ಎತ್ತಿನಹೊಳೆ ಯೋಜನೆಯಡಿ ಕಳ್ಳಂಬೆಳ್ಳ ಭಾಗದ ಎಲ್ಲಾ ಕೆರೆಗಳನ್ನೂ ಸೇರಿಸಿ : ನಂಜಾವಧೂತ ಶ್ರೀ
ಚಿಕ್ಕತಿಮ್ಮನಹಳ್ಳಿ ಶ್ರೀ ಕುನ್ನಾಲ ಕರಿಯಮ್ಮ ದೇವಸ್ಥಾನದ ಯಾತ್ರಿ ನಿವಾಸ ಉದ್ಘಾಟನೆ
ಶಿರಾ : ಎತ್ತಿನಹೊಳೆ ನೀರಾವರಿ ಯೋಜನೆಯಲ್ಲಿ ಶಿರಾ ತಾಲೂಕಿಗೆ 0.5 ಟಿಎಂಸಿ ನಿಗದಿಯಾಗಿದ್ದು ಇದರಲ್ಲಿ ಕಳ್ಳಂಬೆಳ್ಳ ಹೋಬಳಿಯ 6 ಕೆರೆಗಳು ಮಾತ್ರ ಎತ್ತಿನಹೊಳೆ ಯೋಜನೆ ವ್ಯಾಪ್ತಿಗೆ ಒಳ ಪಟ್ಟಿವೆ, ಉಳಿಕೆ ನೀರನ್ನು ಬುಕ್ಕಾಪಟ್ಟಣ ಹೋಬಳಿಯ ಹಲವಾರು ಕೆರೆಗೆ ಆರಿಸಲು ಮುಂದಾಗಿರುವ ಸರಕಾರದ ನಿಲುವು ಸ್ವಾಗತಾರ್ಹವಾಗಿದ್ದರು ಕಳ್ಳಂಬೆಳ್ಳ ವ್ಯಾಪ್ತಿಯ ರೈತರಿಗೆ ಅನ್ಯಾಯವಾಗಿದೆ ಇನ್ನು ಉಳಿಕೆ 23 ಕೆರೆಗಳಿದ್ದು ಈ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸಿದರೆ ಅನುಕೂಲ ಆಗಲಿದೆ ಎಂದು ಸ್ಪಟಿಕಪುರಿ ಸಂಸ್ಥಾನಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು ನುಡಿದರು.
ಅವರು ಸೋಮವಾರ ತಾಲೂಕಿನ ಕಳ್ಳಂಬೆಳ್ಳ ಹೋಬಳಿ ಚಿಕ್ಕತಿಮ್ಮನಹಳ್ಳಿ ಗ್ರಾಮದ ಶ್ರೀ ಕುನ್ನಾಲ ಕರಿಯಮ್ಮದೇವಿ ದೇವಸ್ಥಾನದ ಬಳಿ ಯಾತ್ರಿ ನಿವಾಸ ಕಟ್ಟಡ ಉದ್ಘಾಟನೆ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಆರ್ಶೀವಚನ ನೀಡಿದರು. ಕಳ್ಳಂಬೆಳ್ಳ ಭಾಗದ ಉಳಿದ 23 ಕೆರೆಗಳಿಗೆ ಸರಕಾರ ಎರಡನೇ ಹಂತದಲ್ಲಿ ಎತ್ತಿನಹೊಳೆ ಯೋಜನೆಯಲ್ಲಿ ಸೇರ್ಪಡೆಗೊಳಿಸಿ. ನೀರು ಹರಿಸಲಾಗುವುದು ಎಂದು ಹೇಳುತ್ತಿರುವುದು ಸರಿಯಲ್ಲ ಪ್ರಥಮ ಹಂತದಲ್ಲಿ ಕಳ್ಳಂಬೆಳ್ಳ ಹೋಬಳಿಯ 29 ಕೆರೆಗಳನ್ನು ಭರ್ತಿಮಾಡಿ ತದ ನಂತರ ಬೇರೆ ಕಡೆಗೆ ನೀರು ಹರಿಸುವ ಕೆಲಸ ಮಾಡಲಿ ಇಲ್ಲವೇ ಶಿರಾ ಭಾಗಕ್ಕೆ ನಿಗದಿಯಾಗಿರುವ ಎತ್ತಿನಹೊಳೆ ನೀರಿನ ಆಲೋಕೇಶನ್ ಹೆಚ್ಚಿಸಲು ಸರಕಾರ ಕ್ರಮ ಕೈಗೊಳ್ಳಲಿ ಎಂದು ಶ್ರೀಗಳು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಮಾಜಿಕ ಮತ್ತು ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿ ಅವರು ಮಾತನಾಡಿ ಕಳ್ಳಂಬೆಳ್ಳ ಭಾಗಕ್ಕೆ ಎತ್ತಿನ ಹೊಳೆ ಯೋಜನೆಯಡಿ 6 ಕೆರೆಗಳ ಸೇರ್ಪಡೆಯಾಗಿದ್ದು, ಉಳಿಕೆ ಕೆರೆಗಳ ಸೇರ್ಪಡೆಗೆ ಕ್ರಮ ಕೈಗೊಳ್ಳಾಗುವುದು ಹಾಗೂ ಚಿಕ್ಕತಿಮ್ಮನಹಳ್ಳಿ ಗ್ರಾಮದು ಹಲವು ಗ್ರಾಮಗಳನ್ನು ಸಂಪರ್ಕ ಕೇಂದ್ರವಾಗಿದ್ದು, ಈ ಸ್ಥಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವಂತೆ ಮತ್ತು ಪದವಿಪೂರ್ವ ಕಾಲೇಜು ಸ್ಥಾಪಿಸುವ ಬಗ್ಗೆ ರೇಷ್ಮೆ ನಿಗಮದ ಅಧ್ಯಕ್ಷರಾದ ಎಸ್.