ಆಹಾರ ಪದಾರ್ಥಗಳ ಮೇಲೆ ಶೇ. 5 ರಷ್ಟು ಜಿಎಸ್‌ಟಿ ತೆರಿಗೆ ವಿರೋಧಿಸಿ ವ್ಯಾಪಾರಿಗಳು, ಅಕ್ಕಿ ಗಿರಣಿದಾರರು ಹಾಗೂ ರೈತರ ಪ್ರತಿಭಟನೆ
ತುಮಕೂರು : ತೆರಿಗೆ ರಹಿತವಾಗಿದ್ದ ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳ ಮೇಲೆ ಶೇ. 5 ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿ ಜು. 18 ರಿಂದ ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾ ಅಕ್ಕಿ ಗಿರಣಿದಾರರ ಸಂಘ, ಚಿಲ್ಲರೆ, ಸಗಟು ವ್ಯಾಪಾರಸ್ಥರು ಹಾಗೂ ರೈತರು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಮಂದಿ ವರ್ತಕರು, ರೈತರು ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಂತರ ಬಿ.ಹೆಚ್. ರಸ್ತೆ, ಎಂ.ಜಿ. ರಸ್ತೆ, ಗುಂಚಿ ಸರ್ಕಲ್ ಮುಖೇನ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ ವರ್ತಕರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಅಕ್ಕಿ ಗಿರಣಿದಾರರ ಸಂಘ, ಆಹಾರ ಧಾನ್ಯಗಳ ವರ್ತಕರ ಸಂಘ, ಛೇಂಬರ್ ಆಫ್ ಕಾಮರ್ಸ್, ಚಿಲ್ಲರೆ ವ್ಯಾಪಾರಸ್ಥರು, ಮಂಡಿಪೇಟೆ ಅಂಗಡಿಗಳ ವರ್ತಕರು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ ಕೂಡಲೇ ಅಗತ್ಯ ವಸ್ತುಗಳಿಗೆ ವಿಧಿಸಲು ನಿರ್ಧರಿಸಿರುವ ಶೇ. 5 ರಷ್ಟು ಜಿಎಸ್‌ಟಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಅಕ್ಕಿ ಗಿರಣಿದಾರರ ಸಂಘದ ಅಧ್ಯಕ್ಷ ಆರ್‌ಎಲ್. ರಮೇಶ್‌ಬಾಬು ಮಾತನಾಡಿ, ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಶೇ. 5 ರಷ್ಟು ಜಿಎಸ್‌ಟಿಯನ್ನು ಜು. 18 ರಿಂದ ಜಾರಿಗೊಳಿಸಲು ಮುಂದಾಗಿರುವುದು ಖಂಡನೀಯ. ಇದರಿಂದ ಜನಸಾಮಾನ್ಯರಿಗೆ, ರೈತರಿಗೆ ತುಂಬಾ ತೊಂದರೆಯಾಗಲಿದೆ. ರೈತರು ಬೆಳೆದಿರುವ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುವುದಿಲ್ಲ. ಕೂಡಲೇ ಕೇಂದ್ರ ಸರ್ಕಾರ ದಿನ ಬಳಕೆ ವಸ್ತುಗಳ ಮೇಲೆ ಶೇ. 5 ರಷ್ಟು ಜಿಎಸ್‌ಟಿ ವಿಧಿಸಲು ಮುಂದಾಗಿರುವುದು ಕೂಡಲೇ ರದ್ದುಗೊಳಿಸಬೇಕು. ಇದನ್ನು ರದ್ದುಗೊಳಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.
ಈಗಾಗಲೇ ಪ್ರತಿಯೊಂದಕ್ಕೂ ಪ್ರತ್ಯಕ್ಷ, ಪರೋಕ್ಷ ತೆರಿಗೆ ಇದೆ. ಜಿಎಸ್‌ಟಿ ಸ್ಲಾಬ್‌ಗಳಿಂದ ಈಗಾಗಲೇ ಸಮಸ್ಯೆ ಬಿಗಡಾಯಿಸಿದೆ. ಇದರ ಮಧ್ಯೆ ಜೂನ್ 28 29ರಂದು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಆಹಾರ ಧಾನ್ಯಗಳ ಮೇಲೆ ಶೇ. 5 ರಷ್ಟು ತೆರಿಗೆ ವಿಧಿಸಿ ಜು.18 ರಿಂದ ಜಾರಿಗೊಳಿಸುತ್ತಿರುವುದು ಜನಸಾಮಾನ್ಯರ ಮೇಲೆ ಆಹಾರದ ಮೇಲೆ ಮಾಡುತ್ತಿರುವ ಗದಾ ಪ್ರಹಾರವೆನಿಸಿದೆ. ವರ್ತಕರಿಗಿಂತ ಆಹಾರ ಧಾನ್ಯಗಳನ್ನು ಬೆಳೆಯುವ ರೈತರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದರು.
ಶೇ. 5 ರಷ್ಟು ತೆರಿಗೆ ಹಾಕಿದರೆ ಮಾರುಕಟ್ಟೆಯಲ್ಲಿ ಆಹಾರ ಸಾಮಾಗ್ರಿ ದರ ಹೆಚ್ಳಳವಾಗಲಿದೆ. ದರ ಹೆಚ್ಚಳವಾದರೆ ಬೇಡಿಕೆ ಕಡಿಮೆಯಾಗಿ ರೈತರಿಂದ ಖರೀದಿ ದರವೂ ಇಳಿಕೆಯಾಗಲಿದೆ. ಜನಸಾಮಾನ್ಯರು, ರೈತರು, ವರ್ತಕರು ಮೂವರಿಗೂ ಶೇ. 5 ರಷ್ಟು ತೆರಿಗೆ ಏರಿಕೆಯಿಂದ ತೊಂದರೆಯಾಗಲಿದೆ. ಯಾವುದೇ ಸರ್ಕಾರದಲ್ಲೂ ಹಾಕದ ಶೇ. 5 ರಷ್ಟು ಜಿಎಸ್‌ಟಿಯನ್ನು ಪ್ರಸ್ತುತ ಹಾಕಿದ್ದು, ಇದನ್ನು ರದ್ದುಗೊಳಿಸವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಅಕ್ಕಿ ಗಿರಣಿದಾರರ ಸಂಘದ ಗೌರವಾಧ್ಯಕ್ಷ ಎನ್.ಆರ್. ವಿಶ್ವಾರಾಧ್ಯ, ಕಾರ್ಯಾಧ್ಯಕ್ಷ ಕೆ.ಜಿ. ಮುನಿಗಂಗಪ್ಪ, ಕಾರ್ಯದರ್ಶಿ ನಂಜುAಡ ಪ್ರಸಾದ್, ಧಾನ್ಯ ವರ್ತಕರ ಸಂಘದ ಜಿ.ಎಸ್. ಪರಮಶಿವಯ್ಯ, ಛೇಂಬರ್ ಆಫ್ ಕಾಮರ್ಸ್ನ ಮಾಜಿ ಅಧ್ಯಕ್ಷ ಟಿ.ಆರ್. ಲೋಕೇಶ್, ರೈತ ಸಂಘದ ಜಗದೀಶ್, ಪ್ರಸನ್ನಕುಮಾರ್, ನಾರಾಯಣ್, ಎಂ.ಎನ್. ಲೋಕೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.