
ಗುಬ್ಬಿ : ಪಟ್ಟಣದ ನೂತನ ಉಪ ನೋಂದಣಿ ಕಚೇರಿ ಕಟ್ಟಡ ಸಿದ್ದಗೊಂಡು ವರ್ಷ ಕಳೆದರೂ ಸಾರ್ವಜನಿಕರ ಬಳಕೆಗೆ ಬಾರದೇ ಬಿಕೋ ಅನ್ನುತ್ತಿದೆ.ದಿನ ಕಳೆದಂತೆ ನಿರ್ಲಕ್ಷ್ಯ ತೋರಿದ್ದಲ್ಲಿ ನೂತನ ಕಚೇರಿ ಕಟ್ಟಡ ಪ್ರಯೋಜನಕ್ಕೆ ಬಾರದೇ ಸಾರ್ವಜನಿಕರ ತೆರಿಗೆ ಹಣ ಪೋಲಾಗಲಿದೆ. ಕೂಡಲೇ ಕಚೇರಿ ಬಳಕೆ ಮಾಡುವಂತೆ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಸದ್ಯ ತಾಲ್ಲೂಕು ಕಚೇರಿಯಲ್ಲಿ ಕಿಷ್ಕಿಂದೆಯಂತಹ ಸ್ಥಳವನ್ನು ಕಚೇರಿ ಮಾಡಿಕೊಂಡ ಉಪ ನೋಂದಣಾಧಿಕಾರಿ ಇಲಾಖೆ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡಿದೆ. ನಿತ್ಯ ನೂರಾರು ಮಂದಿ ಬಂದು ಹೋಗುವ ಈ ಕಚೇರಿಯಲ್ಲಿ ಮೂಲ ಸವಲತ್ತು ಒದಗಿಸಲಾಗದೆ ಇರುವುದು ವಿಪರ್ಯಾಸ.
ಪ್ರಸ್ತುತ ಕಚೇರಿಯ ಒಳಭಾಗಗಲ್ಲಿ ಸಿಬ್ಬಂದಿಗಳು ಅಂಟಿಕೊಂಡು ಕುಳಿತು ಕೆಲಸ ಮಾಡುವಂತಾಗಿದೆ. ಹಲವಾರು ವರ್ಷದಿಂದ ಇದೇ ರೀತಿ ನಡೆದ ಈ ಕಚೇರಿಯಲ್ಲಿ ಖಾಯಂ ಯಾರು, ಹೊರ ಗುತ್ತಿಗೆ ಯಾರು ಹಾಗೂ ಮಧ್ಯವರ್ತಿ ಯಾರು ಎಂಬುದೇ ತಿಳಿಯುವುದಿಲ್ಲ. ಎಲ್ಲವೂ ಗಣಕೀಕರಣ ಆದ ನಂತರ ಒಂದೇ ವೇಳೆಗೆ ಆರೇಳು ಕಂಪ್ಯೂಟರ್ ಕೆಲಸ ಮಾಡುತ್ತಿದೆ. ಬ್ಯಾಟರಿ, ಜನರೇಟರ್ ಸೇರಿದಂತೆ ಹಲವು ವಸ್ತುಗಳ ಬಳಕೆ ಮಾಡಲು ಸ್ಥಳವಾಕಾಶವಿಲ್ಲವಾಗಿದೆ ಎಂದು ಪ್ರಜ್ಞಾವಂತರು ದೂರುತ್ತಿದ್ದಾರೆ.
ಉಪ ನೋಂದಣಿ ಕಚೇರಿಯ ನೂತನ ಕಟ್ಟಡಕ್ಕೆ ಮಂಜೂರು ದೊರಕಿ ಸ್ಥಳಕ್ಕೆ ಹುಡುಕಾಟ ನಡೆದು ಹಳೇ ತಾಲ್ಲೂಕು ಕಚೇರಿ ಹಿಂಬದಿ ಸರ್ವೇ ನಂಬರ್ 344 ರಲ್ಲಿ 3 ಗುಂಟೆ ಜಾಗವನ್ನು ನೀಡಲಾಯಿತು. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿ ಮುಖ್ಯ ರಸ್ತೆಯಲ್ಲಿ ಉಳಿಸಿಕೊಳ್ಳಲು ಪಂಚಾಯತ್ ರಾಜ್ ಕಚೇರಿ ಆವರಣದಲ್ಲಿ ಮರಗಳ ಕಡಿಯುವ ಹಂತ ತಲುಪಿತ್ತು. ನಂತರ ಪರಿಸರಪ್ರೇಮಿಗಳ ಹೋರಾಟಕ್ಕೆ ಮಣಿದು ಗುರುತಿಸಿದ ಸ್ಥಳದಲ್ಲೇ ಕಟ್ಟಡ ಕೆಲಸ ಆರಂಭಿಸಲಾಗಿತ್ತು.
ಸರ್ಕಾರಿ ಸ್ವಾಮ್ಯದ ತುಮಕೂರು ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಿ 62.70 ಲಕ್ಷ ರೂಗಳ ನೂತನ ಕಚೇರಿ ಕಟ್ಟಡಕ್ಕೆ ಕೆಲಸ ನಡೆದು ನಾಲ್ಕು ವರ್ಷಗಳ ನಂತರ ಸಿದ್ಧಗೊಂಡ ಕಚೇರಿ ವಿದ್ಯುತ್ ಸಂಪರ್ಕಕ್ಕೆ ದಿನ ಕಳೆದು ವರ್ಷ ಕಳೆದರೂ ಸಾರ್ವಜನಿಕರ ಉಪಯೋಗಕ್ಕೆ ಬಾರದಾಗಿದೆ. ಒಟ್ಟಾರೆ ತಾಲ್ಲೂಕಿನ ಪ್ರಮುಖ ಇಲಾಖೆಯಾಗಿರುವ ಉಪ ನೋಂದಣಾಧಿಕಾರಿ ಕಚೇರಿ ವಿಶಾಲ ಕಟ್ಟಡದಲ್ಲಿ ಆರಂಭವಾಗಿ ಸಾರ್ವಜನಿಕರಿಗೆ ಎಲ್ಲಾ ಸವಲತ್ತು ಒದಗಿಸಲಿ ಎಂಬುದು ಸಾಮಾಜಿಕ ಕಾರ್ಯಕರ್ತರ ಆಶಯವಾಗಿದೆ.
ನೂತನ ಕಚೇರಿ ಉದ್ಘಾಟನೆಗೆ ಕಳೆದ ಫೆಬ್ರವರಿ ಮಾಹೆಯಲ್ಲಿಯೆ ಕಂದಾಯ ಸಚಿವರ ಆಹ್ವಾನಕ್ಕೆ ಪತ್ರ ಬರೆದಿದ್ದು ಇಲ್ಲಿಯವರೆಗೂ ಅನುಮತಿ ದೊರೆತಿಲ್ಲ ಶೀಘ್ರದಲ್ಲಿ ಕಟ್ಟಡ ಲೋಕಾರ್ಪಣೆ ಮಾಡಲು ಕ್ರಮ ವಹಿಸಲಾಗುವುದು.
–ಸುಜಾತಾ.ಉಪ ನೊಂದಣಾಧಿಕಾರಿ ಗುಬ್ಬಿ.
ಕಟ್ಟಡದ ಗುತ್ತಿಗೆ ಪಡೆದು ಕೆಲಸ ಪೂರ್ಣಗೊಂಡು ನೂತನ ಕಚೇರಿ ಸಿದ್ದಗೊಂಡಿದ್ದು ಉಪ ನೋಂದಣಿ ಇಲಾಖೆ ಕಟ್ಟಡ ಹಸ್ತಾಂತರಕ್ಕೆ ಮುಂದಾಗುತ್ತಿಲ್ಲ. ನಾವು ಕಟ್ಟಡ ಬಿಟ್ಟುಕೊಡಲು ಸಿದ್ದವಿದ್ದೇವೆ.
– ರಾಜಶೇಖರ್ ಎ ಇ ಇ. ನಿರ್ಮಿತಿ ಕೇಂದ್ರ ತುಮಕೂರು.