ಕುಣಿಗಲ್
3 ಲಕ್ಷ ರೂ ಗಳ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಕಟ್ಟಡ ದುರಸ್ತಿ : ಕಳಪೆ ಕಾಮಗಾರಿಯಿಂದ ಮತ್ತೆ ಸೋರಿಕೆ ಸಾರ್ವಜನಿಕರ ಆರೋಪ

ಕುಣಿಗಲ್ : ಇತ್ತೀಚೆಗೆ ಲೋಕೋಪಯೋಗಿ ಇಲಾಖೆ ಸುಮಾರು 3 ಲಕ್ಷ ರೂ ಗಳ ವೆಚ್ಚದಲ್ಲಿ ದುರಸ್ತಿ ಪಡಿಸಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಕಚೇರಿ ಮಳೆಯಿಂದ ಸೋರಿ ಕಛೇರಿ ಗೋಡೆ ತುಂಬಾ ತೇವಗೊಂಡು ಕಚೇರಿ ಒಳಗೂ ನೀರು ನಿಂತಿರುವುದು ಕಂಡುಬಂದಿದೆ ಎಂದು ಕಚೇರಿಗೆ ಬರುವ ಸಾರ್ವಜನಿಕರು ಆರೋಪಿಸಿದ್ದಾರೆ.
ಪಟ್ಟಣದ ಲೋಕೋಪಯೋಗಿ ಕಚೇರಿ ಆವರಣದಲ್ಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಕಟ್ಟಡ ಈ ಮೊದಲು ಮಳೆ ಬಂದಾಗ ಸೋರುತ್ತಿತ್ತು ಹಾಗೂ ಗೋಡೆಗಳಲ್ಲಿ ವಿದ್ಯುತ್ ಶಾಕ್ ಒಡೆಯುತ್ತಿತ್ತು ಈ ಸಂಬಂಧ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡ ಹಿನ್ನೆಲೆಯಲ್ಲಿ ತುಮಕೂರು ಲೋಕಾಯುಕ್ತ ಅಧಿಕಾರಿ ವಿಜಯ್ ಕುಮಾರ್ ಅವರ ತಂಡ ಸ್ಥಳಕ್ಕೆ ಬಂದು ಪರಿಶೀಲಿಸಿ ಕಚೇರಿಯನ್ನು ಬೇಗ ದುರಸ್ತಿಪಡಿಸುವಂತೆ ಲೋಕೋಪಯೋಗಿ ಅಧಿಕಾರಿಗಳ ಗಮನ ಸೆಳೆದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಮಾರು 3 ಲಕ್ಷ ರೂ ಗಳ ವೆಚ್ಚದಲ್ಲಿ ದುರಸ್ತಿಪಡಿಸಿತ್ತು. ಆದರೆ ದುರಸ್ತಿ ಕಾಮಗಾರಿ ಹಾಗೂ ವಿದ್ಯುದೀಕರಣ ಕಾಮಗಾರಿ ಗುಣಮಟ್ಟದಲ್ಲಿ ಇಲ್ಲದೇ ಇರುವುದರಿಂದ ಕಟ್ಟಡ ಮತ್ತೆ ಮಳೆ ಬಂದರೆ ಸೋರಿ ಕಛೇರಿಯಲ್ಲಿ ನೀರು ನಿಂತುಕೊಳ್ಳುತ್ತದೆ ಹಾಗೂ ವಿದ್ಯುತ್ ಗ್ರೌಂಡಿಂಗ್ ಗುಂಡಿ ಮಾಡದೇ ಇರುವುದು ತಿಳಿದು ಬಂದಿದೆ. ಒಟ್ಟಾರೆ ಕಚೇರಿ ದುರಸ್ತಿಯನ್ನು ಇಲಾಖೆಯ ಕ್ರಿಯಾಯೋಜನೆ ಪ್ರಕಾರ ಕಾಮಗಾರಿ ನಡೆಸಿಲ್ಲ ಎಂದು ಕಚೇರಿಗೆ ಬರುವ ಸಾರ್ವಜನಿಕರು ಆರೋಪಿಸಿದ್ದಾರೆ. ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಎಸ್ಟಿಮೇಟ್ ಪ್ರಕಾರ ಸ್ಥಳ ಪರಿಶೀಲನೆ ನಡೆಸಿ ತಪ್ಪು ಕಂಡು ಬಂದರೆ ನಿರ್ವಹಣೆ ಮಾಡುವ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಗಮನ ಸೆಳೆದು ಸೋರುತ್ತಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಚೇರಿಯನ್ನು ಸರಿಪಡಿಸಬೇಕೆಂದು ತುಮಕೂರು ಲೋಕಾಯುಕ್ತ ಅಧಿಕಾರಿಗಳಲ್ಲಿ ಸಾರ್ವಜನಿಕರು ಮನವಿ ಮಾಡಿದ್ದಾರೆ.