ಶಿರಾ ತಾಲ್ಲೂಕಿನಲ್ಲಿ ಮುಂಗಾರು ಪ್ರಾರಂಭ : ಶಾಸಕ ರಾಜೇಶ್ ಗೌಡರಿಂದ ಬಿತ್ತನೆ ಬೀಜ ವಿತರಣೆ

ಶಿರಾ : ತಾಲ್ಲೂಕಿನಲ್ಲಿ ಮುಂಗಾರು ಪೂರ್ವದಲ್ಲಿಯೇ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಆಶಾದಾಯ ವಾತಾವರಣ ಉಂಟುಮಾಡಿದೆ. ರೈತರು ಕೃಷಿ ಇಲಾಖೆಯಿಂದ ಉತ್ತಮ ಮಾಹಿತಿಗಳನ್ನು ಪಡೆದು ಸಕಾಲಕ್ಕೆ ಬಿತ್ತನೆ ಮಾಡಿ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ನಗರದ ಎಪಿಎಂಸಿ ಆವರಣದಲ್ಲಿ ಸೋಮವಾರ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ ಒಟ್ಟು 58590 ಹೆಕ್ಟೇರ್‌ನಷ್ಟು ಬಿತ್ತನೆ ವಿಸ್ತೀರ್ಣವಿದ್ದು, ಶೇಂಗಾ 37400 ಹೇ. ಪ್ರದೇಶದಲ್ಲಿ, ತೊಗರಿ 4450 ಹೆ.ಪ್ರದೇಶದಲ್ಲಿ, ರಾಗಿ 8863 ಹೆ. ಪ್ರದೇಶದಲ್ಲಿ ರೈತರು ಬಿತ್ತನೆ ಮಾಡುತ್ತಿದ್ದು, ಇದರ ಜೊತೆಗೆ ಸೂರ್ಯಕಾಂತಿ, ಹೆಸರು, ಉದ್ದು, ಅಲಸಂದೆ, ಅರಳು, ಹತ್ತಿ ಈ ರೀತಿಯ ಬೆಳೆ ಬೆಳೆಯುತ್ತಿದ್ದಾರೆ. ಹವಾಮಾನ ಇಲಾಖೆಯ ವರದಿಯಂತೆ ಈ ವರ್ಷವೂ ಹರ್ಷದಾಯಕ ಮಳೆಯಾಗಲಿದೆ. 30 ದಿನಗಳ ಹೆಚ್ಚುವರಿ ಮಳೆಯಾಗುವ ಮುನ್ಸೂಚನೆನ್ನು ಹವಮಾನ ಇಲಾಖೆ ನೀಡಿದೆ. ಶೇಂಗಾ ಬೆಳೆಯಲ್ಲಿ ಅತಿ ಹೆಚ್ಚು ಇಳುವರಿ ಬರುವ ಬರುವಂತಹ ಕದ್ರಿ ಲೇಪಾಕ್ಷಿ ತಳಿಯ ಶೇಂಗಾ ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ಸಬ್ಸೀಡಿ ದರದಲ್ಲಿ ನೀಡುತ್ತಿದ್ದು, ಬಿತ್ತನೆ ಬೀಜದ ಜೊತೆಯಲ್ಲಿ ಇತರೆ ಪರಿಕರಗಳನ್ನು ಶೀಘ್ರ ವಿತರಿಸಲಾಗುವುದು. ರೈತರು ಇದರ ಸದುಪಯೋಗಪಡಿಸಿಕೊಳ್ಳಿ. ಕಳೆದ ಬಾರಿ ಮಳೆಯ ಅಭಾವದಿಂದ ಶೇಂಗಾ ತೊಗರಿ ಬೆಳೆಯಲ್ಲಿ ರೈತರು ನಷ್ಟ ಅನುಭವಿಸಿದ್ದರು. ಈ ಬಗ್ಗೆ ಇಲಾಖೆ ವತಿಯಿಂದ ಸರಕಾರಕ್ಕೆ ವರದಿ ರವಾನೆಯಾಗಿದೆ. ಶೀಘ್ರದಲ್ಲಿಯೇ ಸೂಕ್ತ ಪರಿಹಾರ ಸರಕಾರ ನೀಡಲಿದೆ ಎಂದರು.
