ರಾಷ್ಟ್ರಕವಿ ಕುವೆಂಪುರನ್ನು ನಿಂದಿಸಿರುವ ರೋಹಿತ್ ಚಕ್ರತೀರ್ಥ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ
ತುರುವೇಕೆರೆ : ರಾಜ್ಯದಲ್ಲಿ ಸಮಾಜಕ್ಕೆ ಅಪಥ್ಯವಾದದನ್ನು ಬಲವಂತವಾಗಿ ಹೇರುವ ಕೆಟ್ಟ ಸಂಪ್ರದಾಯ ಆರಂಭಗೊಂಡಿರುವುದು ಈ ಹೊತ್ತಿನ ಬಹುದೊಡ್ಡ ಕೇಡು ಎಂದು ವಿಶ್ವಮಾನವ ವೇದಿಕೆಯ ಅಧ್ಯಕ್ಷ ಪ್ರೋ.ಪುಟ್ಟರಂಗಪ್ಪ ಕಳವಳ ವ್ಯಕ್ತಪಡಿಸಿದರು.
ರಾಷ್ಟ್ರಕವಿ ಕುವೆಂಪುರವರನ್ನು ನಿಂದಿಸಿರುವ ರೋಹಿತ್ ಚಕ್ರತೀರ್ಥ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಪಟ್ಟಣದಲ್ಲಿ ವಿಶ್ವಮಾನವ ವೇದಿಕೆ,ತಾಲೂಕು ಒಕ್ಕಲಿಗರ ಸಂಘ,ಕೆಂಪೇಗೌಡಯುವವೇನೆ, ದ.ಸಂ.ಸ. ರಾಜ್ಯ ರೈತ ಸಂಘ, ಸಿ.ಐ.ಟಿ.ಯು, ಬೀದಿಬದಿ ವ್ಯಾಪಾರಿಗಳ ಸಂಘ ಹಾಗೂ ಆಟೋ ಚಾಲಕ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಾಡಗೀತೆಯನ್ನು ತಿರುಚಿ ಕುವೆಂಪುರವರನ್ನು ಜಾತಿ ನಿಂದನೆ ಮಾಡಿರುವ ರೋಹಿತ್ ಚಕ್ರತೀರ್ಥ ಹಾಗೂ ಲಕ್ಷö್ಮಣ ಆಕಾಶೆ ವಿರುದ್ದ ಸರಕಾರ ಕ್ರಮ ಜರುಗಿಸಲಿ. ಪಠ್ಯಪುಸ್ತಕ ಪರಿಷ್ಕರಣೆಗೆ ಶಿಕ್ಷಣ ತಜ್ಞರನ್ನು ನೇಮಿಸದೇ ಸರಕಾರ ಅಪಚಾರವೆಸಗಿದೆ. ಅರ್ಹತೆಯೇ ಇಲ್ಲದ ರೋಹಿತ್ ಚಕ್ರತೀರ್ಥನನ್ನು ನೇಮಿಸಿ ಮಕ್ಕಳಿಗೆ ಪರೋಕ್ಷವಾಗಿ ವಿಷವುಣ್ಣಿಸುವ ಕೆಲಸಕ್ಕೆ ಮುಂದಾಗಿದೆ ಎಂದು ದೂರಿದ ಅವರು ವಿಶ್ವಮಾನವ ಕುವೆಂಪುರವರನ್ನು ಜಾತಿ ಹೆಸರಿನಲ್ಲಿ ನಿಂದಿಸಿರುವ ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣಆಕಾಶೆ ಯನ್ನು ಬಂಧಿಸಿ ಸರಕಾರ ಗಂಡಸ್ತನ ತೋರಿಸಲಿ ಎಂದು ಹಾಕಿದರು.
ಡಾ.ಚಂದ್ರಯ್ಯ ಮಾತನಾಡಿ ಮನುವಾದವನ್ನು ಮಕ್ಕಳಲ್ಲಿ ಬಿತ್ತಬೇಕೆಂಬ ಕುತಂತ್ರದಿಂದ ಸರಕಾರ ರೋಹಿತ್ ಚಕ್ರತೀರ್ಥನೆಂಬ ಅನರ್ಹನನ್ನು ನೇಮಿಸಿದೆ. ಪಠ್ಯಪುಸ್ತಕ ಪರಿಷ್ಸರಣೆ ಸಮಿತಿಗೆ 10 ಮಂದಿ ಮನುವಾದಿಗಳನ್ನು ನೇಮಿಸುವ ಮೂಲಕ ಸರಕಾರ ಸಮಾಜದ ನೆಮ್ಮದಿಗೆ ಸಂಚಕಾರ ತಂದಿದೆ. ಕನ್ನಡದ ಅಸ್ಮಿತೆ ಕುವೆಂಪು ಬಗ್ಗೆ ಅವಹೇಳನ ಮಾಡಿರುವ ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಸಮಿತಿಯಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.
ತಾಲೂಕು ಒಕ್ಕಲಿಗರ ಸಂಘದ ಧನಪಾಲ್ ಮಾತನಾಡಿ ಇತಿಹಾಸವೇ ಗೊತ್ತಿರದ ಚಕ್ರತೀರ್ಥನಿಂದ ಪಠ್ಯಪುಸ್ತಕ ಪರಿಷ್ಕರಣೆ ಸಾದ್ಯವಾಗದ ಮಾತು, ವಿಶ್ವಮಾನವ ಕುವೆಂಪು ರವರಿಗೆ ಅವಮಾನ ಮಾಡಿರುವ ಚಕ್ರತೀರ್ಥ ನಾಡದ್ರೋಹಿ ಎಂದು ಕಿಡಿಕಾರಿದರು.
ರೋಹಿತ್ ಚಕ್ರತೀರ್ಥ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ರೋಹಿತ್ ಚಕ್ರತೀರ್ಥ ವಿರುದ್ದ ಗೋಷಣೆ ಕೂಗುವ ಮೂಲಕ ಆಕ್ರೋಷ ವ್ಯಕ್ತಪಡಿಸಿದರು. ಆಗ್ರಹ ಪೂರ್ವಕ ಮನವಿಯನ್ನು ತಹಶೀಲ್ದಾರ್ ನಯೀಮುನ್ನಿಸ್ಸಾ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.
ತಾಲೂಕು ಒಕ್ಕಲಿಗರ ಸಂಘಧ ಎಂ.ಎನ್.ಚಂದ್ರೇಗೌಡ, ಶಂಕರಪ್ಪ, ಉಗ್ರೇಗೌಡ, ಡಿ.ಪಿ.ರಾಜು, ರಾಜಣ್ಣ, ಗಂಗಣ್ಣ, ಮಲ್ಲಿಕಾರ್ಜುನ್,ಸಿ.ಐ.ಟಿ.ಯು. ಸತೀಶ್, ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್‌ಗೌಡ, ಚಂದ್ರಯ್ಯ, ಬೀದಿ ಬದಿ ವ್ಯಾಪಾರಿಗಳ ಸಂಘದ ಮಾರುತಿ, ಆಟೋ ಚಾಲಕರ ಸಂಘದ ಗಂಗಾಧರ್, ಪ್ರೊ. ಗಂಗಾಧರದೇವರಮನೆ, ದಾನಿಗೌಡ , ದಂಡಿನಶಿವರಕುಮಾರ್, ತಿಮ್ಮೇಶ್, ಸೇರಿದಂತೆ ಕುವೆಂಪು ಅಭಿಮಾನಿಗಳು ಅನೇಕರು ಪಾಲ್ಗೊಂಡಿದ್ದರು.