ಆಗಸ್ಟ್ 28 ಕ್ಕೆ ರಾಜ್ಯಮಟ್ಟದ ಬೋವಿ ಸಮಾಜದ ಸಮಾವೇಶ : ಕೊತ್ತೂರು ಹನುಮಂತರಾಯಪ್ಪ
ರಾಜ್ಯಮಟ್ಟದ ಬೋವಿ ಸಮಾವೇಶದ ಪೂರ್ವಬಾವಿ ಸಭೆ
ತುಮಕೂರು: ರಾಷ್ಟ್ರೀಯ ಶ್ರೀಸಿದ್ದರಾಮೇಶ್ವರ ಓಡ್ ಯುವ ವೇದಿಕೆವತಿಯಿಂದ 2022ನೇ ಆಗಸ್ಟ್ 28 ರ ಭಾನುವಾರ 11.40 ಗಂಟೆಗೆ ಅಮಾನಿಕೆರೆ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಬೋವಿ ಸಮಾವೇಶದ ಪೂರ್ವಬಾವಿ ಸಭೆಯನ್ನು ಸಪ್ತಗಿರಿ ಕೋ ಅಪರೇಟಿವ್ ಸೊಸೈಟಿಯ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಶ್ರೀಸಿದ್ದರಾಮೇಶ್ವರ ಒಡ್ ಯುವ ವೇದಿಕೆಯ ರಾಜ್ಯಾಧ್ಯಕ್ಷ ಕೊತ್ತೂರು ಹನುಮಂತರಾಯಪ್ಪ,ದುಡಿಮೆ, ಪರಿಶ್ರಮದಿಂದ ಬದುಕುತ್ತಿರುವ ಬೋವಿ ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಂಡಿದ್ದು,ಇದೊಂದು ಪಕ್ಷಾತೀತ ಸಮಾವೇಶವಾಗಿದೆ.ಎಲ್ಲಾ ಪಕ್ಷಗಳ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ವಹಿಸಲಿದ್ದು,ಜನಾಂಗಕ್ಕೆ ಸೇರಿದ ಆರು ಜನ ಶಾಸಕರು ಮತ್ತು ಓರ್ವ ಎಂ.ಎಲ್.ಸಿ. ಅವರು ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ,ಸ್ಥಳೀಯ ಶಾಸಕರು, ಸಂಸದರು ಸಹ ಪಾಲ್ಗೊಳ್ಳಲಿದ್ದಾರೆ.ರಾಜ್ಯದ 31 ಜಿಲ್ಲೆಗಳಿಂದ 15-20 ಸಾವಿರ ಜನರು ಸಮಾವೇಶದಲ್ಲಿ ಭಾಗವಹಿಸುವರು ಎಂದು ಹನುಮಂತರಾಯಪ್ಪ ತಿಳಿಸಿದರು.
ಸಮಾವೇಷದಲ್ಲಿ ಜನಾಂಗದ ಶೈಕ್ಷಣಿಕ, ಸಾಮಾಜಿಕ, ಅರ್ಥಿಕ, ರಾಜಕೀಯ ಅಭಿವೃದ್ದಿಗಾಗಿ ದುಡಿದ ಹಿರಿಯರಿಗೆ ಭೋವಿ ರತ್ನ,ಮಂಜರಿ ಹನುಮಂತರಾಯಪ್ಪ ಸೇವಾ ಪ್ರಶಸ್ತಿ,ಕೋಲಾರ ಮುನಿಸ್ವಾಮಿ ಸೇವಾ ಪ್ರಶಸ್ತಿ, ಶಬ್ದವೇದಿ ವಡ್ಡಯಲ್ಲಣ್ಣ ಸೇವಾ ಪ್ರಶಸ್ತಿ,ಜಿ.ಜೆ.ಕೃಷ್ಣ ಸೇವಾ ಪ್ರಶಶ್ತಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದರು.
ರಾಜ್ಯದಲ್ಲಿ 35-40 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಬೋವಿ ಸಮುದಾಯದ ಪ್ರಮುಖ ಕೆಲಸ ಕಲ್ಲು ಕುಟ್ಟುವುದು.ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಸರಕಾರದ ಅನುಮತಿ ಪಡೆದು ಕಲ್ಲು ಒಡೆಯುತ್ತಿರುವ ಒಡ್ಡ ಜನಾಂಗಕ್ಕೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ.ಇದನ್ನು ತಪ್ಪಿಸುವಂತೆ ಮತ್ತು ನ್ಯಾ.ಎ.ಜೆ.ಸದಾಶಿವ ವರದಿಯನ್ನು ಜಾರಿಗೊಳಿಸದಂತೆ ಮನವಿಯನ್ನು ಸಮಾವೇಶದಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು.ಇಡೀ ಕಾರ್ಯಕ್ರಮ ಸಂವಿಧಾನಶಿಲ್ಪಿ ಅಂಬೇಡ್ಕರ್ ಆಶಯದಂತೆ ನಡೆಯಲಿದೆ ಎಂದು ಕೊತ್ತೂರು ಹನುಮಂತರಾಯಪ್ಪ ತಿಳಿಸಿದರು.
ಸಭೆಯಲ್ಲಿ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಪಾವಗಡ, ಪದಾಧಿಕಾರಿಗಳಾದ ಜಂಗಮರಹಳ್ಳಿ ಲಕ್ಷ್ಮೀ ನಾರಾಯಣ, ಭೀಮರಾಜು ಚಿತ್ರದುರ್ಗ,ದಾಸಪ್ಪ ಬೋವಿ,ನಾಗರಾಜ ಬೋವಿ, ನಾಗೇಶ್,ರಾಷ್ಟ್ರೀಯ ಅಧ್ಯಕ್ಷ ಮೀಸೆ ರಂಗಪ್ಪ,ಪಾರ್ವತಮ್ಮ, ಮಂಜುನಾಥ್, ಗೌರಮ್ಮ, ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು