ಜಿಲ್ಲೆತುಮಕೂರು

ಅಂಬೇಡ್ಕರ್ ಅವರನ್ನು ಜಾತಿಗೆ ಸೀಮಿತಗೊಳಿಸಿರುವುದು ದೊಡ್ಡ ದುರಂತ : ಡಾ.ಜಿ.ಪರಮೇಶ್ವರ್

ತುಮಕೂರು : ನಾವುಗಳು ಮೇಲ್ನೋಟಕ್ಕೆ ಅಂಬೇಡ್ಕರ್ ಅನುಯಾಯಿಗಳಾಗುವುದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ.ಅವರ ತತ್ವಗಳನ್ನು ಪಾಲಿಸಿದ್ದರೆ ಇಂದು ದೇಶದಲ್ಲಿ ಅಸ್ಪೃಷ್ಯತೆ ಎಂಬುದೇ ಇರುತ್ತಿರಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾಲಭವನದಲ್ಲಿ ತುಮಕೂರು ಜಿಲ್ಲಾ ಛಲವಾದಿ ಸಂಘಟನೆಗಳ ಒಕ್ಕೂಟದವತಿಯಿಂದ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ದೇಶದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.
ನಾನು ತಿಳಿದಂತೆ ಪ್ರಪಂಚದ ಯಾವುದೇ ದೇಶದಲ್ಲಿ ಈ ರೀತಿಯ ಶ್ರೇಣಿಕೃತ ಜಾತಿ ವ್ಯವಸ್ಥೆ ಇಲ್ಲ.ಮೊದಲು ಕುಲಕಸುಬುಗಳಾಗಿದ್ದ ಸಮಾಜಗಳು ನಂತರ ಜಾತಿಗಳಾಗಿ ಪರಿವರ್ತನೆಯಾಗಿದ್ದು ವಿಪರ್ಯಾಸ.ಅದರಿಂದಾಗುವ ತೊಂದರೆಗಳು ಅಪಾರ. ಇಡೀ ವಿಶ್ವವೇ ಅಂಬೇಡ್ಕರ್ ಅವರ ವಿದ್ವತ್‌ಗೆ ಮಾರು ಹೋಗಿ,ವಿಶ್ವನಾಯಕ ಎಂದು ಕೊಂಡಾಡಿದರೂ ಸಹ ಭಾರತದಲ್ಲಿ ಮಾತ್ರ ಅಂಬೇಡ್ಕರ್ ಅವರನ್ನು ಇಂದಿಗೂ ಜಾತಿಯ ಹೆಸರಿನಲ್ಲಿಯೇ ಗುರುತಿಸಲಾಗುತ್ತಿದೆ.ಇದಕ್ಕಿಂತ ದೊಡ್ಡ ದುರಂತ ಮತ್ತೊಂದು ಇದೆಯೇ ಎಂದು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.
ಅಂಬೇಡ್ಕರ್ ಅವರು ಭಾರತದ ದಲಿತರಿಗಾಗಿ ಸಂವಿಧಾನ ಬರೆಯಲಿಲ್ಲ.ಇಡೀ ದೇಶದ ಎಲ್ಲಾ ವರ್ಗಗಳು ಅವರ ಸಂವಿಧಾನದ ಫಲವನ್ನು ಅನುಭವಿಸುತ್ತಿವೆ. ಭಕ್ರಾನಾಂಗಲ್ ಅಣೆಕಟ್ಟು,ಆರ್.ಬಿ.ಐ ಸೇರಿದಂತೆ ಹಲವಾರು ಮಹತ್ವದ ಯೋಜನೆಗಳಿಗೆ ಅಡಿಪಾಯ ಹಾಕಿದವರು ಬಾಬಾ ಸಾಹೇಬ್ ಅಂಬೇಡ್ಕರ್,ಹಾಗಾಗಿ ಅವರನ್ನು ಎಲ್ಲಾ ವರ್ಗದ ಜನರು ಸ್ಮರಿಸುವಂತಹ ವಾತಾವರಣ ನಿರ್ಮಾಣವಾಗಬೇಕೆಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಸಂಶೋಧಕ ವಿಠಲ್ ವಗ್ಗಲ್ ಮಾತನಾಡಿ, ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ಸಂಪುಟ ತಯಾರಿಸುವ ವೇಳೆ ಹಲವಾರು ತಪ್ಪುಗಳನ್ನು ಮಾಡಲಾಗಿದೆ. ಇವುಗಳನ್ನು ಸರಿಪಡಿಸಲು ಸರಕಾರಕ್ಕೆ ಮನವಿ ಮಾಡಬೇಕು.ಮಹಾನಾಯಕರ ಜಾತಿಯನ್ನೇ ಹೈಜಾಕ್ ಮಾಡಲಾಗಿದೆ.ಇದು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದರು.
ಸ್ವಾತಂತ್ರಪೂರ್ವದಲ್ಲಿ ತಮ್ಮ ಕುಲಕಸುಬುಗಳನ್ನೇ ನಂಬಿ ಬದುಕುತಿದ್ದ ಹಿಂದುಳಿದ ವರ್ಗಗಳು,ಇಂದು ಓಬಿಸಿ ಹೆಸರಿನಲ್ಲಿ ಒಂದಷ್ಟು ಸರಕಾರಿ ಉದ್ಯೋಗ,ಸವಲತ್ತು ಪಡೆದಿದ್ದರೆ ಇದಕ್ಕೆ ಕಾರಣ ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ಕಾರಣ. ಆದರೆ ಓಬಿಸಿಯವರು ಅಂಬೇಡ್ಕರ್ ಅವರನ್ನು ಮೆರೆತು ಬೇರೆ ಜನರನ್ನು ಮೆರೆಸಲು ಮುಂದಾಗಿರುವುದು ವಿಪರ್ಯಾಸವೇ ಸರಿ ಎಂದು ವಿಠಲ್ ವಗ್ಗಲ್ ನುಡಿದರು.
ಅಂಬೇಡ್ಕರ್ ಜಯಂತಿ ಮಾಡುವ ಉದ್ದೇಶ, ನಾಲಾಯಕ್ ಜನರನ್ನು ಲಾಯಕ್ ಆಗಿ ಮಾಡುವುದಾಗಿದೆ. ಉಪಯೋಗಕ್ಕೆ ಬಾರದ ಜನರಲ್ಲಿ ಜಾಗೃತಿ ಮೂಡಿಸಿ, ಅವರನ್ನು ಸಮಾಜ ಕಟ್ಟುವ ಕಡೆಗೆ ಬಳಸಿಕೊಳ್ಳಲು ಇಂತಹ ಜಯಂತಿಗಳು ಅವಶ್ಯಕ.ಈ ನಿಟ್ಟಿನಲ್ಲಿ ಛಲವಾದಿ ಸಮುದಾಯ ಒಳ್ಳೆಯ ಕೆಲಸ ಮಾಡಿದೆ ಎಂದ ಅವರು,ಶಿಕ್ಷಣದ ಜೊತೆಗೆ ಜಾಗೃತಿ,ಜಾಗೃತಿಯಿಂದ ನಾಯಕತ್ವ ಬೆಳೆಯುತ್ತದೆ.ಆದರೆ ನಮ್ಮ ಲೀಡರ್‌ಗಳು,ಡೀಲರ್‌ಗಳಾಗಿರುವುದು ಇಂದಿನ ದುರಂತಕ್ಕೆ ಕಾರಣ.ಹುಟ್ಟಿದ ಮೇಲೆ ಮನುಷ್ಯ ಸಾಯುವುದು ಖಚಿತ.ಏನನ್ನಾದರೂ ಸಾಧನೆ ಮಾಡಿ ಎಂಬುದು ಅಂಬೇಡ್ಕರ್ ಅವರ ಸಂದೇಶವಾಗಿದೆ ಎಂದು ವಿಠಲ್ ವಗ್ಗಲ್ ತಿಳಿಸಿದರು.

