ಹಿಂದುಳಿದ ವರ್ಗದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಲಿ : ಶಾಸಕ ಮಸಾಲಾ ಜಯರಾಮ್
ಗುಬ್ಬಿ: ಸಚಿವ ಸ್ಥಾನ ಹಿಂದುಳಿದ ವರ್ಗದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ನೀಡುವುದರಿಂದ ಹಿಂದುಳಿದ ವರ್ಗಗಳ ಮತ ಬಿಜೆಪಿ ಪರ ನಿಲ್ಲಲಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಹಿರಿಯೂರು ಶಾಸಕಿ ಪೂರ್ಣಿಮಾ ಪರ ಬ್ಯಾಟಿಂಗ್ ಆಡಿದರು.
ತಾಲ್ಲೂಕಿನ ಕಡಬ ಹೋಬಳಿ ಬೋಚಿಹಳ್ಳಿ ಗ್ರಾಮದಲ್ಲಿ 22 ಲಕ್ಷದ ಶಾಲಾ ಹೆಚ್ಜುವರಿ ಕಟ್ಟಡ ಕಾಮಗಾರಿ ಮತ್ತು ಚಿಕ್ಕ ಕಲ್ಲೂರು ಶಿಂಷಾ ನದಿ ಚೆಕ್ ಡ್ಯಾಂಗೆ 1.50 ಕೋಟಿ ರೂಗಳ ಹಾಗೂ 1.50 ಕೋಟಿ ರೂಗಳ ರಸ್ತೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹಳೇ ಮೈಸೂರು ಭಾಗದ ಒಕ್ಕಲಿಗರಿಗೆ ಪ್ರಾಧಾನ್ಯತೆ ನೀಡುವಂತೆ ಆಗ್ರಹಿಸಲಾಗಿತ್ತು. ಇನ್ನುಳಿದ ಒಂದು ವರ್ಷದ ಹಿನ್ನಲೆ ಈ ಬಗ್ಗೆ ತೀವ್ರ ಒತ್ತಡ ಹಾಕದೆ ಹಿಂದುಳಿದ ವರ್ಗಗಳಿಗೆ ಸಚಿವ ಸ್ಥಾನ ನೀಡಿ ತುಮಕೂರು ಜಿಲ್ಲೆಯಲ್ಲಿ ಓಬಿಸಿ ಮತಗಳು ಬಿಜೆಪಿ ಪರ ನಿಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಅಶ್ವತ್ಥನಾರಾಯಣ ಹಾಗೂ ಡಿಕೇಶಿ ಅವರ ವಾಕ್ಸಮರ ದೊಡ್ಡವರ ಸಮಾಚಾರ. ಈ ಬಗ್ಗೆ ಪ್ರತಿಕ್ರಿಯೆ ನೀಡಲಾರೆ. ಪಿಎಸೈ ಹುದ್ದೆ ನೇಮಕಾತಿ ಹಗರಣದಲ್ಲೂ ವಿರೋಧ ಪಕ್ಷದ ಹೆಸರು ಹೆಚ್ಚಾಗಿ ಕೇಳಿ ಬರುತ್ತದೆ. ಸಲ್ಲದ ಆರೋಪಗಳು ಕೇಳಿ ಬರುತ್ತಿವೆ ಅಷ್ಟೇ ಎಂದು ಸಮರ್ಥಿಸಿಕೊಂಡರು.
ಸ್ವಾತಂತ್ರ‍್ಯ ಪೂರ್ವದಲ್ಲಿ ಇದ್ದ ಸ್ಥಿತಿಯಲ್ಲೇ ಮೂಲಭೂತ ಕೊರತೆ ಹೊಂದಿದ್ದ ಚಿಕ್ಕ ಕಲ್ಲೂರು ಎಂಬ ಗ್ರಾಮಕ್ಕೆ ಎರಡು ವರ್ಷದಲ್ಲೇ ಎಲ್ಲಾ ಮೂಲ ಸವಲತ್ತು ನೀರು, ವಿದ್ಯುತ್, ರಸ್ತೆ ಒದಗಿಸಿ ಅನುಕೂಲ ಮಾಡಲಾಗಿದೆ ಎಂದ ಅವರು ಪೆದ್ದನಹಳ್ಳಿ ಹತ್ಯೆ ಪ್ರಕರಣ ನಡೆಯಬಾರದಿತ್ತು. ಮೃತ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಸಾಂತ್ವನ ಹೇಳಿದ್ದೇನೆ. ಮೃತ ಗಿರೀಶ್ ಸಹೋದರ ಶ್ರೀಧರ್ ಅವರೊಂದಿಗೆ ನಿತ್ಯ ಸಂಪರ್ಕ ಇದ್ದೇನೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿ.ಬಿ.ಶಂಕರ್, ಗುಡಿಗೌಡ ಮೋಹನ್, ರಾಜೇಗೌಡ, ಸದಯ್ಯ, ಮಂಜಣ್ಣ, ಕೊಂಡಜ್ಜಿ ವಿಶ್ವನಾಥ್, ಮುದ್ದೇಗೌಡ, ಮಹೇಶ್ ಇತರರು ಇದ್ದರು.