ಜಿಲ್ಲೆತುಮಕೂರು

ವಿಷ ಬೀಜ ಬಿತ್ತುವ ಆರ್.ಎಸ್.ಎಸ್. ಬಜರಂಗದಳ, ವಿಶ್ವ ಹಿಂದೂ ಪರಿಷತ್ ಬಗ್ಗೆ ಅಲ್ಪಸಂಖ್ಯಾತ ಸಮುದಾಯ ಎಚ್ಚರಿಕೆ ವಹಿಸಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ತುಮಕೂರು: ದೇವರು, ಧರ್ಮ, ಆಹಾರದ ವಿಚಾರದಲ್ಲಿ ಜನರ ನಡುವೆ ವಿಷ ಬೀಜ ಬಿತ್ತುತ್ತಿರುವ ಆರ್.ಎಸ್.ಎಸ್. ಬಜರಂಗದಳ, ವಿಶ್ವ ಹಿಂದೂ ಪರಿಷತ್ ಬಗ್ಗೆ ಅಲ್ಪಸಂಖ್ಯಾತ ಸಮುದಾಯ ಎಚ್ಚರಿಕೆಯಿಂದ ಇರುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ನಗರದ ಗಾಜಿನಮನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದವತಿಯಿಂದ ಆಯೋಜಿಸಿದ್ದ ಜಿಲ್ಲಾ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ನಮ್ಮ ಸಂವಿಧಾನದಲ್ಲಿ ಧರ್ಮ ನಿರಪೇಕ್ಷತೆಯನ್ನು ಪ್ರತಿಪಾದಿಸಲಾಗಿದೆ.ನಾನು ಆಚರಿಸುವ ಧರ್ಮದ ಬಗ್ಗೆ ಗೌರವದಿಂದ ಇರುವುದರ ಜೊತೆಗೆ, ಇತರೆ ಧರ್ಮಗಳ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು.ಅದೇ ನಿಜವಾದ ಭಾರತ ಎಂದರು.
ನಾನು ಯಾವ ಧರ್ಮದಲ್ಲಿ ಹುಟ್ಟಿದ್ದೇನೆ ಎಂಬುದು ಮುಖ್ಯವಲ್ಲ. ನಾವ್ಯಾರು ಇಂತಹ ಧರ್ಮ, ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿದವರಲ್ಲ.ಆದರೆ ನಾವೆಲ್ಲರೂ ಭಾರತೀಯರು ಎಂಬುದನ್ನು ಮರೆಯಬಾರದು.ಈ ದೇಶ ಒಂದು ಧರ್ಮಕ್ಕೆ ಸೇರಿದಲ್ಲ.ಎಲ್ಲರಿಗೂ ಸಮಾನ ಅವಕಾಶವಿದ.ಭಾರತದಲ್ಲಿರುವ ಎಲ್ಲಾ ಧರ್ಮಗಳ ಜನರ ನಡುವೆ ಸಹಬಾಳ್ವೆ ಆಗತ್ಯ.ಇದನ್ನೇ ನಮ್ಮ ಸಂವಿಧಾನವೂ ಪ್ರತಿಪಾದಿಸುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಹಲವು ಭಾವನಾತ್ಮಕ ವಿಚಾರಗಳ ಮೂಲಕ ಸಮಾಜವನ್ನು ಒಡೆಯುವ,ಮನುಷ್ಯರ ನಡುವೆ ಗೋಡೆಕಟ್ಟುವ ಕೆಲಸವನ್ನು ಸಂಘ ಪರಿವಾರದ ಮುಖಂಡರು ಮಾಡುತಿದ್ದಾರೆ.ಸಂವಿಧಾನದ ಪರವಾಗಿರುವ ನಾವೆಲ್ಲರೂ ದೇಶ ಒಡೆಯುವವರ ಕೈಗೆ ಅಧಿಕಾರ ಸಿಗದಂತೆ ನೋಡಿಕೊಳ್ಳಬೇಕಿದೆ.ರಾಜ್ಯದಲ್ಲಿ 2008ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ 1964 ರಿಂದಲೂ ಜಾರಿಯಲ್ಲಿದ್ದ ಗೋ ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಒಂದು ವರ್ಗವನ್ನು ಟಾಗೇಟ್ ಮಾಡಿದರು. ಈಗ ಮತಾಂತರ ನಿಷೇಧ ಕಾಯ್ದೆ ಮೂಲಕ ಮತ್ತಷ್ಟು ಕಿರುಕುಳ ನೀಡುತ್ತಿದೆ.ಹುಸಿ ಜಾತ್ಯಾತೀತೆ ಪ್ರದರ್ಶಿಸುತ್ತಿರುವ ಜೆಡಿಎಸ್ ಈ ಎರಡು ಮಹತ್ವ ಕಾಯ್ದೆಗಳ ಚರ್ಚೆಯ ವೇಳೆ ಸಭಾತ್ಯಾಗ ಮಾಡಿ, ಕಾಯ್ದೆ ಪಾಸಾಗುವಂತೆ ಮಾಡಿ, ಈಗ ನಾಟಕವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಜಾರಿಗೆ ತಂದು ಶಾದಿ ಭಾಗ್ಯ,ಟಿಪ್ಪು ಜಯಂತಿಗಳು ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಮಾಡಿದ ಕಾರ್ಯಕ್ರಮಗಳಲ್ಲ.ಬಿಜೆಪಿ, ಆರ್.ಎಸ್.ಎಸ್.