ಬದಲಾದ ಜೀವನ ಶೈಲಿಯಿಂದ ವಿಭಿನ್ನ ಕಾಯಿಲೆಗಳು ಗೋಚರ: ಡಾ.ಸಿ.ಎಂ.ರಾಜೇಶ್ ಗೌಡ
ಶಿರಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಉಚಿತ ಆರೋಗ್ಯ ಮೇಳ
ಶಿರಾ : ತಂತ್ರಜ್ಞಾನದ ಯುಗದಲ್ಲಿ ಬದಲಾದ ಸನ್ನಿವೇಶದಿಂದ ನಾವೆಲ್ಲರೂ ತಿನ್ನುವ ಆಹಾರ, ಜೀವನ ಶೈಲಿಯಿಂದ ಮಾನಸಿಕ ಸ್ಥಿತಿಗತಿಗಳನ್ನು ಬದಲಾಯಿಸಿಕೊಂಡಿದ್ದೇವೆ. ಅದಕ್ಕೆ ಅನುಗುಣವಾಗಿ ವಿಭಿನ್ನವಾಗಿ ಕಾಯಿಲೆಗಳು ಗೋಚರಿಸುತ್ತಿವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಹೇಳಿದರು.
ಅವರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ 75ನೇ ವರ್ಷದ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಅಂಗವಾಗಿ ಆರೋಗ್ಯ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ತಾಲ್ಲೂಕುಮಟ್ಟದ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ಜಯದೇವ ಆಸ್ಪತ್ರೆಯಲ್ಲಿ 1000 ಮಂದಿ ಹೃದಯಾಘಾತದ ಚಿಕಿತ್ಸೆಗೆ ದಾಖಲಾದರೆ ಅದರಲ್ಲಿ ಶೇ. 35ರಷ್ಟು ಮಂದಿ 35 ರಿಂದ 40 ರ ವಯಸ್ಸಿನವರಾಗಿತ್ತಾರೆ. ಇದಕ್ಕೆ ಕಾರಣ ನಾವು ಅಳವಡಿಸಿಕೊಂಡ ಜೀವನ ಶೈಲಿ, ಮಾನಸಿಕ ಒತ್ತಡಗಳು ವಾಯು ಮಾಲಿನ್ಯ, ಜಲ ಮಾಲೀನ್ಯ, ರಾಸಾಯನಿಕ ಕೀಟ ನಾಶಕಗಳು ದೇಹದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದರು.
ಆಯುಷ್ಮಾನ್ ಕಾರ್ಡ್ನಿಂದ ಉಚಿತ ಚಿಕಿತ್ಸೆ: ಸಾಮಾನ್ಯ ಜನರಿಗೂ ಉಚಿತ ಆರೋಗ್ಯ ಸೌಲಭ್ಯ ದೊರಕಬೇಕು, ಎಲ್ಲರೂ ಆರೋಗ್ಯದಿಂದಿರಬೇಕು ಎಂಬುದೇ ಕೇಂದ್ರ ಮತ್ತು ರಾಜ್ಯ ಸರಕಾರಗಳ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ತಾಲ್ಲೂಕು ಮಟ್ಟದ ಸರಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಮೇಳಗಳನ್ನು ಏರ್ಪಡಿಸಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಸಾರ್ವಜನಿಕರು ಆಯುಷ್ಮಾನ್ ಕಾರ್ಡ್ ಬಗ್ಗೆ ಯಾರೂ ನಿರ್ಲಕ್ಷ ತೋರಬೇಡಿ. ಆಯುಷ್ಮಾನ್ ಕಾರ್ಡ್ ಮೂಲಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ದೊರಕದೇ ಇದ್ದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ 5 ಲಕ್ಷದವರೆಗೆ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಚಿಕಿತ್ಸೆ ದೊರೆಯುತ್ತದೆ ಇದರ ಸದ್ಭಳಕೆ ಮಾಡಿಕೊಳ್ಳಿ ಎಂದ ಅವರು ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಆರೋಗ್ಯ ಮೇಳಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ತಹಶೀಲ್ದಾರ್ ಮಮತ ಅವರು ಮಾತನಾಡಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಉಳ್ಳಂತಹ ಸಾರ್ವಜನಿಕ ಹಿತದೃಷ್ಟಿ ಕಾರ್ಯಕ್ರಮವಾದ ಆರೋಗ್ಯ ಮೇಳವನ್ನು ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ದೇಶ ಅತಿ ಕಡುಬಡವರು ಕೂಡ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಯಾವುದೇ ಕಾಯಿಲೆಗಳು ಬಂದತಹ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಆಘಾತಗಳಿಗೆ ಒಳಗಾಗದೆ ತಾಳ್ಮೆಯಿಂದ ಸರಕಾರದಿಂದ ಸಿಗುವ ಯೋಜನೆಗಳನ್ನು ಬಳಸಿಕೊಂಡು ಚಿಕಿತ್ಸೆ ಪಡೆಯಿರಿ. ಕೇಂದ್ರ ಸರಕಾರದ ಆಯುಷ್ಮಾನ್ ಆರೋಗ್ಯ ಭಾರತ ಯೋಜನೆಯಿಂದ 5 ಲಕ್ಷದವರೆಗೆ ಉಚಿತವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದ ಅವರು ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಆಯುಷ್ಮಾನ್ ಕಾರ್ಡ್ಗಳನ್ನು ಶಿರಾ ತಾಲ್ಲೂಕಿನಲ್ಲಿ ಸಾರ್ವಜನಿಕರಿಗೆ ನೀಡಲಾಗಿದೆ. ಇದಕ್ಕೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಸಂಚಾರಿ ಸೇವಾ ಕೇಂದ್ರ ಪ್ರಾರಂಭಿಸಿ ಅನುಕೂಲ ಮಾಡಿದ್ದಾರೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ಅವರು ಮಾತನಾಡಿ ಬದಲಾದ ಜೀವನ ಶೈಲಿಯಲ್ಲಿ ಕಾಯಿಲೆಯ ಸ್ವರೂಪವೂ ಬದಲಾಗುತ್ತಿವೆ. ಜೀವನ ಪದ್ಧತಿಗಳು, ಜೀವನ ಶೈಲಿಗಳು ಮಾನಸಿಕ ಒತ್ತಡಗಳಿಂದ ರೋಗಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ವೈದ್ಯವಿಜ್ಞಾದ ಅವಿಷ್ಕಾರದಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಯಶಸ್ವಿಯಾಗಿದ್ದೇವೆ. ಎರಡು ವರ್ಷದಲ್ಲಿ ಕೋವಿಡ್ ಎಂಬ ಸಾಂಕ್ರಾಮಿಕ ರೋಗವನ್ನು ಭಾರತ ಸರಕಾರ ವಿಶ್ವದಲ್ಲಿಯೇ ವೇಗವಾಗಿ ಲಸಿಕೆ ಕಂಡು ಹಿಡಿದು ಕೋವಿಡ್ ತಡೆಗಟ್ಟಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್.ಸಿ.ಆರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ.ಗೌಡ, ತಾಲೂಕು ವೈದ್ಯರ ಸಂಘದ ಅಧ್ಯಕ್ಷರ ಡಾ.ಕೆ.ರಾಮಕೃಷ್ಣ, ಡಾ.ತಿಮ್ಮರಾಜು, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ತಾ.ಪಂ. ಇ.ಓ. ಅನಂತರಾಜು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಲಕ್ಷೀಶ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಹನುಮಂತನಾಯ್ಕ ಸೇರಿದಂತೆ ಹಲವರು ಹಾಜರಿದ್ದರು.