ಸೋರುತಿಹುದು ಶಾಲೆಯ ಮಾಳಿಗಿ…ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ… : ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳು… ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿರುವ ಸರ್ಕಾರಿ ಶಾಲೆಗಳ ಪರಿಸ್ಥಿತಿ ಇಂದು ಅದೋಗತಿ…?
ಗುಬ್ಬಿ : ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಸರ್ಕಾರಿ ಶಾಲೆಗಳ ಮೇಲ್ಚಾವಣಿಗಳು ಸಂಪೂರ್ಣವಾಗಿ ಸೋರುತ್ತಿವೆ. ಯಾವ ಸಮಯದಲ್ಲಿ ಶಾಲೆಯಲ್ಲಿ ಮೇಲ್ಚಾವಣಿ ಕಳಚಿ ಬೀಳಲಿದೆಯೋ ಎಂಬ ಭಯದಲ್ಲಿ ಮಕ್ಕಳಿದ್ದು ಜೀವ ಬಿಗಿ ಹಿಡಿದುಕೊಂಡು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಬ್ಬಿ ತಾಲೂಕಿನಾದ್ಯಂತ ಒಟ್ಟು 406 ಸರ್ಕಾರಿ ಶಾಲೆಗಳಿದ್ದು ಅದರಲ್ಲಿ ಬರೋಬ್ಬರಿ 291 ಶಾಲೆಗಳ ಪೈಕಿ ಒಟ್ಟು 496 ಶಾಲಾ ಕೊಠಡಿಗಳ ಮೇಲ್ಛಾವಣಿಗಳು ಮತ್ತು ಗೋಡೆ ಬಿರುಕಿನಿಂದ ಶಿಥಿಲವಾಗಿದೆ.ಈ ಪೈಕಿ ತಾಲ್ಲೂಕಿನ ನೆರಳೇಕೆರೆ,ಸಮುದ್ರನಕೋಟೆ,ಸಿರಿವಲ್ಲೇಹಳ್ಳಿ,ಕಂಬಯ್ಯನ ಪಾಳ್ಯ, ಯಲಚೀಹಳ್ಳಿ,ಗ್ರಾಮದ ಸರ್ಕಾರಿ ಶಾಲೆಗಳು ಸಂಪೂರ್ಣ ಹಾಳಾಗಿವೆ. ಶತಮಾನ ಕಂಡ ಶಾಲೆಗಳ ನವೀಕರಣದ ದುರಸ್ತಿಗೆ ಇಲಾಖೆ ಅಧಿಕಾರಿಗಳು ಲಕ್ಷ್ಯ ತೋರಿಸದೆ ಇರುವುದರಿಂದ ಮಕ್ಕಳು ಭಯದ ವಾತಾವರಣದಲ್ಲಿಯೇ ಕಲಿಕೆಗೆ ಮುಂದಾಗಿದ್ದು ಶಾಲಾ ಕಟ್ಟಡಗಳು ಶಿಥಿಲವಾಗಿರುವುದರಿಂದ ಮಕ್ಕಳ ದಾಖಲಾತಿಗೆ ಪೋಷಕರು ಹಿಂದೇಟು ಹಾಕುತ್ತಿರುವ ಕಾರಣ ಸದ್ಯ ಐದು ಕಡೆಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿರುವುದು ವಿಪರ್ಯಾಸ. ಶತಮಾನ ಕಂಡ ಶಾಲೆಗಳ ನವೀಕರಣದ ದುರಸ್ತಿಗೆ ಇಲಾಖೆ ಅಧಿಕಾರಿಗಳು ಮುಂದಾಗದೇ ಇರುವುದರಿಂದ ನಿತ್ಯ ಮಕ್ಕಳು ನರಕಯಾತನೆ ಅನುಭವಿಸುವಂತಾಗಿದೆ.
ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಅಳಿಯದೇ ಉಳಿದಿರೋ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಯಾವಾಗ:– ಶಿಕ್ಷಣಕ್ಕೆ ಒತ್ತು ನೀಡಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಇಲ್ಲಿ ವಿಪರ್ಯಾಸ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಎಲ್ಲಿಲ್ಲದ ಸವಲತ್ತು ಕೊಟ್ಟಿದ್ದೇವೆ ಎಂದು ಬೊಬ್ಬೆ ಹೊಡೆಯುವ ಸರ್ಕಾರಗಳು ಇತ್ತ ಗಮನ ಹರಿಸಬೇಕಿದೆ ನಮ್ಮ ತುಮಕೂರು ಜಿಲ್ಲೆಯಲ್ಲಿ ಮೂವರು ಸಚಿವರಿದ್ದು ಅದರಲ್ಲೂ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ಅವರ ತವರು ಜಿಲ್ಲೆ ಇದಾಗಿದ್ದು ತಮ್ಮ ಸ್ವ ಕ್ಷೇತ್ರದ ತಾಲೂಕಿನ ಶಾಲೆಗಳು ಇಚ್ಚಾ ಶಕ್ತಿಯ ಕೊರತೆಯಿಂದ ಜಿಲ್ಲೆಯ ಸರ್ಕಾರಿ ಶಾಲೆಗಳು ಅನಾಥ ವಾಗಿರುವುದು ಶೋಚನೀಯ ಸಂಗತಿಯಾಗಿದೆ.
ಸರ್ಕಾರಿ ಶಾಲೆಯ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಹಿಮ್ಮುಖವಾಗಿ ಕಳಿಸುವ ಹುನ್ನಾರ:- ಸರ್ಕಾರಿ ಶಾಲೆಗಳ ಉಳಿವಿಗಾಗಿ ಅಭಿಯಾನ ಮಾಡೋ ಅಧಿಕಾರಿಗಳು ಶಾಸಕರು ಸಂಸದರು ಸಚಿವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವತ್ತ ಗಮನಕೊಡದೆ ಇರುವುದು ಅನುಮಾನ ಮೂಡಿಸಿದೆ. ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಸಮರ್ಪಕವಾಗಿ ಸರ್ಕಾರದ ಗಮನಕ್ಕೆ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರುವುದರಲ್ಲಿ ಅಧಿಕಾರಿಗಳು ಕೂಡ ಸಂಪೂರ್ಣ ವಿಫಲರಾಗುತ್ತಿದ್ದಾರೆ ಹಾಗಾಗಿ ಕಾಲಕಾಲಕ್ಕೆ ಶಾಲೆಗಳ ದುರಸ್ತಿ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಪ್ರಸ್ತುತ ಸುಸಜ್ಜಿತ ಶಾಲೆಗಳು ಕೂಡ ಹಾಳಾಗುವ ಅಂತಕ್ಕೆ ತಲುಪಿವೆ ಇವೆಲ್ಲ ಬೆಳವಣಿಗೆ ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆ ಮಕ್ಕಳನ್ನು ಹಿಮ್ಮುಖವಾಗಿ ಕಳಿಸುವಂತ ಹುನ್ನಾರ ನಡೆಯುತ್ತಿದೆ ಎಂದು ಹೇಳಬಹುದಾಗಿದೆ.
ಬಿಇಒ ಸಾಹೇಬ್ರು ಕಚೇರಿ ಬಿಟ್ಟು ಸರ್ಕಾರಿ ಶಾಲೆಗೆ ಭೇಟಿ ನೀಡಲ್ಲ ಜ್ವಲಂತ ಸಮಸ್ಯೆಗಳು ಬಗೆಹರಿಯಲ್ಲ:- ಖಾಸಗಿ ಶಾಲೆಗಳು ಎಲ್ಲಿ ಆರಂಭವಾಗುತ್ತದೆಯೋ ಆ ಹೋಬಳಿಯ ಸುತ್ತಮುತ್ತ ಸರ್ಕಾರಿ ಶಾಲೆಗಳು ಮುಚ್ಚಿಹೋಗುತ್ತಿವೆ ಕಾರಣ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಇರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.
