ಗುಬ್ಬಿ
ಉಪ ನೋಂದಣಾಧಿಕಾರಿ ಕಚೇರಿ ಕಟ್ಟಡ ಕಳಪೆ ಕಾಮಗಾರಿ : ಉದ್ಘಾಟನೆಗೊಂಡ 5 ದಿನಗಳಲ್ಲೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೆಳಕಿಗೆ ಬಂದ ಕಳಪೆ ಕಾಮಗಾರಿ
ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರನ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ
ಗುಬ್ಬಿ: ಹೊರ ನೋಟ ಬಲು ಸುಂದರ ಒಳ ಹೊಕ್ಕರೆ ಕಳಪೆ ಕಾಮಗಾರಿಯ ಕರ್ಮಕಾಂಡ.ಉದ್ಘಾಟನೆಗೊಂಡ 5 ದಿನಗಳಲ್ಲಿ ಕಳಪೆ ಕಾಮಗಾರಿಯ ಅಸಲಿ ಕಥೆ ಬಟ ಬಯಲಾದ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ ಸ್ವಾಮ್ಯದ ತುಮಕೂರು ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಿದ 62.70 ಲಕ್ಷ ರೂಗಳ ಸಾರ್ವಜನಿಕರ ತೆರಿಗೆ ಹಣದ ನೂತನ ಉಪ ನೋಂದಣಾಧಿಕಾರಿ ಕಚೇರಿ ಕಟ್ಟಡ ಉದ್ಘಾಟನಾ ಭಾಗ್ಯ ಕಳೆದ ಬುಧವಾರವಷ್ಟೆ ದೊರೆತಿದ್ದು ಎನ್ನುವುದು ವಿಪರ್ಯಾಸದ ಸಂಗತಿ.
ಗುಬ್ಬಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಉಪ ನೋಂದಣಾಧಿಕಾರಿ ಕಚೇರಿ ಸಾರ್ವಜನಿಕರ ಉಪಯೋಗಕ್ಕೂ ಮುನ್ನ ಕಟ್ಟಡದ ಗೋಡೆಗಳಲ್ಲಿ ಮಳೆಯ ನೀರು ಜಿನುಗುತ್ತಿದ್ದು ಕಟ್ಟಡದ ಹೊರಭಾಗದಲ್ಲಿ ನೆಲಹಾಸುಗೆ ಅಳವಡಿಸಿರುವ ಟೈಲ್ಸ್ ಸಂಪೂರ್ಣ ಹಾಳಾಗಿರುವ ಘಟನೆ ಕಂಡು ಬಂದಿದೆ.
ಕಟ್ಟಡದ ಗೋಡೆಗಳಲ್ಲಿ ನೀರು ಜಿನುಗುತ್ತಿದ್ದು ಸಾರ್ವಜನಿಕರ ಓಡಾಟಕ್ಕೆ ಹಾಕಿರುವ ಟೈಲ್ಸ್ ಕಿತ್ತು ಹೋಗಿ ಕಳಪೆಯಿಂದ ಕೂಡಿದ್ದು ಅಧಿಕಾರಿಗಳ ನಿರ್ಲಕ್ಷ್ಯತನ ಹಾಗೂ ಗುತ್ತಿಗೆದಾರನ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ನೆಲಕ್ಕೆ ಅಳವಡಿಸಿರುವ ನೆಲಹಾಸು ಕೇವಲ 5 ದಿನಗಳಲ್ಲಿ ಕಿತ್ತು ಬಂದಿದೆ. ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಸುಸಜ್ಜಿತ ಒಳ ಚರಂಡಿ ವ್ಯವಸ್ಥೆಯಿಲ್ಲದೇ ಕಟ್ಟಡ ಅವ್ಯವಸ್ಥೆಯಿಂದ ಕೂಡಿದೆ.
ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡಿ ಸಾರ್ವಜನಿಕರಿಗೆ ಉಪಯೋಗವಾಗಲೆಂದು ಕಟ್ಟಡ ನಿರ್ಮಾಣ ಮಾಡುತ್ತದೆ. ಆದರೆ ಗುತ್ತಿಗೆದಾರರು ಮಾತ್ರ ಕಳಪೆ ಕಾಮಗಾರಿ ನಿರ್ಮಾಣ ಮಾಡಿ ಅನುದಾನದ ಹಣವನ್ನು ಕಬಳಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಸದಾ ಜನಜಂಗುಳಿಯಿಂದ ತುಂಬಲಿರುವ ಸಬ್ ರಿಜಿಸ್ಟ್ರಾರ್ ಕಛೇರಿಯ ನೂತನ ಕಟ್ಟಡದ ಕಾಮಗಾರಿಯನ್ನು ನೀರಲ್ಲಿ ಹೋಮ ಮಾಡಿದಂತೆ ಕಳಪೆ ಕೆಲಸ ನಿರ್ವಹಣೆ ಮಾಡಿದ ತುಮಕೂರು ನಿರ್ಮಿತಿ ಕೇಂದ್ರದ ಗುತ್ತಿಗೆದಾರರು.
ಇಂತಹ ಅವ್ಯವಸ್ಥೆಗೆ ಕಾರಣರಾದ ಅಧಿಕಾರಿಗಳು ಹಾಗೂ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಬೇಕು.ಆಗಲಾದರೂ ಮುಂದಿನ ದಿನಗಳಲ್ಲಿ ಸುಧಾರಣೆಯನ್ನು ಕಾಣಬಹುದು ಎಂಬುದು ಪಟ್ಟಣದ ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ.
ನೆಲಕ್ಕೆ ಅಳವಡಿಸಿರುವ ಟೈಲ್ಸ್ ಗಳು ಕಿತ್ತು ಹೋಗಿ ಕೆಲಸ ಕಳಪೆಯಿಂದ ಕೂಡಿರುವುದನ್ನು ಸ್ಥಳಕ್ಕೆ ಭೇಟಿ ನೀಡಿ ಗಮನಿಸಲಾಗಿದೆ.ಗುತ್ತಿಗೆ ಪಡೆದ ಇಂಜಿನಿಯರ್ ಮತ್ತು ಗುತ್ತಿಗೆದಾರರ ಜೊತೆ ಮಾತನಾಡಿದ್ದು ಕ್ರಮ ವಹಿಸಿ ಕೂಡಲೇ ಸರಿಪಡಿಸಲು ತಿಳಿಸಲಾಗಿದೆ.
-ಸುಜಾತ, ಉಪ ನೋಂದಣಾಧಿಕಾರಿ ಗುಬ್ಬಿ.
ಸಾರ್ವಜನಿಕರ ತೆರಿಗೆ ಹಣದ ಅನುದಾನವನ್ನು ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ನಿರ್ವಹಣೆ ಮಾಡದೇ ಕಳಪೆ ಕಾಮಗಾರಿ ಮಾಡಿ ಹಣ ಕಬಳಿಸಲು ಮುಂದಾಗುವುದು ಸರಿಯಲ್ಲ ಇಂತಹ ಗುತ್ತಿಗೆದಾರರ ಪರವಾನಗಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.
-ನಾಗಸಂದ್ರ ವಿಜಯ್ ಕುಮಾರ್. ಸಾಮಾಜಿಕ ಹೋರಾಟಗಾರ.
ವರದಿ- ದೇವರಾಜ್
|
|