ಗುಬ್ಬಿ : ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ತಿಪಟೂರು ಮನೆ ಮೇಲೆ ಕಾಂಗ್ರೆಸ್ ಪಕ್ಷದ ಎನ್ ಎಸ್ ಯು ಐ ಘಟಕ ದಾಳಿ ಮಾಡಿ ಬೆಂಕಿ ಹಚ್ಚಲು ಮುಂದಾಗಿದ್ದು ಖಂಡನೀಯ. ಈ ಘಟನೆಗೆ ಕಾರಣರಾದ ಎಲ್ಲರನ್ನೂ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ತಾಲ್ಲೂಕು ಘಟಕ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತಲುಪಿ ಎನ್ ಎಸ್ ಯು ಐ ಘಟಕದ ದುರ್ವತನೆ ಖಂಡಿಸಿ ಧರಣಿ ನಡೆಸಿದರು. ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನ ಈ ಘಟಕ ಬೇರೆ ಜಿಲ್ಲೆಯಿಂದ ರೌಡಿಗಳನ್ನು ಕರೆಸಿ ಶಿಕ್ಷಣ ಸಚಿವರ ಮನೆಗೆ ಬೆಂಕಿ ಇಡುವ ಕುತಂತ್ರ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೀರ ಕೆಟ್ಟ ನಡವಳಿಕೆ ಎನಿಸಿದೆ. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಲು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಟಿ.ಭೈರಪ್ಪ ಮಾತನಾಡಿ ಧರಣಿ ಮಾಡುವ ನೆಪದಲ್ಲಿ ಸಚಿವರ ಮನೆ ಮೇಲೆ ದಾಳಿ ಮಾಡಿದ್ದು ಖಂಡನೀಯ. ಈ ರೀತಿ ಮನೆಗೆ ಬಂದು ದುಂಡಾವರ್ತನೆ ತೋರಿದ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗವಾದ ಎನ್ ಎಸ್ ಯು ಐ ಘಟಕ ಸಂಪೂರ್ಣ ಕಾಂಗ್ರೆಸ್ ಆಣತಿಯಂತೆ ಕೆಲಸ ಮಾಡುತ್ತದೆ. ಮನೆಗೆ ಬೆಂಕಿ ಹಚ್ಚುವ ಕೆಲಸ ಈ ಹಿಂದೆ ನಡೆದ ಕೆಜಿ ಹಳ್ಳಿ ಪ್ರಕರಣ ಸಾಕ್ಷಿಯಾಗಿದೆ. ಈಗ ಮತ್ತೊಂದು ಘೋರ ಘಟನೆಗೆ ಮುಂದಾದ ಈ ಪ್ರತಿಭಟನಾಕಾರರ ಮನಸ್ಥಿತಿ ಅರಿತುಕೊಳ್ಳಬಹುದಾಗಿದೆ ಎಂದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಮಾತನಾಡಿ ಸಚಿವರ ಮನೆಗೆ ಮುತ್ತಿಗೆ ಮಾಡುವ ಪ್ರತಿಭಟನಾಕಾರರು ಹೊರ ಜಿಲ್ಲೆಯವರು ಎನ್ನಲಾಗಿದೆ. ಈ ಧರಣಿಯ ನೆವದಲ್ಲಿ ದಾಳಿಗೆ ಪೂರ್ವ ನಿಯೋಜಿತ ತಂತ್ರ ಬಳಸಲಾಗಿದೆ. ಈ ಮಟ್ಟದ ಅಪಾಯಕಾರಿ ಕೆಲಸ ಮಾಡಿದ ಸಂಘಟನೆಯನ್ನು ವಜಾಗೊಳಿಸಬೇಕು. ಜೊತೆಗೆ ಕಾರಣಕರ್ತರಾದವರನ್ನು ಬಂಧಿಸಿ ಶಿಕ್ಷಿಸಬೇಕು. ತನಿಖೆಗೆ ಒಳಪಡಿಸಿ ಈ ಕೃತ್ಯದ ಹಿಂದಿದ ಕಾಣದ ಕೈಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ನಂತರ ತಹಸೀಲ್ದಾರ್ ಬಿ.ಆರತಿ ಅವರಿಗೆ ಮನವಿ ನೀಡಿದ ಬಿಜೆಪಿಯ ಎಲ್ಲಾ ಮುಖಂಡರು ಸಚಿವರ ಮನೆ ಮೇಲಿನ ದಾಳಿ ಪ್ರಕರಣ ಸೂಕ್ತ ತನಿಖೆಗೆ ಸರ್ಕಾರಕ್ಕೆ ಒತ್ತಾಯಿಸಿದ ಮನವಿ ಕೂಡಲೇ ತಲುಪಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪಿ.ಬಿ.ಚಂದ್ರಶೇಖರಬಾಬು, ಎಸ್.ಡಿ.ದಿಲೀಪ್ ಕುಮಾರ್, ಯತೀಶ್, ಅ.ನ.ಲಿಂಗಪ್ಪ, ಗಂಗಣ್ಣ, ಜಿ.ಚಂದ್ರಶೇಖರ್, ಸಿದ್ದರಾಮಯ್ಯ, ಎಸ್.ನಂಜೇಗೌಡ, ಜಿ.ಎನ್.ಅಣ್ಣಪ್ಪಸ್ವಾಮಿ, ಜಿ.ಆರ್.ಶಿವಕುಮಾರ್, ಬಸವರಾಜ್, ಪ್ರಕಾಶ್, ಭರತರಾಜ್, ಪ್ರಮೋದ್, ಕಾರ್ತಿಕ್ ಇತರರು ಇದ್ದರು.