ಮಧುಗಿರಿ : ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಗೊಳಿಸಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲು ಮುಂದಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಮೇ.16 ಸೋಮವಾರ ದಂದು ಬೆಳಿಗ್ಗೆ 11 ಗಂಟೆಗೆ ತುಮಕೂರಿನ ಬೆಸ್ಕಾಂ ಅಧೀಕ್ಷಕ ಅಭಿಯಂತರ ರ ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಜಿಲ್ಲಾ ರೈತ ಸಂಘದ ಪದಾಧಿಕಾರಿಗಳಾದ ಎ. ಗೋವಿಂದರಾಜು ಮತ್ತು ಜಿ.ಸಿ.ಶಂಕರಪ್ಪ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದಾವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತವಿರೋಧಿ ನೀತಿ ಜಾರಿಗೊಳಿಸಲು ಮುಂದಾಗಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತವೆ ಸೇವಾ ಕ್ಷೇತ್ರವಾಗಿರುವ ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಮಾರಾಟ ಮಾಡಬಾರದು.
ಉಚಿತವಾಗಿ ವಿದ್ಯುತ್ ನೀಡುತ್ತಿದ್ದ ರೈತರ ಪಂಪ್ ಸೆಟ್ ಗಳಿಗೆ , ಬಡವರ ಭಾಗ್ಯಜ್ಯೋತಿ, ಕುಠೀರ ಜ್ಯೋತಿಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಯತ್ನವನ್ನು ಕೈ ಬಿಡಬೇಕು. 2014 ರಿಂದ ಇಲ್ಲಿಯವರೆಗೂ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಹಣ ಕಟ್ಟಿಸಿಕೊಂಡು ಬಾಕಿ ಉಳಿದಿರುವ 13296 ಪ್ರಕರಣಗಳಲ್ಲಿನ ರೈತರಿಗೆ ಸರ್ಕಾರ ಕೂಡಲೇ ವಿದ್ಯುತ್ ಕಂಬ, ಪರಿವರ್ತಕಗಳನ್ನು ಒದಗಿಸಿ ಕೂಡಲೇ ಸಂಪರ್ಕ ಕಲ್ಪಿಸಬೇಕು. ತಾತ್ಕಲ್ ಯೋಜನೆಯಡಿಯಲ್ಲಿ ಬಾಕಿ ಇರುವ 319 ರೈತರಿಗೂ ಕೂಡಲೇ ವಿದ್ಯುತ್ ಪರಿವರ್ತಕ ಒದಗಿಸಬೇಕು .
ಸುಟ್ಟ ಪರಿವರ್ತಕಗಳನ್ನು 48 ಗಂಟೆಗಳಲ್ಲಿ ಬದಲಾಯಿಸಿಕೊಡಬೇಕು. ಓವರ್ ಲೋಡ್ ಆಗಿರುವ ಕಡೆ ಅಡಿಷನ್ ಟಿ.ಸಿ ಮಂಜೂರು ಮಾಡಬೇಕು ಹಾಗೂ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳಾದ ದೊಡ್ಡಮಾಳಯ್ಯ, ನಾಗರತ್ನಮ್ಮ, ತಾಲೂಕು ಪದಾಧಿಕಾರಿಗಳಾದ ಡಿ.ಆರ್.ರಾಜಶೇಖರ್, ಬೇಡತ್ತೂರು ನಾಗರಾಜ್, ಎಂ.ಡಿ.ಚಿಕ್ಕಣ್ಣ, ಲಕ್ಷ್ಮೀಪತಿ, ಶ್ರೀರಾಮರೆಡ್ಡಿ, ಭಾಗ್ಯಮ್ಮ, ಹನುಮಂತರಾಯಪ್ಪ, ವನರಾಜು, ನಾಗರಾಜು, ಚಿನ್ನಪ್ಪರೆಡ್ಡಿ, ರಾಮೇಗೌಡ, ಟಿ.ಎನ್.ಸುರೇಶ್ ಬಾಬು ಮತ್ತಿತರರು ಇದ್ದರು.