ಈ ಬಾರಿಯೂ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಜೊತೆಗೆ ಹೇಮಾವತಿ ನೀರು ಹರಿಯಲಿದೆ. ಈ ಬಾರಿ ಮದಲೂರು ಕೆರೆಯಿಂದ ಬರಗೂರು, ರಾಗಲಹಳ್ಳಿ ಸೇರಿದಂತೆ ಹುಲಿಕುಂಟೆ ಹೋಬಳಿಯ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಉತ್ತಮ ಮಳೆಬೆಳೆಯಾಗಿ ಎಲ್ಲರೂ ಸಮೃದ್ಧಿಯಿಂದ ಇರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಆರ್.ರಂಗನಾಥ್ ಮಾತನಾಡಿ ಈ ವರ್ಷವೂ ಉತ್ತಮ ಆಶಾದಾಯಕ ಮುಂಗಾರು ಆರಂಭಗೊಡಿದ್ದು, ತಾಲ್ಲೂಕಿನಲ್ಲಿ ಇದುವರೆಗೆ 93 ಮಿ.ಮೀ. ವಾಡಿಕೆ ಮಳೆ ಇದ್ದು, 266 ಮಿ.ಮೀ. ಮಳೆಯಾಗಿದೆ. ಮುಂಗಾರಿನಲ್ಲಿ ಕೃಷಿ ಚಟುವಟಿಕೆ ಪ್ರಾರಂಭವಾಗಿದ್ದು, ಇದಕ್ಕೆ ಪೂರಕವಾಗಿ ತಾಲ್ಲೂಕು ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಒಟ್ಟು 5 ಸಂಪರ್ಕ ಕೇಂದ್ರಗಳು ಮತ್ತು ಹೆಚ್ಚುವರಿ 2 ಕೇಂದ್ರಗಳನ್ನು ತೆರೆದು ಶೇಂಗಾ, ರಾಗಿ, ತೊಗರಿ, ಮುಸುಕಿನ ಜೋಳ ಬಿತ್ತನೆ ಬೀಜಗಳನ್ನು ಶಿರಾ ನಗರದ ಎಪಿಎಂಸಿಯಲ್ಲಿ, ಬರಗೂರು, ಹುಲಿಕುಂಟೆ, ಪಟ್ಟನಾಯಕನಹಳ್ಳಿ, ತಾವರೆಕೆರೆ, ಬುಕ್ಕಾಪಟ್ಟಣ, ಕಳ್ಳಂಬೆಳ್ಳ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಸರಕಾರವು ನಿಗಧಿಪಡಿಸಿರುವ ರಿಯಾಯಿತಿ ದರದಲ್ಲಿ ಮಾರಾಟ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಹಾಗೂ ಸುಮಾರು 897 ಮೆ.ಟನ್ ವಿವಿಧ ರಸಗೊಬ್ಬರಗಳು ತಾಲ್ಲೂಕಿನಾದ್ಯಂತ ಎಲ್ಲಾ ಖಾಸಗಿ ಮತ್ತು ಸಹಕಾರಿ ಮಾರಾಟಕ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುವುದು. ರೈತರು ಸಕಾಲದಲ್ಲಿ ಬಿತ್ತನೆ ಬೀಜ ಪಡೆದು ಬಿತ್ತನೆ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ತೆಂಗು ಮತ್ತು ನಾರು ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ಕೆಓಎಫ್ ಎಂಡಿ.ರಮಾನಂದ, ನಿರ್ದೇಶಕ ಶ್ರೀನಿವಾಸ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಜಯಕುಮಾರ್, ನಾಗರಾಜು, ಮಾಜಿ ಎಪಿಎಂಸಿ ಅಧ್ಯಕ್ಷ ನರಸಿಂಹೇಗೌಡ, ಯಲಿಯೂರು ಮಂಜಣ್ಣ, ಕೃಷಿ ಅಧಿಕಾರಿ ಸತ್ಯನಾರಾಯಣ್ ಸೇರಿದಂತೆ ಹಲವರು ಹಾಜರಿದ್ದರು.