ರಾಜ್ಯ ಸರ್ಕಾರ ಇಂದು ಎನ್ಇಪಿ ಜಾರಿಗೆ ತಂದಿದ್ದು ಶೈಕ್ಷಣಿಕ ಕ್ಷೇತ್ರಕ್ಕೆ ಹೊಸ ಸ್ಪರ್ಶ ನೀಡಿದೆ ಆದರೂ ಕೂಡ ಗುಬ್ಬಿ ತಾಲ್ಲೂಕಿನಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಬೇಜವಾಬ್ದಾರಿ ತನದಿಂದ ಸ್ಥಳೀಯವಾಗಿ ಯಾವುದೇ ಬದಲಾವಣೆಗಳನ್ನು ಪೋಷಕರು ನಿರೀಕ್ಷಿಸುವಂತಿಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮೂಲಭೂತ ಸೌಕರ್ಯ ಸೌಕರ್ಯಗಳಿಲ್ಲದೆ ಶಾಲೆಗಳು ಇಂದಿಗೂ ನರಳುತ್ತಿದೆ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇನ್ನಿತರ ವ್ಯವಸ್ಥೆಗಳು ಸಮರ್ಪಕವಾಗಿ ನೀಡಿಲ್ಲ ಜೊತೆಗೆ ಗುಬ್ಬಿ ತಾಲೂಕಿನ ಗಡಿಭಾಗದ ಶಾಲೆಗಳ ಪರಿಸ್ಥಿತಿ ಹೇಳತೀರದಾಗಿದೆ.
ಒಟ್ಟಾರೆಯಾಗಿ ಖಾಸಗಿ ಶಾಲೆಗಳ ಆಟದ ಮೈದಾನ ಶಾಲಾ ಕಾಂಪೌಂಡ್ ಶೌಚಾಲಯ ಉತ್ತಮ ಪರಿಸರ ಸೇರಿದಂತೆ ಹಲವು ಸೌಕರ್ಯಗಳನ್ನು ಪ್ರಶ್ನೆ ಮಾಡುವ ಸರ್ಕಾರಗಳು ಮತ್ತು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮದೇ ಸರ್ಕಾರಿ ಶಾಲೆಗಳಿಗೆ ಜೀವ ತುಂಬುವುದನ್ನು ಮರೆತಿರುವುದಾದರು ಏಕೆ ?
ದೊಡ್ಡದಾಗಿ ಪೋಷಕರನ್ನು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ ಎಂದು ಹೇಳುವ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ಸುಸ್ಥಿತಿಯಲ್ಲಿಡಲು ನಿರಾಕರಿಸುತ್ತಿರುವುದಾದರೂ ಯಾವ ಉದ್ದೇಶಕ್ಕೆ ಎಂಬುದೇ ಚರ್ಚೆಯ ವಿಷಯವಾಗಿದೆ.
ಗುಬ್ಬಿ ತಾಲ್ಲೂಕಿನಾದ್ಯಂತ ಶಿಥಿಲವಾಗಿ ಹಾಳಾಗಿರುವ ಸರ್ಕಾರಿ ಶಾಲೆಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ಬಿಡುಗಡೆಯಾದ ಕೂಡಲೇ ದುರಸ್ತಿ ಕಾರ್ಯಕ್ಕೆ ಕ್ರಮ ವಹಿಸಲಾಗುವುದು. –ಕ್ಷೇತ್ರ ಶಿಕ್ಷಣಾಧಿಕಾರಿ.ಗುಬ್ಬಿ.ಸೋಮಶೇಖರ್.
ಅನುದಾನದ ಕೊರತೆಯಿಂದ ಸರ್ಕಾರಿ ಶಾಲೆಗಳ ದುರಸ್ತಿ ಕಾರ್ಯ ಮಾಡಲಾಗಿಲ್ಲ.ಪ್ರಸ್ತುತ ಶಿಥಿಲ ವಾಗಿರುವ ಶಾಲೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.ಈಗ ಪ್ರತಿ ತಾಲೂಕಿಗೆ 25 ಲಕ್ಷ ನೀಡುವ ಬಗ್ಗೆ ಮಾಹಿತಿ ಇದೆ ಅನುದಾನ ಬಂದ ಕೂಡಲೇ ಸೂಕ್ತ ಕ್ರಮ ವಹಿಸಲಾಗುವುದು. – ಶಾಸಕ ಎಸ್.ಆರ್ ಶ್ರೀನಿವಾಸ್.
ವರದಿ: ದೇವರಾಜು.ಮಡೇನಹಳ್ಳಿ