ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಫ್ಲೆಕ್ಸ್ ಗಲಭೆ : ಕೋಮು-ಕೋಮುಗಳ ನಡುವೆ ಗಲಾಟೆ ಎಂಬಂತೆ ಬಿಂಬಿಸಲು ಹೊರಟಿರುವ ಮಾಜಿ ಶಾಸಕ ಬಿ.ಸುರೇಶ್‌ಗೌಡ ಮತ್ತು ಬೆಂಬಲಿಗರ ವರ್ತನೆಗೆ ಹಿರೇಹಳ್ಳಿ ಮಹೇಶ್ ಖಂಡನೆ
ತುಮಕೂರು : ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಡಿ.ಕೊರಟಗೆರೆಯಲ್ಲಿ ಫ್ಲೆಕ್ಸ್ ಅಳವಡಿಸುವ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದಂತಹ ಗಲಭೆಯನ್ನೇ ಮಾಜಿ ಶಾಸಕ ಬಿ.ಸುರೇಶ್‌ಗೌಡ ಮತ್ತು ಅವರ ಬೆಂಬಲಿಗರು ಹಿಂದು-ಮುಸ್ಲಿಂ ಗಲಾಟೆ, ಲಿಂಗಾಯಿತ-ಒಕ್ಕಲಿಗರ ನಡುವೆ ಗಲಾಟೆ ಎಂಬಂತೆ ಬಿಂಬಿಸಲು ಹೊರಟಿರುವುದು ಖಂಡನೀಯ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಸ್ಕಲ್ ಗ್ರಾಪಂ ವ್ಯಾಪ್ತಿ ಡಿ.ಕೊರಟಗೆರೆ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ನಡೆಯಿತು,ಈ ಪ್ರಯುಕ್ತ ಫ್ಲೆಕ್ಸ್ ಬ್ಯಾನರ್ ಕಟ್ಟುವ ವಿಚಾರದಲ್ಲಿ ಬಿಜೆಪಿ ಕಿಡಿಗೇಡಿಗಳು ಜಗಳ ತೆಗೆದು ಕೆಟ್ಟ ಹೆಸರು ತರುವ ಹುನ್ನಾರ ಮಾಡಿದ್ದಾರೆ,ಜೆಡಿಎಸ್ ಶಾಸಕರ ಮೇಲಿನ ಅಭಿಮಾನದಿಂದ ಪಕ್ಷದ ಕಾರ್ಯಕರ್ತರು ಬ್ಯಾನರ್ ಕಟ್ಟಲು ಹೋದಾಗ ಜೆಡಿಎಸ್ ಕಾರ್ಯಕರ್ತರನ್ನು ಮಸ್ಕಲ್ ಗ್ರಾಪಂ ಅಧ್ಯಕ್ಷರು ತಡೆಯುತ್ತಾರೆ.ನಮ್ಮ ಮನೆ ಮುಂದೆ ಕಟ್ಟಬೇಡಿ ಎಂದಾಗ ನಾವು ಸುಮ್ಮನಾಗುತ್ತೇವೆ.ಬೇರೆ ಕಡೆ ಕಟ್ಟಲು ಮುಂದಾದಾಗ ಬ್ಯಾನರ್ ಹರಿದು ಹಲ್ಲೆ ಮಾಡಿದ್ದಾರೆ.ಆದರೆ ಸತ್ಯ ಮರೆಮಾಚುವ ಕೆಲಸಕ್ಕೆ ಮುಂದಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕರ್ತರ ನಡುವಿನ ಗಲಾಟೆಯನ್ನೇ ನೆಪ ಮಾಡಿಕೊಂಡ ಬಿಜೆಪಿ ಕೆಲ ಮುಖಂಡರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ, ಕೋಮು ಗಲಭೆ ಎಂಬೆಲ್ಲಾ ಮಾತನಾಡುತ್ತಿದ್ದಾರೆ,ಮಾಜಿ ಜಿಪಂ ಸದಸ್ಯರು ಮಾತನಾಡಿ ಶಾಸಕ ಗೌರಿಶಂಕರ್ ವೀರಶೈವ ವಿರೋಧಿ ಎಂದು ಆರೋಪ ಮಾಡುತ್ತಾರೆ. ಸಿ.ಚನ್ನಿಂಗಪ್ಪ ಕುಟುಂಬ ಸಿದ್ದಗಂಗಾ ಮಠದ ನಡುವಿನ ಬಾಂಧವ್ಯ ಇದೆ ಎಂಬುದನ್ನು ತಿಳಿಯಲಿ.ಕೊರೊನಾ ಸಂದರ್ಭದಲ್ಲಿ ಶಾಸಕರು ಏನು ಕೆಲಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆಗ ಮಾಜಿ ಶಾಸಕರು ಎಲ್ಲಿ ಹೋಗಿದ್ದರು.ನಾಲ್ಕು ವರ್ಷದಿಂದ ಕಾಣೆಯಾಗಿದ್ದ ಮಾಜಿ ಶಾಸಕರು ಚುನಾವಣೆ ಹತ್ತಿರ ಬಂದಿರುವಾಗ ಈಗ ಬೇಳೆ ಬೇಯಿಸಿಕೊಳ್ಳಲು ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ ಎಂದರು.
ನಮ್ಮ ಶಾಸಕರಾದ ಗೌರಿಶಂಕರ್ ಲಿಂಗಾಯಿತ ವಿರೋಧಿ ಎಂದು ಹೇಳುವ ಮಾಜಿ ಶಾಸಕ ಸುರೇಶ್‌ಗೌಡ ಅವರ ಅನುಯಾಯಿಗಳು, ಕಳೆದ 10 ವರ್ಷಗಳ ಕಾಲ ಅವರು ಗ್ರಾಮಾಂತರ ಕ್ಷೇತ್ರದಿಂದ ಎಷ್ಟು ಜನ ಲಿಂಗಾಯಿತರಿಗೆ ಸಹಾಯ ಮಾಡಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಲಿ, ಪಕ್ಷದಲ್ಲಿ ಯಾವ ಹುದ್ದೆ ನೀಡಿದ್ದಾರೆ ಎಂದು ತಿಳಿಸಲಿ,ನಾವೆಲ್ಲರೂ ನಡೆದಾಡುವ ದೇವರು ಎಂದು ತಿಳಿದಿರುವ ಡಾ.ಶ್ರೀಶಿವಕುಮಾರಸ್ವಾಮಿಜಿಗಳ ಬಗ್ಗೆ ಕೀಳಾಗಿ ಮಾತನಾಡಿದ ಕೀರ್ತಿ ನಿಮ್ಮ ಶಾಸಕರದ್ದು ಎಂದು ಹಿರೇಹಳ್ಳಿ ಮಹೇಶ್ ದೂರಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಲ್ಲಾ ಜಾತಿಯವರು, ಧರ್ಮದವರು ಅಣ್ಣ ತಮ್ಮಂದಿರಂತೆ ಬದುಕುತಿದ್ದೇವೆ. ಅವರನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ಆಳಲು ಮಾಜಿ ಶಾಸಕರು ಪ್ರಯತ್ನಿಸಬಾರದು. ಮುಂದೆಯೂ ಇಂತಹ ಕೀಳು ರಾಜಕೀಯಕ್ಕೆ ಇಳಿದರೆ, ಅವರನ್ನು ಕ್ಷೇತ್ರದಿಂದಲೇ ಬಹಿಷ್ಕರಿಸುವಂತೆ ಹೋರಾಟ ನಡಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು,ತುಮಕೂರು ಗ್ರಾಮಾಂತರಕ್ಕೆ ಸೇರಿದ ಪೊಲೀಸ್ ಠಾಣೆಯಲ್ಲಿ ಶಾಸಕರಾಗಿರುವ ಗೌರಿಶಂಕರ್ ಅವರ ಮಾತಿಗಿಂತ, ಸರಕಾರವಿದೆ ಎಂಬ ಕಾರಣಕ್ಕೆ ಮಾಜಿ ಶಾಸಕರ ಮಾತಿಗೆ ಅಧಿಕಾರಿಗಳು ಹೆಚ್ಚು ಮನ್ನಣೆ ನೀಡುತ್ತಿದ್ದಾರೆ. ಆ ಕಾರಣದಿಂದಲೇ ನಮ್ಮ ಪಕ್ಷದ ಮುಖಂಡರು,ಸಮಾಜ ಸೇವಕರು ಆಗಿರುವ ಪಾಲನೇತ್ರಯ್ಯ ಅವರು, ಹೆಬ್ಬೂರು ಪೊಲೀಸರು ಪಕ್ಷಪಾತಿಗಳು ಎಂದು ಹೇಳಿದ್ದಾರೆ. ಇದರಲ್ಲಿ ಯಾವುದೇ ತಪ್ಪು ಇಲ್ಲ.ಗ್ರಾಮಾಂತರಕ್ಕೆ ಸೇರಿದ ಹೆಬ್ಬೂರು,ಕ್ಯಾತ್ಸಂದ್ರ ಪೊಲೀಸರ ನಡವಳಿಕೆ ಹಾಗೆಯೇ ಇದೆ ಎಂದು ಪಾಲನೇತ್ರಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಈ ವೇಳೆ ಜಿ.ಪಂ.ಮಾಜಿ ಸದಸ್ಯ ರಾಮಚಂದ್ರಪ್ಪ, ಮುಖಂಡರಾದ ಬೆಳಗುಂಬ ವೆಂಕಟೇಶ್,ಉಮೇಶ್, ಸುವರ್ಣಗಿರಿ ಕುಮಾರ್,ವಿಜಯಕುಮಾರ್, ರುದ್ರೇಶ್, ಕೆಂಪರಂಗಣ್ಣ,ಸ್ವಾಮಿ ಚಿಕ್ಕಹಳ್ಳಿ,ಮಹದೇವ,ಹರೀಶ್ ನರಸಾಪುರ, ರವೀಶ್, ಬೋಜರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.