ಉದ್ಯೋಗಾಕಾಂಕ್ಷಿಗಳು ವೃತ್ತಿಕೌಶಲ್ಯ ರೂಪಿಸಿಕೊಳ್ಳಿ : ಶಾಸಕ ಜ್ಯೋತಿಗಣೇಶ್
ತುಮಕೂರು : ಇಂದಿನ ಪರಿಸ್ಥಿತಿಯಲ್ಲಿ ಉದ್ಯೋಗಾಕಾಂಕ್ಷಿಗಳು ಕೌಶಲ್ಯ ರೂಪಿಸಿಕೊಳ್ಳುವುದು ಅತ್ಯಗತ್ಯ. ಅರ್ಹತೆ, ವೃತ್ತಿಕೌಶಲ್ಯತೆ ಹೆಚ್ಚಿಸಿಕೊಂಡರೆ ಉದ್ಯೋಗ ಪಡೆದು ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರಲು ಅವಕಾಶವಿರುತ್ತದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದ 26ನೇ ವಾರ್ಡಿನ ವಾಸವಿ ವಿದ್ಯಾಪೀಠದ ಆವರಣದಲ್ಲಿ ಹೈದರಾಬಾದ್‌ನ ರೆಡ್ಡಿಸ್ ಫೌಂಡೇಷನ್, ನಗರದ ಗ್ರೋ ಸೆಂಟರ್ ಸಹಯೋಗದಲ್ಲಿ ಭಾನುವಾರ ನಡೆದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಎಲ್ಲವರೂ ದುಡಿಮೆ ಅವಲಂಬಿಸಬೇಕು. ಆವರ ಆಸಕ್ತಿ, ವಿದ್ಯಾರ್ಹತೆ ಆಧಾರದಲ್ಲಿ ಉದ್ಯೋಗ ಪಡೆಯಬಹುದು. ಯಾವುದೇ ಉದ್ಯೋಗಕ್ಕೆ ಸೇರುವಾಗ ಅಭ್ಯರ್ಥಿಗಳು ಆ ಸಂಬAಧಿತ ಕೌಶಲ್ಯತೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ನಗರದ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಸ್ಥಾಪನೆಯಾಗುತ್ತಿರುವ ಇನ್‌ಕ್ಯೂಬೇಷನ್ ಸೆಂಟರ್ ಐದಾರು ತಿಂಗಳಲ್ಲಿ ಪ್ರಾರಂಭವಾಗುತ್ತದೆ. ನಿರುದ್ಯೋಗಿಗಳಿಗೆ ಇಲ್ಲಿ ಸರ್ಕಾರದಿಂದ ಉಚಿತವಾಗಿ ಉದ್ಯೋಗ ಸಂಬಂಧಿತ ಕೌಶಲ್ಯ ತರಬೇತಿಗಾಗಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಕೈಗಾರಿಕಾ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪನೆಯಾಗುತ್ತಿದ್ದು, ಉದ್ಯೋಗಾವಕಾಶಗಳು ವಿಫುಲವಾಗಿವೆ. ನಿರುದ್ಯೋಗಿಗಳು ಅಗತ್ಯ ತರಬೇತಿ ಪಡೆದು ಉದ್ಯೋಗ ಪಡೆಯಲು ಈ ಸೆಂಟರ್ ವರದಾನವಾಗಲಿದೆ ಎಂದರು.
ಈಗಿನ ಶಿಕ್ಷಣ ವ್ಯವಸ್ಥೆ ಇಂದಿನ ಪರಿಸ್ಥಿತಿಗೆ ಪೂರಕವಾಗಿಲ್ಲ, ಉದ್ಯೋಗಾಧಾರಿತ ಕೌಶಲ್ಯವನ್ನು ತರಗತಿ ಹಂತದಲ್ಲಿಯೇ ಕಲಿಸುವ ಹೊಸ ಶಿಕ್ಷಣ ನೀತಿ ಹೊಸ ತಲೆಮಾರಿಗೆ ಅನುಕೂಲವಾಗಲಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಇಂತಹ ಶಿಕ್ಷಣ ನೀತಿ ಅಗತ್ಯವಿದೆ ಎಂದು ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.
ನಗರ ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಮಾತನಾಡಿ, ಅಭ್ಯರ್ಥಿಗಳು ಉದ್ಯೋಗ ಮೇಳದ ಸದುಪಯೋಗಪಡಿಸಿಕೊಂಡು ಸೇರಿದ ಸಂಸ್ಥೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿ ತಮ್ಮ ಹಾಗೂ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿ ಎಂದು ಸಲಹೆ ಮಾಡಿದರು.
26ನೇ ವಾರ್ಡಿನ ನಗರ ಪಾಲಿಕೆ ಸದಸ್ಯ ಹೆಚ್.ಮಲ್ಲಿಕಾರ್ಜುನ್ ಮಾತನಾಡಿ, ಹೆಚ್ಚು ಜನರಿಗೆ ಉದ್ಯೋಗ ಸಿಗಲಿ ಎನ್ನುವ ಕಾರಣಕ್ಕೆ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. 25ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಅಭ್ಯರ್ಥಿಗಳ ಆಯ್ಕೆಗಾಗಿ ಬಂದಿವೆ, ಸುಮಾರು 600 ಜನರಿಗೆ ಉದ್ಯೋಗ ಕೊಡಿಸಬೇಕು ಎಂದು ಆಶಯವಿದೆ ಎಂದು ಹೇಳಿದರು.
ರೆಡ್ಡಿಸ್ ಫೌಂಡೇಷನ್‌ನ ಕೆ.ಎನ್.ಪ್ರದೀಪ್ ಮಾತನಾಡಿ, ಕಾಲೇಜುಗಳಲ್ಲಿ ಕಂಪನಿಗಳು ಕ್ಯಾಂಪಸ್ ಆಯ್ಕೆ ಮಾಡಿ ಉದ್ಯೋಗ ನೀಡುತ್ತವೆ. ಶಿಕ್ಷಣ ಮುಗಿಸಿ ಉದ್ಯೋಗ ಸಿಗದೆ ಮನೆಯಲ್ಲಿ ಉಳಿದವರಿಗೆ ಉದ್ಯೋಗ ನೀಡಬೇಕು ಎಂಬುದು ಸಂಸ್ಥೆಯ ಆಶಯ. ಅದಕ್ಕಾಗಿ ಆಸಕ್ತರಿಗೆ ಸಂಸ್ಥೆಯಿAದ ಅಗತ್ಯ ತರಬೇತಿ ನೀಡಿ ಉದ್ಯೋಗ ಪಡೆಯಲು ಸಿದ್ಧ ಮಾಡಲಾಗುತ್ತದೆ ಎಂದರು.
ವಾಸವಿ ವಿದ್ಯಾಪೀಠ ಕಾರ್ಯದರ್ಶಿ ಕೃಷ್ಣಮೂರ್ತಿ, ರೆಡ್ಡಿ ಫೌಂಡೇಷನ್‌ನ ಶಂಕರ್, ಗುರುಪ್ರಸಾದ್, ಭಾರತಿ ಮುಖಂಡ ರಾಕ್‌ಲೈನ್ ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.
ತುಮಕೂರು ಜಿಲ್ಲೆಯಲ್ಲದೆ ಹೊರ ಜಿಲ್ಲೆಗಳ ಸುಮಾರು 900 ಅಭ್ಯರ್ಥಿಗಳು ಉದ್ಯೋಗ ಅಪೇಕ್ಷಿಸಿ ಮೇಳದಲ್ಲಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.