ತಿಪಟೂರು : ವೀರಶೈವ – ಲಿಂಗಾಯಿತ ಎಂಬ ಪ್ರತ್ಯೇಕ ಧರ್ಮ ಸ್ಥಾಪನೆಗೆ ಮುಂದಾಗದೇ ವೀರಶೈವ ಲಿಂಗಾಯಿತ ಧರ ಸ್ಥಾಪನೆಗೆ ಎಲ್ಲಾರೂ ಒಂದಾಗಿ ಸರ್ಕಾರದಿಂದ ಮಾನ್ಯತೆ ಪಡೆಯಬೇಕಿದೆ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃತ್ಯುಂಜಯದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಬಯಲುರಂಗ ಮಂದಿರದಲ್ಲಿ ಬುಧವಾರ ಲಿಂಗಾಯಿತ ವೀರಶೈವ ಸಮಾಜದ ವತಿಯಿಂದ ಆಯೋಜಿಸಿದ್ದ ಬಸವೇಶ್ವರ ಹಾಗೂ ರೇಣುಕಾಚಾರ್ಯರ ಜಯಂತೋತ್ಸವವದ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವೀರಶೈವ ಲಿಂಗಾಯಿತ ಧರ್ಮ ವಿಶ್ವದಲ್ಲಿಯೇ ಶ್ರೇಷ್ಠವಾದಂತಹ ಧರ್ಮವಾಗಿದ್ದು, ವೀರಶೈವ, ಲಿಂಗಾಯಿತ ಎಂಬ ಪ್ರತ್ಯೇಕ ಧರ್ಮಗಳ ರಚನೆಗೆ ಮುಂದಾಗುವ ಬದಲು ವೀರಶೈವ ಲಿಂಗಾಯಿತ ಧರ್ಮದ ಸ್ಥಾಪನೆಗೆ ದೇಶದಾದ್ಯಂತ ಒಂದಾಗಬೇಕಿದೆ. ಇಸ್ಲಾಂ, ಕೈಸ್ತ, ಬೌದ್ಧ ಧರ್ಮದಂತೆಯೇ ವೀರಶೈವ ಲಿಂಗಾಯಿತ ಧರ್ಮದಲ್ಲಿಯೂ ಆರ್ಥಿಕವಾಗಿ ಸದೃಢತೆ ಇಲ್ಲವರು ಅನೇಕರಿದ್ದಾರೆ. ಇತರೆ ಧರ್ಮಗಳಂತೆಯೇ ನಮ್ಮ ಧರ್ಮದ ಜನಾಂಗದವರಿಗೂ ಸಹ ಮೀಸಲಾತಿ ದೊರೆತರೆ ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಲು ಅನುಕೂಲವಾಗುತ್ತದೆ. ಇದೀಗ ಯಾವುದೇ ಸೌಲಭ್ಯ ದೊರಕೆ ಜನಾಂಗದ ಯುವಜನತೆ ಶಿಕ್ಷಣ, ಉದ್ಯೋಗ ಇತರೆ ಕ್ಷೇತ್ರದಲ್ಲಿ ಹಿನ್ನೆಡೆಯನ್ನು ಅನುಭವಿಸಿದ್ದಾರೆ. ಸರ್ಕಾರದ ಕೂಡಲೇ ಈ ನಿಟ್ಟಿನಲ್ಲಿ ಆಲೋಚನೆ ಮಾಡಿ ವೀರಶೈವ ಲಿಂಗಾಯಿತ ಧರ್ಮದ ಸ್ಥಾಪನೆಗೆ ಮುಂದಾಗಬೇಕಿದೆ ಎಂದರು.
ಅರಸೀಕೆರೆ ತಾಲ್ಲೂಕಿನ ಮಾಡಾಳು ನಿರಂಜನಪೀಠದ ರುದ್ರಮುನಿ ಸ್ವಾಮೀಜಿ ಮಾತನಾಡಿ ಬಸವೇಶ್ವರರು 12ನೇ ಶತಮಾನದಲ್ಲಿಯೇ ತತ್ವ, ಸಿದ್ದಾಂತಗಳನ್ನು ಸಮಾಜಕ್ಕೆ ತಿಳಿಸಿಕೊಟ್ಟಿದ್ದರು. 889 ವರ್ಷಗಳು ಕಳೆದರೂ ಸಹ ಬಸವೇಶ್ವರರ ವಿಚಾರೆಧಾರೆಯೂ ಇಂದಿನ ಸಮಾಜಕ್ಕೂ ಮಾದರಿ ಆಗುತ್ತಿದೆ. ವಚನ ಸಾಹಿತ್ಯ ಇಲ್ಲದಿದ್ದರೆ ಕನ್ನಡ ಭಾಷೆಗೆ ಹೆಚ್ಚಿನ ಪ್ರೌಢಿಮೆ ದೊರಕಿಸಿಕೊಟ್ಟವರು ಬಸವೇಶ್ವರರು. ಇಂದಿನ ರಾಜಕಾರಣಿಗಳು ಕೇವಲ ಪರ್ಸಂಟೆಜ್ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ ಸಮಾಜದ ಏಳಿಗೆ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಧರ್ಮ ಮಾನ್ಯತೆ ವಿಚಾರದಲ್ಲಿ ಅನೇಕ ಗೊಂದಲಗಳಿದ್ದು, ವೀರಶೈವ-ಲಿಂಗಾಯಿತ ಎಂಬುದು ಇದೆ. ಎರಡರಲ್ಲಿ ಒಂದನ್ನು ಒಪ್ಪಿಕೊಂಡು ಹೋದರೆ ಮಾತ್ರವೇ ಧರ್ಮದ ಮಾನ್ಯತೆ ದೊರಕುತ್ತದೆಯೇ ಹೊರೆತು ವೀರಶೈವ ಲಿಂಗಾಯಿತ ಧರ್ಮ ಎಂದರೆ ಸಾಧ್ಯವಾಗುವುದಿಲ್ಲ. ಲಿಂಗಾಯಿತ ಧರ್ಮ ಮಾನ್ಯತೆ ಬೇಕು ಎಂದರೆ ಧರ್ಮ ಗ್ರಂಥ, ಧರ್ಮ ಗುರುಗಳು ಎಲ್ಲವುದರ ಅಗತ್ಯವಿದ್ದು ಬಸವೇಶ್ವರರ ಲಿಂಗಾಯಿತ ಧರ್ಮದ ಮಾನ್ಯತೆ ಕೇಳಿದರೆ ಶೀಘ್ರವೇ ದೊರಕುತ್ತದೆ ಜೊತೆಗೆ ಎಲ್ಲರಿಗೂ ಅನುಕೂಲವಾಗುತ್ತದೆ. ಆದರೆ ಧರ್ಮ ಮಾನ್ಯತೆ ಪಡೆಯಲು ತೆರಳಿದಾಗ ಕಳೆದ ಬಾರಿ ಹಿಮ್ಮೆಟ್ಟುವಂತೆ ಮಾಡಿದ್ದು ನಮ್ಮ ಸಮಾಜವೇ ಎನ್ನುವುದನ್ನು ಮನದಲ್ಲಿ ಇಟ್ಟುಕೊಂಡು ಲಿಂಗಾಯಿತ ಧರ್ಮ ಸ್ಥಾಪನೆಗೆ ಎಲ್ಲರೂ ಒಟ್ಟಾಗಿ ಮುಂದಾಗಬೇಕು ಎಂದರು.
ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ಸಮಾಜ ಅಭಿವೃದ್ಧಿ ಆಗಬೇಕಾದರೆ ಸಂಘಟನೆ ಬಹಳ ಮುಖ್ಯ. ಇದನ್ನು 11ನೇ ಶತಮಾನದ ಭಾಗದಲ್ಲಿ ಪಂಚರೇಣುಕಾಚಾರ್ಯರು ಹಾಗೂ ಬಸವೇಶ್ವರರು ಅರಿತು ಸಮಾಜದಲ್ಲಿದ್ದ ಪಿಡುಗುಗಳನ್ನು ಹೋಗಲಾಡಿಸಲು ಸರ್ವಜನಾಂಗದವರನ್ನು ಒಂದೆಡೆ ಸೇರಿಸಿ ಅರಿವು ಮೂಡಿಸಿ ಶುದ್ಧ ಕಾಯಕದ ತತ್ವವನ್ನು ಪ್ರತಿಪಾದಿಸಿದರು. ಇಷ್ಟಲಿಂಗ ಧಾರಣೆಯ ಮೂಲಕ ಅಂತರಂಗ-ಬಹಿರಂಗಗಳೆರಡನ್ನು ಶುದ್ಧಿಕರಿಸಿಕೊಂಡು ಬದುಕನ್ನು ಕಟ್ಟಿಕೊಳ್ಳುವ ಸುಂದರ ವಾತಾವರಣವನ್ನು ನಿರ್ಮಾಣ ಮಾಡಿದರು. ಬದುಕಿನ ಮೂಲ ತಳಹದಿಯಾದ ಧರ್ಮ, ಆಚಾರ-ವಿಚಾರಗಳನ್ನು ಸರಿಯಾಗಿ ಮೈಗೂಡಿಸಿಕೊಂಡು ಮುನ್ನಡೆಡೆದರೆ ಶಾಂತಿ, ನೆಮ್ಮದಿಯನ್ನು ಕಂಡುಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ ಅತಂತ್ರ ಸ್ಥಿತಿಯನ್ನು ತಲುಪಿ ಅಶಾಂತಿಯ ವಾತಾವರಣ ಸೃಷ್ಠಿಯಾಗುತ್ತದೆ ಎಂದರು.
ನಗರದ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಬಯಲು ರಂಗ ಮಂದಿರದವರಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ಬಸವೇಶ್ವರ ಹಾಗೂ ರೇಣುಕಾಚಾರ್ಯರ ಭಾವಚಿತ್ರಗಳ ಮೆರವಣಿಗೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶೀಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿಯ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ದೊಡ್ಡ ಮೇಟಿಕುರ್ಕೆಯ ಬೂದಿಹಾಳ್ ಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಹಾವೇರಿಯ ಹೊಸರಿತ್ತಿ ಮಠದ ಗುದ್ದಲೀಶ್ವರ ಸ್ವಾಮೀಜಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಸೋಮಶೇಖರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕಾಂಗ್ರೆಸ್ ಮುಖಂಡರುಗಳಾದ ಲೋಕೇಶ್ವರ, ಸಿ.ಬಿ.ಶಶಿಧರ್, ಕೆ.ಟಿ.ಶಾಂತಕುಮಾರ್, ಕುಮಾರ ಆಸ್ಪತ್ರೆಯ ಡಾ.ಶ್ರೀಧರ್, ಸಮಾಜದ ಮಡೆನೂರು ವಿನಯ್, ನಿಖಿಲ್ ರಾಜ್, ಸುದರ್ಶನ್, ಉಮೇಶ್, ಅಶೋಕ, ಶ್ವೇತಕುಮಾರ್ ಸೇರಿದಂತೆ ಹಲವರಿದ್ದರು.