ಮಳೆ ನೀರಲ್ಲಿ ಕೊಚ್ಚಿ ಹೋದ ಆಟೋ ಚಾಲಕನ ಮೃತ ದೇಹ ಪತ್ತೆ
ತುಮಕೂರು : ಶನಿವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಆಟೋ ಚಾಲಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ತುಮಕೂರಿನ ದಾನ ಪ್ಯಾಲೇಸ್ ಸಮೀಪದ ರೈಲ್ವೆ ಕೆಳ ಸೇತುವೆ ಬಳಿ ನಡೆದಿದೆ.ಸೇತುವೆ ಬಳಿ ಆಟೋ ಮಾತ್ರ ಇದ್ದು, ಚಾಲಕ ನಾಪತ್ತೆಯಾಗಿದ್ದು ಆತನ ಮೃತದೇಹ ಭೀಮಸಂದ್ರದ ಬಳಿ ಪತ್ತೆಯಾಗಿದೆ.
ನೀರಿನಲ್ಲಿ ಕೊಚ್ಚಿ ಹೋದ ಆಟೋ ಚಾಲಕನನ್ನು ಶಾಂತಿ ನಗರ ನಿವಾಸಿ ಅಂಜಾದ್ ಖಾನ್(43) ಎಂದು ಗುರುತಿಸಲಾಗಿದೆ. ಚಾಲಕ ಆಟೋವನ್ನು ದಾನ ಪ್ಯಾಲೇಸ್ ನಿಂದ ಗುಬ್ಬಿ ಗೇಟ್ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಆಗ ಮಳೆ ಸುರಿಯುತ್ತಿತ್ತು.ಆಟೋವನ್ನು ಸೇತುವೆಯ ಸಮೀಪ ನಿಲ್ಲಿಸಿ ಮಳೆ ನೀರು ಹರಿಯುತ್ತಿರುವುದನ್ನು ವಿಡಿಯೋ ಮಾಡಲು ತೊಡಗಿದ್ದಾನೆ. ಈ ಸಂದರ್ಭದಲ್ಲಿ ರಭಸದಿಂದ ಬಂದ ಮಳೆ ನೀರಿಗೆ ಆ ಚಾಲಕ ಕೊಚ್ಚಿ ಹೋಗಿದ್ದಾನೆ..
ಚಾಲಕ ನಾಪತ್ತೆಯಾಗಿರುವ ಸ್ಥಳದಲ್ಲಿ ಹಲವು ವರ್ಷಗಳಿಂದ ಎರಡು ಬದಿಯಲ್ಲಿ ಚರಂಡಿ ಬಾಯ್ತೆರೆದುಕೊಂಡಿದ್ದು ಅದರಲ್ಲಿ ಕೊಚ್ಚಿ ಹೋಗಿದ್ದಾನೆ.ಹೀಗೆ ಬಾಯ್ತೆರೆದಿರುವ ಚರಂಡಿಯ ನಿರ್ವಹಣೆಯ ಬಗ್ಗೆ ಯಾವ ಅಧಿಕಾರಿಗಳು ಗಮನಹರಿಸದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಪೈಪ್‌ಲೈನ್‌ಗೆ ಚಾಲರಿ ಅಳವಡಿಸಿದ್ದರೆ ಇಂತಹ ಆನಾಹುತವನ್ನು ತಡೆಯಬಹುದಿತ್ತು ಎಂಬುದು ನಾಗರೀಕರ ವಾದವಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್,ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕ,ಪಾಲಿಕೆ ವಿರೋಧಪಕ್ಷದ ನಾಯಕ ಜೆ.ಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷ ನಯಾಜ್, ಸದಸ್ಯ ಮಂಜುನಾಥ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿ ಮೃತದೇಹ ಪತ್ತೆ ಮಾಡಿದ್ದಾರೆ.
ಜನ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ: ಆಟೋ ಚಾಲಕ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿರುವ ವಿಷಯ ತಿಳಿದು ಸಾವಿರಾರು ಸಂಖ್ಯೆಯಲ್ಲಿ, ಶಾಂತಿನಗರ, ಜಯನಗರ,ಪೂರ್ ಹೌಸ ಕಾಲೋನಿ ಸೇರಿದಂತೆ ಹಲವು ಭಾಗಗಳಿಂದ ಜನರು ತಂಡೋಪ ತಂಡವಾಗಿ ಮಳೆಯಲ್ಲಿಯೂ ಆಗಮಿಸಿದ್ದು, ಜನರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ತಿಲಕ್ ಪಾರ್ಕು ಸಿಪಿಐ ನವೀನ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ : ಮನೆಯ ಹತ್ತಿರದ ವ್ಯಕ್ತಿಯೊಬ್ಬರು ನಿನ್ನ ಗಂಡ ಮಳೆಯಲ್ಲಿ ಕೊಚ್ಚಿ ಹೋಗಿದ್ದಾನೆ ಎಂಬ ವಿಷಯ ತಿಳಿದ ಕುಟುಂಬದ ಆರ್ತನಾದ ಮುಗಿಲು ಮುಟ್ಟಿದ್ದು, ಮೃತ ಅಮ್ಜಾದ್ ಅವರ ಪತ್ನಿ ಹಾಜಿರಾ ಮತ್ತು ಒಂದು ಗಂಡು, ಹೆಣ್ಣು ಮಗು ತಂದೆಗಾಗಿ ಅಳುವ ಆಕ್ರಂದನ ಮುಗಿಲು ಮುಟ್ಟಿದೆ.