ನವರು ದೂರವಂತೆ ಟಿಪ್ಪು ಮತಾಂಧನಾಗಿದ್ದರೆ ಶ್ರೀರಂಗಪಟ್ಟಣ ಹಾಗೂ ಇತರೆ ಕಡೆಗಳಲ್ಲಿ ಅಷ್ಟೊಂದು ಹಿಂದೂ ದೇವಾಲಯಗಳು, ಅತನ ಆಸ್ಥಾನದಲ್ಲಿ ಹಿಂದೂ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಿತ್ತೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಅಲ್ಪಸಂಖ್ಯಾತರ ಎಂದಿಗೂ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಇದನ್ನು ಸಹಿಸದೆ ಕೆಲವು ಸಂಘಟನೆಗಳು ಸಮಾಜದಲ್ಲಿ ಒಡಕನ್ನು ಉಂಟು ಮಾಡಲು ಪ್ರಯತ್ನಿಸುತ್ತಿದ್ದು ಇಂತಹ ಸಂಘಟನೆಗಳ ವಿರುದ್ದ ರಾಜ್ಯ ಸರಕಾರ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗಿದೆ.ಅಲ್ಲದೆ ರಾಜ್ಯದಲ್ಲಿ ಮುಸ್ಲಿಂರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಷಡ್ಯಂತ್ರ ನಡೆಯುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಈ ವಿಚಾರವಾಗಿ ಸಮರ್ಪಕ ಮಾಹಿತಿಯೊಂದಿಗೆ ಮತದಾರರ ಪಟ್ಟಿಗೆ ಕೈಬಿಟ್ಟ ಮತದಾರರನ್ನು ಸೇರಿಸುವ ಕೆಲಸ ಮಾಡಬೇಕೆಂದರು.

ಸಮಾವೇಶ ಉದ್ಘಾಟಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ,ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಇರುಸು, ಮುರುಸು ಉಂಟಾಗುತ್ತಿದೆ.ಆದರೆ ಯಾರು ಹೆದರುವ ಅಗತ್ಯವಿಲ್ಲ.ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾಗಿದೆ, ಅಲ್ಪಸಂಖ್ಯಾತರು ಈ ದೇಶಕ್ಕಾಗಿ ದುಡಿದಿದ್ದಾರೆ.ಬಸವಣ್ಣ, ಕನಕದಾಸರು, ಕುವೆಂಪು, ಶಿಶುನಾಳ ಷರೀಪ್ ಅವರು ಬಾಳಿದ ನಾಡಿನಲ್ಲಿ ಯಾರೂ ಹೆದರಬಾರದು ಎಂದರು.
ಬಿಜೆಪಿ ಅಭಿವೃದ್ಧಿ ಮಾಡಿದ್ದರೆ ಅದನ್ನು ಹೇಳಿಕೊಳ್ಳುತ್ತಿದ್ದರು.ಆದರೆ, ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ರಾಜಕಾರಣ ಮಾಡಲಾರಂಭಿಸಿದೆ,ಜನರು ಎಚ್ಚೆತ್ತುಕೊಂಡು ಈ ಸರಕಾರವನ್ನು ಕಿತ್ತೊಗೆಯಬೇಕು.ಉದಯಪುರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗುವ ಸಂಕಲ್ಪ ಮಾಡಲಾಗಿದೆ, ಜನರೂ ಬದಲಾವಣೆ ಬಯಸುತ್ತಿದ್ದು ಕಾಂಗ್ರೆಸ್ ಪರವಾದ ಅಲೆ ಸೃಷ್ಟಿಯಾಗುತ್ತಿದೆ.ಸರ್ವಜನಾಂಗವೂ ಒಂದೇ ಎಂಬ ಭಾವನೆ ಇಟ್ಟುಕೊಂಡು ಕಾಂಗ್ರೆಸ್ ಕೆಲಸ ಮಾಡುತ್ತಿದೆ, ಅಲ್ಪಸಂಖ್ಯಾತರನ್ನು ಎಲ್ಲಾ ವಲಯಗಳಲ್ಲಿ ರಕ್ಷಣೆ ಮಾಡುವ ಕೆಲಸದಲ್ಲಿ ಕಾಂಗ್ರೆಸ್ ಇರಲಿದೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಹೆಚ್.ಎಂ.ರೇವಣ್ಣ,ಶಾಸಕ ಹ್ಯಾರೀಸ್,ಮಾಜಿ ಶಾಸಕರಾದ ಡಾ.ಎಸ್.ರಫೀಕ್ ಅಹಮದ್,ಎಸ್.ಷಪಿ ಅಹಮದ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅತೀಕ್ ಅಹಮದ್,ಇಕ್ಬಾಲ್ ಅಹಮದ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮತ್ತಿತರರು ವೇದಿಕೆಯಲ್ಲಿದ್ದರು. ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker