ಜಿಲ್ಲೆತುಮಕೂರು
Trending

ಬಸವ ತತ್ವ,ಶರಣತತ್ವ ಏಕ ವ್ಯಕ್ತಿ ಮೌಲ್ಯಗಳಲ್ಲ: ಸಮಾಜದ ವೈರುದ್ಯಗಳಿಗೆ ಶರಣತತ್ವದಲ್ಲಿ ಪರಿಹಾರವಿದೆ : ಡಾ.ವೀರಣ್ಣ ರಾಜೂರ

ತುಮಕೂರು : ಬಸವ ತತ್ವ,ಶರಣತತ್ವ ಏಕ ವ್ಯಕ್ತಿ ಮೌಲ್ಯಗಳಲ್ಲ.ಬಹುತ್ವದಿಂದ ಕೂಡಿದ್ದು,ಇಂದು ನಡೆಯುತ್ತಿರುವ ಅನೇಕ ವೈರುದ್ಯಗಳಿಗೆ ಶರಣತತ್ವದಲ್ಲಿ ಪರಿಹಾರವಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಉಪನ್ಯಾಸಕ ಡಾ.ವೀರಣ್ಣ ರಾಜೂರ ಅಭಿಪ್ರಾಯಪಟ್ಟಿದ್ದಾರೆ.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಇತರೆ ವೀರಶೈವ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀರೇಣುಕಾಚಾರ್ಯರ, ಜಗಜ್ಯೋತಿ ಬಸವೇಶ್ವರರ, ಹಾಗೂ ಕಾಯಕಯೋಗಿ ಶ್ರೀಸಿದ್ದರಾಮೇಶ್ವರರ ಜಯಂತಿ ಹಾಗೂ ವೀರಶೈವ ಧರ್ಮ ಸಮ್ಮೇಳನ ಕಾರ್ಯಕ್ರಮದ ಉಪನ್ಯಾಸ ನೀಡುತ್ತಿದ್ದ ಅವರು,ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ,ತನ್ನ ಬಣ್ಣಿಸಬೇಡ, ಇದಿರ ಅಳಿಯಲು ಬೇಡ,ಇದೇ ಅಂತರಂಗ ಶುದ್ದಿ,ಇದೇ ಬಹಿರಂಗ ಶುದ್ದಿ ಎಂದು ಬಸವಣ್ಣನವರು ಏಳು ಸೂತ್ರಗಳನ್ನು ನೀಡಿದ್ದಾರೆ.ಅವುಗಳಂತೆ ನಡೆದುಕೊಂಡರೆ ಇಡೀ ದೇಶದಲ್ಲಿ ಶಾಂತಿ ನೆಲೆಸಲಿದೆ. ಮಹಾತ್ಮರನ್ನು ಹಂಚಿಕೊಂಡಿರುವ ಈ ಸಂದರ್ಭದಲ್ಲಿ ಸಿದ್ದರಾಮೇಶ್ವರ,ರೇಣುಕಾರಾಧ್ಯರು ಹಾಗು ಬಸವೇಶ್ವರ ಒಂದೇ ವೇದಿಕೆಯಲ್ಲಿ ಆಚರಿಸುತ್ತಿರುವುದು ಭಾವೈಕ್ಯತೆಯ ಸಂಕೇತವಾಗಿದೆ ಎಂದರು.

