ತುಮಕೂರು ನಗರ

ಮೇ 8ಕ್ಕೆ ನವೀಕೃತ ಚನ್ನಂಜಪ್ಪ ಉಚಿತ ವಿದ್ಯಾರ್ಥಿ ನಿಲಯ ಉದ್ಘಾಟನೆ

ತುಮಕೂರು : ನವೀಕೃತ ಧರ್ಮಪ್ರವರ್ತ ಗುಬ್ಬಿ ನಿಡಸಾಲೆ ಚನ್ನಂಜಪ್ಪ ಹಾಸ್ಟಲ್‌ನ ಉದ್ಘಾಟನಾ ಸಮಾರಂಭ ಮೇ08ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಉಚಿತ ವಿದ್ಯಾರ್ಥಿ ನಿಲಯ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಎಂ. ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರೈಲ್ವೆ ಮೇಲ್ಸೇತುವೆಗೆ ಭೂ ಸ್ವಾಧೀನ ಪರಿಹಾರದ ಹಣ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರ ಮತ್ತು ದಾನಿಗಳ ನೆರವಿನಿಂದ 32 ಕೊಠಡಿಗಳ ಹಾಸ್ಟಲ್ ನವೀಕರಣಗೊಂಡಿದ್ದು,ಇದರ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಿದ್ದಲಿಂಗೇಶ್ವರನ ಪರಮಭಕ್ತರಾದ ಚನ್ನಂಜಪ್ಪ ಅವರು ದೂರದ ಊರುಗಳಿಂದ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 1945ರಲ್ಲಿ ಉಪ್ಪಾರಹಳ್ಳಿಯ ಸಮೀಪ 2.10 ಎಕರೆ ಪ್ರದೇಶದಲ್ಲಿ ಕಲ್ಲಿನ ಕಟ್ಟಡವೊಂದನ್ನು ಕಟ್ಟಿ, ಅಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತವಾಗಿ ಊಟ, ವಸತಿಯೊಂದಿಗೆ ಶಿಕ್ಷಣ ಕಲಿಯಲು ಅನುವು ಮಾಡಿಕೊಟ್ಟಿದ್ದರು. ಇದನ್ನು ತಿಳಿದ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರು ಚನ್ನಂಜಪ್ಪ ಅವರಿಗೆ ಧರ್ಮಪ್ರವರ್ತ ಎಂಬ ಬೀರಿದು ನೀಡಿದಲ್ಲದೆ, 30 ಸಾವಿರ ರೂಗಳನ್ನು ನೀಡಿ ವಿದ್ಯಾರ್ಥಿ ನಿಲಯಕ್ಕೆ ಬಳಸಿಕೊಳ್ಳಲು ನೀಡಿದ್ದರು. 1945 ರಿಂದ 2010ರವರೆಗೆ ಈ ಹಾಸ್ಟಲ್ ಹತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಆಶ್ರಯವನ್ನು ಒದಗಿಸಿತ್ತು ಎಂದರು.

2011ರಲ್ಲಿ ಉಪ್ಪಾರಹಳ್ಳಿ ರೈಲ್ವೆ ಮೇಲೇತ್ಸುವ ಆರಂಭಗೊಂಡಾಗ ಹಾಸ್ಟಲ್‌ನ ಕೆಲ ಭಾಗ ಭೂ ಸ್ವಾಧೀನಗೊಂಡಿತ್ತು.ಉಳಿದ ಭಾಗ ಪಾಳು ಬಿದ್ದಿತ್ತು.2020ರಲ್ಲಿ ಚನ್ನಂಜಪ್ಪ ಮತ್ತು ಹಾಸ್ಟಲ್‌ನ ಹಳೆಯ ವಿದ್ಯಾರ್ಥಿಗಳ ಜೊತೆ ಮಾತನಾಡಿ, ನವೀಕರಣಗೊಳಿಸುವ ಕಾರ್ಯ ಆರಂಭಿಸಲಾಯಿತು. ಭೂ ಸ್ವಾಧೀನ ಪರಿಹಾರ 79 ಲಕ್ಷ ಹಾಗೂ ದಾನಿಗಳು ನೀಡಿದ ಸಹಕಾರದಿಂದ 1.25 ಕೋಟಿ ರೂಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ.150-200 ಜನ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಒದಗಿಸಲು ಅವಕಾಶವಿದೆ.ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಧರ್ಮಪಾಲ್ ತಿಳಿಸಿದರು.
ಮೇ.08ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯುವ ನವೀಕರಣಗೊಂಡ ವಿದ್ಯಾರ್ಥಿ ನಿಲಯದ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯವನ್ನು ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗಮಹಾಸ್ವಾಮೀಜಿ,ಶಿವಗಂಗೆ ಮೇಲನಗವಿ ಮಠದ ಶ್ರೀಮಲಯ ಶಾಂತಮುನಿ ಶಿವಾಚಾರ್ಯಸ್ವಾಮೀಜಿ,ಯಡಿಯೂರಿನ ಬಾಳೆಹೊನ್ನೂರು ಶಾಖಾ ಮಠದ ಶ್ರೀರೇಣುಕಾ ಶಿವಾಚಾರ್ಯ ಸ್ವಾಮೀಜಿಗಳು ವಹಿಸಲಿದ್ದು,ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ಶ್ರೀವೀರೇಂದ್ರ ಹಗ್ಗಡೆ ಅವರ ಆಶೀರ್ವಚನದೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ,ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಜಿ.ಜಿ.ಜೋತಿಗಣೇಶ್,ಡಿ.ಸಿ.ಗೌರಿಶಂಕರ್,ಕರ್ನಾಟಕ ವೀರಶೈವ ವಿದ್ಯಾಭಿವೃದ್ದಿ ಸಮಿತಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಮಾಜಿ ಸಚಿವ ಎಸ್.ಶಿವಣ್ಣ, ನಿವೃತ್ತ ಪೊಲೀಸ್ ಅಧಿಕಾರಿ ರೇವಣ್ಣಸಿದ್ದಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಸಹಾಪುರ ವಾಡ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರುಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ವೀರಶೈವ ಸಮುದಾಯದಕ್ಕೆ ಸೇರಿದ ವಿವಿಧ ಸಂಘಟನೆಗಳ ಮುಖಂಡರು, ಧರ್ಮಪ್ರವರ್ತ ಚನ್ನಂಜಪ್ಪ ಅವರ ಕುಟುಂಬದವರು ಭಾಗವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಧರ್ಮಪ್ರವರ್ತ ಗುಬ್ಬಿ ನಿಡಸಾಲೆ ಚನ್ನಂಜಪ್ಪ ವೀರಶೈವ ಉಚಿತ ವಿದ್ಯಾರ್ಥಿ ನಿಲಯ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಧರ್ಮಪಾಲ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ಹಾಗೂ ಚನ್ನಂಜಪ್ಪ ಮೊಮ್ಮಗ ಜಿ.ಟಿ.ಅರುಣ್‌ಕುಮಾರ್,ನಿರ್ದೇಶಕರಾದ ಸಿ.ಎಸ್.ಕುಮಾರಸ್ವಾಮಿ, ಗುರುಮಲ್ಲಿಕಾರ್ಜುನ್, ದಿನೇಶ್, ಶ್ರೀಮತಿ ಸುಮಪ್ರಸನ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker