ಗೊಲ್ಲರಹಟ್ಟಿಗಳು ಹಾಗೂ ಹಿಂದುಳಿದ ಗ್ರಾಮಗಳ ಸರ್ವತೋಮುಖ ಅಬಿವೃದ್ಧಿ: ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ
ಕುಂಬಾರಹಳ್ಳಿ ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮ

ಶಿರಾ : ತಾಲ್ಲೂಕಿನ ಎಲ್ಲಾ ಗೊಲ್ಲರಹಟ್ಟಿಗಳು ಸೇರಿದಂತೆ ಹಿಂದುಳಿದ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದ್ದು, ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿಗಳ ವಿಶೇಷ ಅನುದಾನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆ ಕ್ರಿಯಾ ಯೋಜನೆ ರೂಪಿಸಿದ್ದು ಶೀಘ್ರದಲ್ಲಿಯೇ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಹೇಳಿದರು.
ಅವರು ತಾಲೂಕಿನ ಗೌಡಗೆರೆ ಹೋಬಳಿಯ ಕುಂಬಾರಹಳ್ಳಿ ಗ್ರಾಮದಲ್ಲಿ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳ ಅಹವಾಲು ಸ್ವೀಕರಿಸಿ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಇಲಾಖೆಯಡಿ 10 ಕೋಟಿ ರೂ., ಅಪ್ಪರ ಭದ್ರ ಯೋಜನೆಯಡಿ 19.5 ಕೋಟಿ ರೂ. ಅನುದಾನ ನೀಡಲಾಗಿದ್ದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಗ್ರಾಮಗಳಲ್ಲಿ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ನಿರ್ಮಾಣ ಜೊತೆಗೆ ವ್ಯರ್ಥವಾಗಿ ಹರಿದು ಹೋಗುವ ಮಳೆನೀರನ್ನು ತಡೆದು ಭೂಮಿಯಲ್ಲಿ ಇಂಗಿಸುವ ದೃಷ್ಟಿಯಿಂದ ಚೆಕ್ ಡ್ಯಾಮ್‌ಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದರು.
ತಾಲೂಕಿನ ವಿವಿಧ ಸಮುದಾಯಗಳ ದೇವಸ್ಥಾನಗಳ ಅಭಿವೃದ್ಧಿಗೆ ಸರಕಾರ 5.5 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿದ್ದು ತಾಲೂಕಿನ 60 ದೇವಸ್ಥಾನಗಳಿಗೆ ಅನುದಾನ ನೀಡಲಾಗಿದೆ. ಶಿರಾ-ಅಮರಾಪುರ ರಸ್ತೆ ಅಭಿವೃದ್ಧಿಗೆ 23 ಕೋಟಿ ರೂ., ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ 3.75 ಕೋಟಿ ರೂ., ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ನೂತನ ಕಟ್ಟಡ ನಿರ್ಮಾಣಕ್ಕೆ 3.70 ಕೋಟಿ ರೂ., ಅನುದಾನ ನೀಡಿದ್ದು, ನಗರಸಭೆಗೆ ನಗರೋತ್ಥಾನ ಯೋಜನೆಯಡಿ 29 ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದು ಕಾಮಗಾರಿಗಳು ಶೀಘ್ರದಲ್ಲಿ ಚಾಲನೆಗೊಳ್ಳಲಿವೆ. ಅಮೃತ್ ಯೋಜನೆಯಡಿ ಆಯ್ಕೆಯಾದ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ 29 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ, ಇದಲ್ಲದೆ ಅಲ್ಪಸಂಖ್ಯಾತ ಮುರಾರ್ಜಿ ವಿದ್ಯಾರ್ಥಿನಿಲಯದ ಕಾಪೌಂಡ್ ಮತ್ತು ಕಟ್ಟಡಕ್ಕೆ 3.5 ಕೋಟಿ ಅನುದಾನ ನೀಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರೇಮ ಸುರೇಶ್, ಗ್ರಾಪಂ ಉಪಾಧ್ಯಕ್ಷ ಈರಣ್ಣ, ಸ್ಥಳೀಯ ಮುಖಂಡರಾದ ತುಳಸಿರಾಮ್, ಶಿವರಾಮ್, ಗೌಡಪ್ಪ, ಈಶ್ವರ್, ಪ್ರಕಾಶ್, ಶ್ರೀರಾಮ್, ಮಂಜುನಾಥ್, ಶೇಖರ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.