ಕೊಲಬೇಡ ಎಂದು ಹೇಳಿರುವುದು ಪ್ರಾಣಿಗಳನ್ನಷ್ಟೇ ಅಲ್ಲ. ಮನುಷ್ಯರನ್ನು ಸಹ ಕೊಲ್ಲಬೇಡ ಎಂಬುದಾಗಿದೆ. ಪರಧರ್ಮ, ಪರ ದೇವರ ಸಹಿಷ್ಣತೆಯನ್ನು ಪಾಲಿಸಬೇಕೆಂಬುದು ಬಸವಣ್ಣನವರ ಮೂಲ ತತ್ವಗಳಾಗಿವೆ. ಆದರೆ ಇಂದು ದೇವರು, ಧರ್ಮದ ಹೆಸರಿನಲ್ಲಿಯೇ ಕೋಮುಗಲಭೆಗಳು ನಡೆಯುತ್ತಿರುವುದು ಬಸವಣ್ಣನವರಿಗೆ ಮಾಡಿದ ಅಪಮಾನ.ವರ್ಗ, ವರ್ಣ ಲಿಂಗ ಭೇದ ಮಾಡಬಾರದು ಎಂಬುದನ್ನು ತಮ್ಮ ಅನುಭವ ಮಂಟಪದ ಮೂಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಬಸವಣ್ಣ.ಹಾಗಾಗಿ ಬಸವ ಅನುಯಾಯಿಗಳಾದ ನಾವುಗಳು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಡಾ.ವೀರಣ್ಣ ರಾಜೂರ ನುಡಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಕಾಯಕವೇ ಕೈಲಾಸ ಎಂಬುದು ಬಸವಣ್ಣನವರ ತತ್ವ, ಆದರೆ ನಾವು ಕಾಯಕವೇ ಇಲ್ಲದೆ ಕೈಲಾಸ ನೋಡಬೇಕೆಂದು ಹಂಬಲಿಸುತ್ತಿದ್ದೇವೆ.ಇದರಿಂದಾಗಿ ಸಮಾಜದಲ್ಲಿ ಮೋಸ, ಧಗ, ವಂಚನೆ ಹೆಚ್ಚಾಗಿದೆ.ಎಲ್ಲರೂ ದುಡಿದು ತಿಂದರೆ ಸಮಾಜದಲ್ಲಿ ಶಾಂತಿ ನೆಲಸಲಿದೆ.ಸಮಾಜಿಕ ಪರಿವರ್ತನೆಗೆ ಸಂಘ ಸಂಸ್ಥೆಗಳು ಕೆಲಸ ಮಾಡಬೇಕಾಗಿದೆ. ಅಸೂಯೆ ಬೀಡಬೇಕು,ಪರಸ್ವರ ಸಹಕಾರದಿಂದ ದುಡಿದರೆ ವೀರಶೈವ ಸಮಾಜ ಸಶಕ್ತವಾಗಲಿದೆ ಎಂದರು.
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಬಸವಣ್ಣನವರ ತತ್ವಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಅರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಸೇರೋಣ ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತುಮಕೂರು ನಗರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್ ಮಾತನಾಡಿ,ಸಮಾಜದವತಿಯಿಂದ ಧರ್ಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.ವೀರಶೈವ ಸಮಾಜದವತಿಯಿಂದ ಮೂರು ಜನ ಮಹನೀಯರನ್ನು ಒಂದೇ ವೇದಿಕೆಯಲ್ಲಿ ಜನ್ಮ ಜಯಂತಿಯ ಜೊತೆಗೆ,ಉತ್ಸವಗಳನ್ನು ಕಳೆದ 15 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ನಮ್ಮೊಂದಿಗೆ ವೀರಶೈವ ಮಹಾಸಭಾ ಸಹ ಕೈಜೋಡಿಸಿದೆ.ಹಾಗೆಯೇ ಎಲ್ಲರೂ ಸಹ ಈ ಕಾರ್ಯದಲ್ಲಿ ಕೈಜೋಡಿಸಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕನಕಪುರದ ಶ್ರೀದೇಗುಲ ಮಠದ ಶ್ರೀಚನ್ನಬಸವಮಹಾಸ್ವಾಮೀಜಿಗಳು ವಹಿಸಿದ್ದರು.
ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ವೀರಶೈವ ಮಹಾ ಸಭಾ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಪಟೇಲ್, ಸಿದ್ದಗಂಗಾ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಕೆ.ನಂಜುಂಡಪ್ಪ,ವೀರಶೈವ ಮಹಾಸಭಾದ ಬೆಂಗಳೂರು ಅಧ್ಯಕ್ಷ ಗುರುಸ್ವಾಮಿ, ರೇಣುಕಾರಾಧ್ಯ, ಟಿ,ಎನ್.ರುದ್ರೇಶ್, ನಿಶ್ಚಲ್, ರಾಮುಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker