ಪ್ರಯೋಜಕಿ ಚಂದ್ರಕಲಾ, ಪುರಸಭಾ ಉಪಾಧ್ಯಕ್ಷೆ ಲಕ್ಷ್ಮೀ, ದೇವಾಂಗ ಸಂಘದ ಅಧ್ಯಕ್ಷ ಧನರಾಜ್, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನಾಧಿಕಾರಿ ಪ್ರೇಮಾನಂದ್, ಪುರಸಭಾ ಸದಸ್ಯ ಶ್ಯಾಮ್, ಮುಖಂಡರಾದ ದಾಸಪ್ಪ, ಮಂಜುನಾಥ್, ಪಾಂಡುರಂಗ, ಪ್ರಕಾಶ್, ಕೋಡಿ ಲೋಕೇಶ್, ಜವಳಿ ರಂಗನಾಥ್, ವರದರಾಜು, ಈಶ್ವರ್ ಹಾಗೂ ಇತರರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker