ರಸ ಗೊಬ್ಬರ ಕೃತಕ ಅಭಾವಕ್ಕೆ ಸಿಲುಕಿಸುವವರ ವಿರುದ್ಧ ಕಠಿಣ ಕ್ರಮ : ಕೃಷಿ ಸಚಿವ ಬಿ.ಸಿ.ಪಾಟೀಲ್
'ಕೋಟಿ ವೃಕ್ಷಾರೋಪಣ' ಕಾರ್ಯಕ್ರಮಕ್ಕೆ ಚಾಲನೆ
ಗುಬ್ಬಿ : ಪ್ರಸ್ತುತ ಅಗತ್ಯ ರಸ ಗೊಬ್ಬರವನ್ನು ಕೃತಕ ಅಭಾವಕ್ಕೆ ಸಿಲುಕಿಸಿ ಬೆಲೆ ಹೆಚ್ಜಿಸುವ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಭಾವ ಸೃಷ್ಟಿಸಿದವರ ಪರವಾನಗಿ ಕೂಡಲೇ ರದ್ದು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ತಾಲ್ಲೂಕಿನ ಚೇಳೂರು ಹೋಬಳಿ ಸಾತೇನಹಳ್ಳಿ ಗೇಟ್ ಬಳಿಯ ನರ್ಸರಿಯಲ್ಲಿ ಜಿಲ್ಲಾ ಪಂಚಾಯಿತಿ, ಜಲಾನಯನ ಯೋಜನೆ ಹಾಗೂ ಕೃಷಿ ಇಲಾಖೆ ಆಯೋಜಿಸಿದ್ದ ‘ಕೋಟಿ ವೃಕ್ಷಾರೋಪಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಸ ಗೊಬ್ಬರ 18,391 ಮೆಟ್ರಿಕ್ ಟನ್ ಅವಶ್ಯವಿದ್ದು, ಮುಂಗಾರಿಗೆ 27,943 ಮೆಟ್ರಿಕ್ ಟನ್ ದಾಸ್ತಾನು ಮಾಡಲಾಗಿದೆ. ಈ ತಿಂಗಳಲ್ಲಿ 10,600 ಮೆಟ್ರಿಕ್ ಟನ್ ಮಾರಾಟವಾಗಿದೆ ಎಂದು ವಿವರಿಸಿದರು.
ಬೆಲೆ ಹೆಚ್ಚಿಸುವ ಹುನ್ನಾರ ಮಾಡಿರುವವರ ವಿರುದ್ಧ ಕ್ರಮಕ್ಕೆ ನಮ್ಮ ಇಲಾಖೆ ಜಾಗೃತಿದಳ ಮೂಲಕ ದೂರು ಬಂದಲ್ಲಿ ಕ್ರಮ ವಹಿಸಿ ಲೆಸೆನ್ಸ್ ರದ್ದು ಮಾಡಲಾಗುತ್ತದೆ. ಕಳಪೆ ಬೀಜ ಮಾರಾಟದ ಬಗ್ಗೆ ಸಹ ದೂರುಗಳು ಬಂದಲ್ಲಿ ರೇಡ್ ಮಾಡಿ ಕೇಸು ದಾಖಲು ಮಾಡಲಾಗುತ್ತಿದೆ. ಈವರೆವಿಗೂ 700 ಕೇಸು ದಾಖಲು ಮಾಡಿದ್ದು, 248 ಪರವಾನಗಿ ರದ್ದು ಮಾಡಲಾಗಿದೆ ಎಂದ ಅವರು ಪ್ರತಿ ಅಂಗಡಿಯಲ್ಲಿ ದರಪಟ್ಟಿ ಹಾಕಲು ಸೂಚಿಸಲಾಗಿದೆ. ಸಿಬ್ಬಂದಿ ಕೊರತೆ ನೀಗಿಸಲು 300 ಹುದ್ದೆ ನೇಮಕಕ್ಕೆ ಕ್ರಮವಹಿಸಲಾಗಿದೆ. ಈ ಜೊತೆಗೆ ಸ್ಥಳೀಯ ರೈತರ ಮಾವಿನಹಣ್ಣು ಮಾರಾಟಕ್ಕೆ ಇಲ್ಲಿಯೇ ಜ್ಯೂಸ್ ಕಾರ್ಖಾನೆಗೆ ತೋಟಗಾರಿಕೆ ಸಚಿವರೊಟ್ಟಿಗೆ ಚರ್ಚಿಸುವ ಭರವಸೆ ನೀಡಿದರು.
