ನವೀನ ತಂತ್ರಜ್ಞಾನ ಬಳಕೆಯಿಂದ ಭವ್ಯ ಭಾರತ ಮತ್ತು ವಿಜ್ಞಾನಯುತ ಭಾರತ ನಿರ್ಮಾಣ ಸಾಧ್ಯ : ಡಾ. ರಾಯ್ ಪಿ. ಪೈಲಿ
ತುಮಕೂರು : ಪ್ರಸ್ತುತ ದಿನಗಳಲ್ಲಿ ಹೊಸ ಹೊಸ ತಂತ್ರಜ್ಞಾನ ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ಅಸ್ಸಾಂನ ಗುವ್ಹಾಟಿಯ ಐಐಟಿ ಕಾಲೇಜಿನ ಪ್ರೊಫೆಸರ್ ಡಾ. ರಾಯ್ ಪಿ. ಪೈಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಟೆಕ್ನಿಷಿಯಮ್-2022 ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳು ಬಹಳ ಆಸಕ್ತಿ ವಹಿಸಿ ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತಂತ್ರಜ್ಞಾನದ ಬಗ್ಗೆ ಒಲವು ತೋರಬೇಕು ಎಂದು ಅವರು ಹೇಳಿದರು.
ನವೀನ ತಂತ್ರಜ್ಞಾನ ಬಳಕೆಯಿಂದ ಭವ್ಯ ಭಾರತ ಮತ್ತು ವಿಜ್ಞಾನಯುತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ವಿದ್ಯಾರ್ಥಿಗಳ ಹವ್ಯಾಸಿ ಮಾದರಿ ಪ್ರದರ್ಶನ ಉದ್ಘಾಟಿಸಿದ ಧಾರವಾಡದ ಐಐಟಿಯ ಪ್ರೊ. ಡಾ ಎಸ್.ಆರ್. ಮಹಾದೇವ ಪ್ರಸನ್ನ ಮಾತನಾಡಿ, ಹೊಸ ಹೊಸ ಆಲೋಚನೆಗಳೊಂದಿಗೆ ಯುವ ಸಮುದಾಯ ತಂತ್ರಜ್ಞಾನದ ಸದ್ಭಳಕೆ ಮಾಡಿಕೊಂಡು, ಪ್ರಯೋಗತ್ಮಕ ಮತ್ತು ಸಮುದಾಯ ಸ್ನೇಹಿ ಅನ್ವೇಷಣೆಗಳತ್ತ ಗಮನ ಹರಿಸಬೇಕು ಎಂದರು.
21ನೇ ಶತಮಾನವನ್ನು ಭಾರತೀಯ ತಂತ್ರಜ್ಞಾನ ಯುಗವನ್ನಾಗಿಸಲು ಯುವ ಸಮೂಹ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರಾದ ಡಾ. ಚೆನ್ನಬಸಪ್ಪ ಮಾತನಾಡಿ, ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೆಕ್ನಿಷಿಯಮ್ ನಡೆಸಿಕೊಂಡು ಬರುತ್ತಿದ್ದು, ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ಸಿದ್ದಪಡಿಸಿ ತಮ್ಮ ನೈಪುಣ್ಯತೆಯನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ ಎಂದರು.
ಪ್ರಾoಶುಪಾಲರಾದ ಡಾ. ಎಸ್.ವಿ. ದಿನೇಶ್ ಮಾತನಾಡಿ, ಸಂಸ್ಥೆಯು ತಂತ್ರಜ್ಞಾನದ ಬೆಳವಣಿಗೆಗೆ ಕೊಡುತ್ತಿರುವ ಕೊಡುಗೆ ಮತ್ತು ಅದಕ್ಕಾಗಿ ನಡೆಸುತ್ತಿರುವ ಹಲವು ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಸಿಇಓ ಡಾ. ಶಿವಕುಮಾರಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರವೃತ್ತಿಯ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳ ಸಹಕಾರಿಯಾಗಿದ್ದು, ಸಂಸ್ಥೆಯು ವಿದ್ಯಾರ್ಥಿಗಳಿಗೆ ಪರಿಪೂರ್ಣ ಶಿಕ್ಷಣ ನೀಡುವತ್ತ ಸದಾ ಮುಂಚೂಣಿಯಲ್ಲಿದೆ ಎಂದರು.
ಇದೇ ಸಂದರ್ಭದಲ್ಲಿ 2021ರ ಯುಪಿಎಸ್ಸಿ ಪರೀಕ್ಷೆಯಲ್ಲಿ 308ನೇ ರ್ಯಾಂಕ್ ಪಡೆದಿರುವ ಸಂಸ್ಥೆಯ ಹಳೇ ವಿದ್ಯಾರ್ಥಿಯಾಗಿರುವ ಅರುಣಾ. ಎಂ ರವರನ್ನು ಗೌರವಿಸಲಾಯಿತು.
ಸಂಸ್ಥೆಯ ಗೌರವ ಸ್ವೀಕರಿಸಿದ ಮಾತನಾಡಿದ ಅರುಣಾ ಅವರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾಮಾಜಿಕ ದೃಷ್ಠಿಕೋನದಿಂದ ಚಿಂತನೆ ನಡೆಸಬೇಕು. ಅದೇ ರೀತಿ ಸಮಾಜದ ಅಭಿವೃದ್ಧಿಗೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಬಳಸಬೇಕು ಎಂದು ಸಲಹೆ ನೀಡಿದರು.
ಸಮಾಜ ಸೇವೆ ಮಾಡಲು ಸಿವಿಲ್ ಸೇವೆಗಳಿಗೆ ಹೋಗಬೇಕು ಎಂದೇನಿಲ್ಲ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಹ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದು. ಸಮಾಜದ ಅಭಿವೃದ್ಧಿ ಪೂರಕವಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಬೇಕು. ಈ ಮೂಲಕವೂ ಸಮಾಜ ಸೇವೆ ಮಾಡಬೇಕು.
ಸುಭದ್ರ ದೇಶ ಕಟ್ಟುವ ಕಾರ್ಯಕ್ಕೆ ಇಂದಿನ ವಿದ್ಯಾರ್ಥಿ ಯುವಜನರು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಟೆಕ್ನಿಷಿಯಮ್-22 ಅಧ್ಯಕ್ಷ ಡಾ. ಕೆ ಸಿ ನರಸಿಂಹಮೂರ್ತಿ, ಸಂಯೋಜಕರಾದ ಡಾ. ಚಂದ್ರಿಕಾ ಕೆ.ಎನ್., ವಿದ್ಯಾರ್ಥಿ ಪ್ರತಿನಿಧಿಗಳಾದ ಚಕ್ಷು ಕೆ.ಎಂ., ಚಿರಾಗ್ ಪಿ, ವಿನಯ್ ಪ್ರಸಾದ್, ನಿಖಿಲ್ ಟಿ.ಆರ್. ಮತ್ತಿತರರು ಉಪಸ್ಥಿತರಿದ್ದರು.
ಟೆಕ್ನಿಷಿಯಮ್-22ರಲ್ಲಿ ಹವ್ಯಾಸಿ ಮಾದರಿ ಪ್ರದರ್ಶನ, ರೊಬೋಟಿಕ್ಸ್, ಲೇಖನ ಪ್ರಸ್ತುತಿ, ತಾಂತ್ರಿಕ ರಸಪ್ರಶ್ನೆ, ತಾಂತ್ರಿಕ ಚರ್ಚೆ, ಹಾರ್ಡೆ್ವಂರ್ ಡಿಬಗ್ಗಿಂಗ್ ಮುಂತಾದ ಸ್ಪರ್ಧೆಗಳಿದ್ದು, ರಾಜ್ಯದ ವಿವಿಧ ವಿದ್ಯಾಲಯಗಳಿಂದ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.