ಮತ್ತೊಬ್ಬ ಭಾಷಣಕಾರ ಡಾ.ಗೋವಿಂದರಾಯ ಮಾತನಾಡಿ,ನಮ್ಮನ್ನು ಉದ್ದಾರ ಮಾಡಲು ಯಾರಿಂದಲೂ ಸಾಧ್ಯವಿಲ್ಲ.ಹಾಗಾಗಿ ನಮ್ಮ ಉದ್ದಾರ ನಮ್ಮಿಂದಲೇ ಎಂಬ ಸ್ವಯಂ ಧೈರ್ಯವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಿದೆ. ಇದು ಅಂಬೇಡ್ಕರ್ ನಮಗಾಗಿ ನೀಡಿದ ತತ್ವವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಚಿತ್ರದುರ್ಗದ ಛಲವಾದಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀಬಸವನಾಗೀದೇವ ಶರಣರು ವಹಿಸಿದ್ದರು.ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರಭಾವತಿ ಸುಧೀಶ್ವರ್,ಮಾಜಿ ಶಾಸಕ ಡಾ.ರಫೀಕ್ ಅಹಮದ್,ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣ ದಾಸ್,ಚಿತ್ರದುರ್ಗದ ಛಲವಾದಿ ಗುರುಪೀಠದ ಅಧ್ಯಕ್ಷರು ಹಾಗೂ ಭೂ ಸೇನಾ ನಿಗಮದ ಮಾಜಿ ಅಧ್ಯಕ್ಷ ಲಕ್ಷ್ಮೀನರಸಿಂಹಯ್ಯ, ಸರಕಾರಿ ಅಭಿಯೋಜಕರಾದ ಎಸ್.ರಾಜಣ್ಣ, ವಕೀಲರು ಹಾಗೂ ಜಿಲ್ಲಾ ಕಾಂಗ್ರೆಸ್ ಎಸ್ಸಿ ಸೇಲ್ ಅಧ್ಯಕ್ಷರಾದ ಬಿ.ಜಿ.ಲಿಂಗರಾಜು, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಹೆಚ್.ಅತೀಕ್ ಅಹಮದ್ ಡಿಸಿಎಂಎಸ್ ಅಧ್ಯಕ್ಷ ಡಾ.ಪಿ.ಚಂದ್ರಪ್ಪ, ಟೂಡಾ ಸದಸ್ಯ ಪ್ರತಾಪ್ ಸೇರಿದಂತೆ,ಒಕ್ಕೂಟದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker