ವಿಜೃಂಭಣೆಯಿಂದ ಜರುಗಿದ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ
ತುರುವೇಕೆರೆ : ತಾಲೂಕಿನ ಸೀಗೇಹಳ್ಳಿ ಗ್ರಾಮದ ಅಧಿದೇವತೆ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ ಬ್ರಹ್ಮರಥೋತ್ಸವವು ಭಕ್ತ ಸಾಗರದ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.
ಬ್ರಹ್ಮ ರಥೋತ್ಸವದ ಹಿನ್ನಲೆಯಲ್ಲಿ ದೇಗುಲದ ಸ್ಥಿರ ಹಾಗೂ ಉತ್ಸವ ಮೂರ್ತಿಗಳು ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದವು. ದೇಗುಲದ ಆವರಣ ಹಾಗೂ ಗ್ರಾಮದ ಪ್ರಮುಖ ಬೀದಿಗಳು ಬ್ರಹ್ಮರಥೋತ್ಸವದ ಅಂಗವಾಗಿ ಸಿಂಗಾರಗೊಂಡಿದ್ದವು.
ಬ್ರಹ್ಮರಥೋತ್ಸವದ ಅಂಗವಾಗಿ ಬೆಳಗಿನಿಂದ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ರಥೋತ್ಸವಕ್ಕೂ ಮುನ್ನ ಉತ್ಸವ ಮೂರ್ತಿಯ ನಡೆದ ಪ್ರಾಕಾರೋತ್ಸವ ಎಲ್ಲರ ಗಮನ ಸೆಳೆಯಿತು. ಬ್ರಹ್ಮರಥೋತ್ಸವಕ್ಕಾಗಿ ವಿಶೇಷಾಲಂಕೃತಗೊಂಡಿದ್ದ ತೇರಿನತ್ತ ಛತ್ರಿ, ಚಾಮರ ಹಾಗೂ ಮಂಗಳ ವಾದ್ಯಗಳೊಂದಿಗೆ ಸೇವೆಗಳೊಂದಿಗೆ ಸ್ವಾಮಿಯವರನ್ನು ಬರಮಾಡಿಕೊಳ್ಳುವ ಮೂಲಕ ರಥೋತ್ಸವಕ್ಕೆ ಅಣಿಗೊಳಿಸಲಾಯಿತು.ಶ್ರೀ ಆದಿಚುಂಚನಗಿರಿ ಮಠದ ಪ್ರಧಾನಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿಯವರು ತೇರಿಗೆ ವಿಶೇಷ ಪೂಜೆ ಸಲ್ಲಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಗೋವಿಂದ ನಾಮಸ್ಮರಣೆ ಮಾಡುತ್ತಾ ಭಕ್ತರು ತೇರನ್ನೆಳೆದರು, ತೇರಿನತ್ತ ಬಾಳೆಹಣ್ಣು,ದವನ ಬೀರುವ ಮೂಲಕ ಇಷ್ಟಾರ್ಥಗಳ ಕೋರಿಕೆಗಾಗಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ಪುಷ್ಪಾಲಂಕೃತ ತೇರಿನಲ್ಲಿ ವಿರಾಜಮಾನರಾಗಿದ್ದ ಲಕ್ಷ್ಮೀ ಸಹಿತ ವೆಂಕಟೇಶ್ವರ ಸ್ವಾಮಿಯವರನ್ನು ಕಣ್ತುಂಬಿಕೊಂಡ ಭಕ್ತರು ಪುನೀತರಾದರು, ರಥೋತ್ಸವದ ಅಂಗವಾಗಿ ಪಾನಕ , ಕೋಸಂಬರಿಯನ್ನು ವಿತರಿಸಲಾಯಿತು. ಆನಂತರ ನಡೆದ ದಾಸೋಹದಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು.
ಶಾಸಕ ಮಸಾಲಜಯರಾಮ್ ಮಾತನಾಡಿ ನಮ್ಮ ಮನೆದೇವರಾದ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ ಬ್ರಹ್ಮರಥೋತ್ಸವಕ್ಕೆ ಕುಟುಂಬದವರೊಂದಿಗೆ ಪಾಲ್ಗೊಂಡಿದ್ದೇನೆ, ಕೊರೊನೋ ಆತಂಕ ಕಡಿಮೆಯಾದ ಹಿನ್ನಲೆಯಲ್ಲಿ ರಥೋತ್ಸವ ನಡೆಸಲಾಗುತ್ತಿದೆ. ಕಳೆದ ವರ್ಷಗಳಂತೆ ಉತ್ತಮ ಮಳೆ ಬೆಳೆಯಾಗುವ ಮೂಲಕ ಕ್ಷೇತ್ರದ ಜನತೆ ಕ್ಷೇಮದಿಂದರಲಿ ಎಂದು ಭಗವಂತನಲ್ಲಿ ಬೇಡುತ್ತೇನೆ. ದೈವಾನುಗ್ರಹದಿಂದ ನನ್ನ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು ಮತ್ತಷ್ಟು ಕಾರ್ಯಗಳನ್ನು ಮಾಡುವ ಮೂಲಕ ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತೇನೆ ಎಂದರು.
ರಥೋತ್ಸವದಲ್ಲಿ ಆದಿಚುಂಚನಗಿರಿ ಮಠದ ಶ್ರೀ ಪ್ರಸನ್ನನಾಥಸ್ವಾಮೀಜಿ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಶ್ರೀಮತಿ ಸುನಂದಾಮಸಾಲಜಯರಾಮ್. ಗ್ರಾ.ಪಂ. ಅದ್ಯಕ್ಷ ಗಂಗಣ್ಣ, ಜಿ.ಪಂ. ಮಾಜಿ ಸದಸ್ಯ ಶ್ರೀನಿವಾಸ್, ಪಿ.ಎ.ಸಿ.ಎಸ್.ಅಧ್ಯಕ್ಷ ಚಂದ್ರಶೇಖರ್,ಬಿ.ಜೆ.ಪಿ.ಯುವ ಮುಖಂಡ ನಾಗರಾಜ್, ಬಾಬು,ಮರಿಯಪ್ಪ,ಕೃಷ್ಣಮೂರ್ತಿ ಅರ್ಚಕರಾದ ಸುಂದರದೀಕ್ಷಿತ್, ಸೇರಿದಂತೆ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು.