ಮಾದಿಹಳ್ಳಿ ಪಿ.ಡಿ.ಓ. ಅಮಾನತ್ತಿಗೆ ಒತ್ತಾಯಿಸಿ ಗ್ರಾ.ಪಂ. ಸದಸ್ಯರ ಅಹೋರಾತ್ರಿ ಧರಣಿ
ತುರುವೇಕೆರೆ : ಚುನಾಯಿತ ಗ್ರಾ.ಪಂ. ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಪಿ.ಡಿ.ಓ. ಅಮಾನತ್ತಿಗೆ ಒತ್ತಾಯಿಸಿ ನಾಲ್ವರು ಗ್ರಾ.ಪಂ. ಸದಸ್ಯರು ತಾಲೂಕಿನ ಮಾದಿಹಳ್ಳಿ ಗ್ರಾ.ಪಂ. ಎದುರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾದಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಆನೇಮೆಳೆ ವಾರ್ಡ್ನ ಸದಸ್ಯ ನಂಜುಂಡಪ್ಪ ಮಾತನಾಡಿ ಬುಧವಾರ ಗ್ರಾ.ಪಂ. ಅದ್ಯಕ್ಷರಾದ ಗಿರೀಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆದಿತ್ತು. ಸದರಿ ಸಭೆಯಲ್ಲಿ ಪಾಲ್ಗೊಂಡಿದ್ದ ನಾನು ಈ ಹಿಂದಿನ ಸಭಾ ನಡವಳಿ ಮಾಹಿತಿ ಹಾಗೂ 15 ನೇ ಹಣಕಾಸು ಯೋಜನೆಯ ಮಾಹಿತಿ ಕೇಳಿದೆನು. ಮಾಹಿತಿ ನೀಡದೇ ಸದಸ್ಯರ ಗಮನಕ್ಕೆ ತಾರದೇ ಸಭೆಯನ್ನು ಮೊಟಕುಗೊಳಿಸಿ ಪಿ.ಡಿ.ಓ. ಹಾಗೂ ಅದ್ಯಕ್ಷರು ಹೊರ ನಡೆದಿದ್ದಾರೆ ಎಂದು ದೂರಿದರು.
ಪಿ.ಡಿ.ಓ. ಲಿಂಗರಾಜೇಗೌಡರು ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲವಾಗಿದ್ದು ಗ್ರಾ.ಪಂ. ವ್ಯಾಪ್ತಿಯ ಜನತೆಗೆ ಅಲಭ್ಯವಾಗಿದ್ದಾರೆ. ಇದರಿಂದಾಗಿ ಪಂಚಾಐಇತಿ ವ್ಯಪ್ತಿಯ ಅಭಿವೃದ್ದಿ ಕಾರ್ಯಗಳು ಕುಂಠಿತವಾಗಿವೆ.ಚುನಾಯಿತ ಸದಸ್ಯರನ್ನು ತನ್ನ ಸ್ವಾರ್ಥಕ್ಕಾಗಿ ಎರಡು ಬಣಗಳನ್ನಾಗಿ ಮಾಡಿದ್ದಾರೆ.ಒಡೆದು ಆಳುವ ನೀತಿ ಅನುಸರಿಸುತ್ತಿರುವ ಪಿ.ಡಿ.ಓ. ಅವರನ್ನು ಅಮಾನತು ಮಾಡುವವರೆಗೂ ಪಂಚಾಯಿತಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ತಿಳಿಸಿದರು.
ಸದಸ್ಯರಾದ ಶೃತಿ. ಅನಸೂಯ, ಕಾಳಮ್ಮ ಮಾತನಾಡಿ ಪಿ.ಡಿ.ಓ. ಸದಸ್ಯ ನಂಜುಂಡಪ್ಪ ರವರು ಕೇಳಿದ ಮಾಹಿತಿ ನೀಡಲಿಲ್ಲ, ಸದಸ್ಯರನ್ನು ಅಗೌರವದಿಂದ ಕಾಣುವ ಪಿ.ಡಿ.ಓ. ಲಿಂಗರಾಜಪ್ಪ ಅಮಾನತ್ತಿಗೆ ಆಗ್ರಹಿಸಿ ಸದಸ್ಯರಾದ ನಂಜುಂಡಪ್ಪ ನಡೆಸುವ ಅಹೋರಾತ್ರಿ ಧರಣಿಗೆ ನಾವೂ ಸಹ ಸಾಥ್ ನೀಡುತ್ತೆವೆ ಎಂದು ಒಕ್ಕೊರಲಿನಿಂದ ಹೇಳಿದರು.