ತುರುವೇಕೆರೆ
ದುಷ್ಕರ್ಮಿಗಳಿಂದ ಮನೆಗೆ ಬೆಂಕಿ ಲಕ್ಷಾಂತರ ರೂ ನಷ್ಟ
ತುಮಕೂರು: ಜಿಲ್ಲೆಯ, ತುರುವೇಕೆರೆ ತಾಲೂಕಿನ, ದಂಡಿನಶಿವರ ಹೋಬಳಿ, ಅಪ್ಪಸಂದ್ರದ ಗುಂಡಿಕಾವಲ್ ಊರಿನ ಲಕ್ಕಯ್ಯ ಮಗ ಈಶ್ವರ ಇವರ ತೋಟದ ವಾಸದ ಮನೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಗುಂಡಿಕಾವಲ್ ನ ತಮ್ಮ ತೋಟದಲ್ಲಿ ಮನೆಮಾಡಿಕೊಂಡು ವಾಸವಾಗಿದ್ದ ಈಶ್ವರ ಅವರ ಮನೆಯ ಮೇಲೆ ಕಲ್ಲು ತೂರುವುದು, ಕರೆಂಟ್ ಕಟ್ ಮಾಡುವುದು ಅಗಿಂದ್ದಾಗ್ಗೆ ನಡೆಯುತ್ತಿದ್ದು ಈ ಸಂಬಂದ ದಂಡಿನಶಿವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಯಾವುದೇ ಕ್ರಮ ಜರುಗಿಸಿರಲಿಲ್ಲ.
ಬುಧವಾರ ನೆಂಟರ ಊರಿನ ಜಾತ್ರೆಗೆ ಮನೆ ಮಂದಿಯಲ್ಲಾ ಬೀಗ ಹಾಕಿಕೊಂಡು ಹೋಗಿದ್ದು, ಈ ವೇಳೆ ಯಾರೋ ದುಷ್ಕರ್ಮಿಗಳು,ಮನೆಗೆ ಅಳವಡಿಸಿದ್ದ ಸಿಸಿ ಟಿ.ವಿ.ಕ್ಯಾಮರವನ್ನು ಮೇಲ್ಮುಖವಾಗಿ ತಿರುಗಿಸಿ,ಮನೆಗೆ ಬೆಂಕಿ ಹಚ್ಚಿದ್ದು,ಮನೆಯಲ್ಲಿದ್ದ ಸುಮಾರು 30000 ತೆಂಗಿನಕಾಯಿ, ಮನೆಯಲ್ಲಿದ್ದ ದವಸ,ಧಾನ್ಯ, ವಡವೆ.ವಸ್ತ್ರ ಸೇರಿದಂತೆ ಸುಮಾರು ಲಕ್ಷಾಂತರ ರೂಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ.
ವಿಷಯ ತಿಳಿದ ತಕ್ಷಣ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ದೂರು ನೀಡಿ, ಅಗ್ನಿಶಾಮಕ ದಳಕ್ಕೆ ತಿಳಿಸಲಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗೆ ಬಹುತೇಕ ವಸ್ತುಗಳು ಸುಟ್ಟು ಹೋಗಿವೆ ಎಂದು ಮನೆಯ ಮಾಲೀಕರಾದ ಈಶ್ವರ್ ತಿಳಿಸಿದ್ದಾರೆ
ಪೊಲೀಸ್ ಇಲಾಖೆಯವರು, ತಹಸೀಲ್ದಾರ್ ರವರು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೊಂದಿರುವ ಅಸಹಾಯಕ ಜನರಿಗೆ ಸ್ಪಂದಿಸಿ ನ್ಯಾಯ ಕೊಡಿಸಿ ಮನೆಗೆ ಬೆಂಕಿ ಹಚ್ಚಿದ ಸಮಾಜ ಘಾತುಕರಿಗೆ ಸರಿಯಾದ ಶಿಕ್ಷೆ ಕೊಡಿಸಬೇಕೆಂದು ಜಗದೀಶ್,ಜಿಲ್ಲಾ ಡಿಎಸ್ಎಸ್ ಸಂಚಾಲಕರು ಹಾಗೂ ಇಂದ್ರಯ್ಯ ಹೆಚ್ ,ಅದ್ಯಕ್ಷರು ,ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ಒಕ್ಕೂಟ (ರಿ) ಹಾಗೂ ಅದ್ಯಕ್ಷರು,ಕರ್ನಾಟಕ ರಾಜ್ಯ ರೈತರ ಸೇವಾ ಸಂಘ (ರಿ)ದ ಪರವಾಗಿ ಇವರು ತುಮಕೂರು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಅವರಿಗಾದ ನಷ್ಟವನ್ನು ಸರ್ಕಾರದಿಂದ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.