ಜಲಾನಯನ ಪ್ರದೇಶ ಗುರುತಿಸಿ ಹಸಿರು ಬೆಳೆಸುವ ನಿಟ್ಟಿನಲ್ಲಿ ಒಂದು ಕೋಟಿ ವೃಕ್ಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಡೀ ರಾಜ್ಯದಲ್ಲಿ 80 ಲಕ್ಷ ಸಸಿ ಬೆಳೆಸಲಾಗಿದೆ. ಈ ಸಾತೇನಹಳ್ಳಿಯಲ್ಲಿ 2.5 ಲಕ್ಷ ಸಸಿ ವಿತರಣೆಗೆ ಸಿದ್ಧವಿದೆ. ನಾಡು ನಿರ್ಮಾಣಕ್ಕೆ ಕಡಿದ ಕಾಡು ಈಗ ಅನಿವಾರ್ಯ ಅವಶ್ಯವಿದೆ. ಚೆಕ್ ಡ್ಯಾಂ ನಿರ್ಮಾಣಕ್ಕೆ ಒತ್ತು ನೀಡಿ ಈಗಾಗಲೇ ಭೂಮಿಗೆ ನೀರು ಇಂಗಿಸುವ ಕೆಲಸಕ್ಕೆ ಸರ್ಕಾರ 640 ಕೋಟಿ ರೂ ನೀಡಿದೆ ಎಂದ ಅವರು ರೈತರ ಸದೃಢತೆಗೆ ವಿಶೇಷ ಸೌಲಭ್ಯ ಒದಗಿಸಲಾಗುತ್ತದೆ. ಶೇ.50 ರಷ್ಟು ರೈತ ಮಕ್ಕಳ ಉನ್ನತ ವ್ಯಾಸಂಗಕ್ಕೆ 11 ಸಾವಿರ ಪ್ರೋತ್ಸಾಹ ಧನ ನೀಡಲಾಗಿದೆ. ರೈತ ಕುಟುಂಬದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ 2 ಸಾವಿರ ರೂ ವಿದ್ಯಾರ್ಥಿ ವೇತನ ಸಹ ನೀಡಲಾಗುತ್ತಿದೆ ಎಂದರು.
ಸAಸದ ಜಿ.ಎಸ್.ಬಸವರಾಜು ಮಾತನಾಡಿ ಪರಿಸರ ಕಾಳಜಿ ಸುಲಭದ ಮಾತಲ್ಲ. ಇದುವರೆಗೂ ನೆಟ್ಟ ಸಸಿಗಳ ಪೈಕಿ ಕೇವಲ ಶೇ.10 ರಷ್ಟು ಮಾತ್ರ ಉಳಿದಿವೆ. ಈ ಹಿಂದೆ ಹಿರಿಯರು ಬೆಳೆಸಿದ ಎಲ್ಲಾ ಮರಗಳನ್ನು ಕಡಿದು ಈಗ ಪರಿತಪಿಸುತ್ತಿದ್ದೇವೆ. ಈ ಪರಿಸರ ರಕ್ಷಣೆಗೆ ಅರಣ್ಯ ಇಲಾಖೆ ಚುರುಕಿನ ಕೆಲಸ ಮಾಡಬೇಕಿದೆ. ಈ ಜೊತೆಗೆ ಸಾರ್ವಜನಿಕರ ಸಹಯೋಗ ಅಗತ್ಯವಿದೆ. ಆ ಕಾರಣ ಪ್ರತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ತಲಾ ಎರಡು ಸಸಿ ಬೆಳೆಸಿ ಪೋಷಿಸಲು ಸಹಾಯ ನೀಡಿದಲ್ಲಿ ಹಸಿರು ಕ್ರಾಂತಿಗೆ ಮುನ್ನುಡಿ ಆಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಜಲಾನಯನ ಇಲಾಖೆಯ ಆಯುಕ್ತ ವೆಂಕಟೇಶ್ ಮಾತನಾಡಿ ಆರೋಗ್ಯ ಸಮಾಜಕ್ಕೆ ಈ ಕಾರ್ಯಕ್ರಮ ಉತ್ತಮ ಸಹಕಾರಿ. ಮಾಲಿನ್ಯ ರಹಿತ ಜಗತ್ತು ಕಟ್ಟಲು ಈ ಪರಿಸರ ದಿನಾಚರಣೆ 1971 ರಲ್ಲಿ ಆರಂಭಿಸಲಾಯಿತು. ನಾವು ಸಹ ಒಂದು ಕೋಟಿ ವೃಕ್ಷ ಕಾರ್ಯಕ್ರಮ ನಡೆಸಿ ಬಹುಕಾಲ ಬಾಳಿಕೆ ಜಾತಿಯ ಸಸಿಗಳನ್ನು ವಿತರಿಸಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಬಳಸಿ ಸಸಿ ಪೋಷಿಸಿ ಜೊತೆಗೆ ಸುಸ್ಥಿರ ಕೃಷಿ ಲಾಭದಾಯಕ ಕೃಷಿಯಾಗಿಸಲು ರೈತರು ಬದ್ಧರಾಗಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಸಿಗಳು, ಬಿತ್ತನೆಬೀಜಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಆಯುಕ್ತ ಶರತ್, ಅಪರ ಆಯುಕ್ತ ವೆಂಕಟರೆಡ್ಡಿ ಪಾಟೀಲ್, ಜಂಟಿ ನಿರ್ದೇಶಕಿ ರಾಜಸುಲೋಚನಾ, ತಹಸೀಲ್ದಾರ್ ಬಿ.ಆರತಿ, ಮೀನುಗಾರಿಕೆ ಉಪ ನಿರ್ದೇಶಕ ವಿಶ್ವನಾಥ್, ತಾಪಂ ಇಓ ನರಸಿಂಹಯ್ಯ, ಕೃಷಿ ಸಹಾಯಕ ನಿರ್ದೇಶಕ ಜಗನ್ನಾಥಗೌಡ ಇತರರು ಉಪಸ್ಥಿತರಿದ್ದರು.