ಆರ್.ಗೌಡ ಅವರು ಮನವಿ ಮಾಡಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಶ್ರೀ ಕುನ್ನಾಲ ಕರಿಯಮ್ಮ ದೇವಸ್ಥಾನದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಮಾತನಾಡಿ ರಾಜ್ಯ ಸರಕಾರ ದೇವಸ್ಥಾನಗಳ ಅಭಿವೃದ್ಧಿಗೆ ಶಿರಾ ತಾಲ್ಲೂಕಿಗೆ 5 ಕೋಟಿ ಅನುದಾನ ನೀಡಿದೆ. ಶ್ರೀ ಕುನ್ನಾಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಶಾಸಕರ ಅನುದಾನದಿಂದ 10 ಲಕ್ಷ ನೀಡಲಾಗುವುದು ಎಂದ ಅವರು ಎತ್ತಿನಹೊಳೆ ಯೋಜನೆಯ ನೀರನ್ನು ಸಂಪೂರ್ಣವಾಗಿ ಕಳ್ಳಂಬೆಳ್ಳ ಭಾಗದ ಕೆರೆಗಳಿಗೆ ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯ ರೇಷ್ಮೆ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಅವರು ಮಾತನಾಡಿ ಎತ್ತಿನಹೊಳೆ ಯೋಜನೆಯಡಿ ಕಳ್ಳಂಬೆಳ್ಳ ಭಾಗದ 6 ಕೆರೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ ಈ ಭಾಗದ ಜನರಿಗೆ ತೊಂದರೆಯಾಗುತ್ತದೆ. 0.5 ಟಿಂಎಸಿ ನೀರಿನಲ್ಲಿ ಇನ್ನೂ 20 ಕ್ಕೂ ಹೆಚ್ಚು ಕೆರೆ ಸೇರಿಸಬಹುದು. ಆದ್ದರಿಂದ ಕೇಂದ್ರ ಸಚಿವರು ಕಳ್ಳಂಬೆಳ್ಳ ಕೆರೆಗಳನ್ನು ಸೇರಿಸಬೇಕು ಎಂದು ಮನವಿ ಮಾಡಿದರು. ಹಾಗೂ ಶ್ರೀ ಕುನ್ನಾಲಮ್ಮನ ದೇವಸ್ಥಾನದ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ನೀಡುವಂತೆ ಮನವಿ ಮಾಡಿದರು. ಈ ಭಾಗಕ್ಕೆ ಸರಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ ತೆರಯುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕಾರದ ಶಿವಯೋಗಿ ವೀರಬಸವ ಮಹಾಸ್ವಾಮಿಗಳು, ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ತಹಶೀಲ್ದಾರ್ ಮಮತಾ, ಭೂಪಸಂದ್ರ ಗ್ರಾಪಂ ಅಧ್ಯಕ್ಷ ವೈ.ಎಸ್.ಮಮತ, ತಾಳಗುಂದ ಗ್ರಾಪಂ ಅಧ್ಯಕ್ಷ ಪುಷ್ಪ ಗೋವಿಂದರಾಜು, ಮಾಜಿ ತಾ.ಪಂ. ಉಪಾಧ್ಯಕ್ಷ ರಂಗನಾಥ ಗೌಡ, ಮುದಿಮಡು ಮಂಜುನಾಥ ಸೇರಿದಂತೆ ಹಲವರು ಹಾಜರಿದ್ದರು.