ಇಲಾಖೆಯ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ಒದಗಿಸಿದಾಗ ಮಾತ್ರ ನಿವೃತ್ತಿಯ ಬಳಿಕವೂ ಜನಮಾನಸದಲ್ಲಿ ಉಳಿಯಲು ಸಾಧ್ಯ : ನಿ”ಮುಖ್ಯ ಇಂಜಿನಿಯರ್ ಆದಿನಾರಾಯಣ್
ನಿವೃತ್ತರಾದ ಮುಖ್ಯ ಇಂಜಿನಿಯರ್ ಆದಿನಾರಾಯಣ್ ಅವರಿಗೆ ಬೀಳ್ಕೊಡುಗೆ ಸಮಾರಂಭ
ತುಮಕೂರು : ಕೆಪಿಟಿಸಿಎಲ್ ತುಮಕೂರು ವಲಯದಲ್ಲಿ ಕಾರ್ಯನಿರ್ವಹಿಸಿ ವಯೋ ನಿವೃತ್ತರಾದ ಮುಖ್ಯ ಇಂಜಿನಿಯರ್ ಆದಿನಾರಾಯಣ ಅವರಿಗೆ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಬೆಸ್ಕಾಂ ಮುಖ್ಯ ಇಂಜಿನಿಯರ್ ಗೋವಿಂದಪ್ಪ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಇರುವವರಿಗೆ ನಿವೃತ್ತಿ ಎಂಬುದು ಸರ್ವೆ ಸಾಮಾನ್ಯ. ಮನುಷ್ಯನಿಗೆ ಹುಟ್ಟು-ಸಾವು ಹೇಗೋ ಅದೇ ರೀತಿಯ ಸರ್ಕಾರಿ ನೌಕರರಿಗೆ ನಿವೃತ್ತಿ ಎಂಬುದು ಖಚಿತ ಎಂದರು.
ನಮ್ಮ ಸೇವಾವಧಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಸರ್ಕಾರ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದಾಗ ಮಾತ್ರ ಸರ್ಕಾರಿ ಸೇವೆ ಸಾರ್ಥಕತೆ ಪಡೆಯಲಿದೆ ಎಂದು ಅವರು ಹೇಳಿದರು.
ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಆದಿನಾರಾಯಣ್ ಅವರು ಸುದೀರ್ಘ ಸೇವೆ ಸಲ್ಲಿಸುವ ಮೂಲಕ ಉತ್ತಮ ಕಾರ್ಯನಿರ್ವಹಣೆಗೆ ಹೆಸರಾಗಿದ್ದಾರೆ. ಇವರ ಆದರ್ಶ, ಮಾರ್ಗದರ್ಶನ ಕಿರಿಯ ಅಧಿಕಾರಿಗಳು ಮತ್ತು ನೌಕರರಿಗೆ ಅಗತ್ಯವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯ ಇಂಜಿನಿಯರ್ ಆದಿನಾರಾಯಣ್ ಅವರು, ಸರ್ಕಾರಿ ಸೇವೆಗೆ ಸೇರುವವರು ನಿಸ್ವಾರ್ಥ ಮನೋಭಾವ ಹೊಂದಿರಬೇಕು. ಸಾರ್ವಜನಿಕರಿಗೆ ಇಲಾಖಾ ಸೌಲಭ್ಯಗಳನ್ನು ಹಾಗೂ ಸೇವೆಯನ್ನು ಪ್ರಾಮಾಣಿಕವಾಗಿ ಒದಗಿಸಿದಾಗ ಮಾತ್ರ ನಾವು ನಿವೃತ್ತಿಯ ಬಳಿಕವೂ ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದರು.
ನನ್ನ ಇಷ್ಟು ವರ್ಷಗಳ ಸೇವಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕರಿಸಿದ ಹಿರಿಯ, ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್, ಜಗದೀಶ್, ಲತಾ, ಬೆಂಗಳೂರು ಮೆಟ್ರೋ ಇಂಜಿನಿಯರ್ ನಟರಾಜು, ವೆಂಕಟರತ್ನ, ಶೋಭಾ ಪಾಟೀಲ್, ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.