ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ. ವಿ. ಶ್ರೀರಾಮರೆಡ್ಡಿ ಇನ್ನಿಲ್ಲ

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ, ಖ್ಯಾತ ಜನಪರ ಹೋರಾಟಗಾರ ಜಿ ವಿ ಶ್ರೀರಾಮರೆಡ್ಡಿ ಶುಕ್ರವಾರ ಬೆಳಗ್ಗೆ 7.30ಕ್ಕೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿ ಸಿಪಿಐ(ಎಂ) ಪಕ್ಷದಿಂದ 1999, 2004ರಲ್ಲಿ ಬಾಗೇಪಲ್ಲಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿದ್ದರು. ಶಾಸಕರಾಗಿದ್ದ ಅವಧಿಯಲ್ಲಿ ಉತ್ತಮ ಸಂಸದೀಯ ಪಟು ಎನ್ನಿಸಿಕೊಂಡಿದ್ದರು.
ಅಧಿವೇಶನದಲ್ಲಿ ಕೇವಲ ತನ್ನ ಕ್ಷೇತ್ರವಲ್ಲದೆ ಇಡೀ ರಾಜ್ಯವನ್ನು ಪ್ರತಿನಿಧಿಸಿ ಮಾತನಾಡುತ್ತಿದ್ದ ಶ್ರೀರಾಮ ರೆಡ್ಡಿ ಸಿಪಿಐ(ಎಂ) ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ಸರ್ಕಾರದ ಜನ ವಿರೋಧಿ ನೀತಿಯನ್ನು ಕಟುವಾಗಿ ಟೀಕಿಸುತ್ತಿದ್ದರು. ವಿದ್ವತ್ತು, ಜನಪರ ಕಾಳಜಿ, ರಾಜ್ಯದ ಬಗೆಗಿನ ಮಾಹಿತಿಗೆ ಇಡೀ ಸದನ ತಲೆದೂಗುತ್ತಿತ್ತು. ಶ್ರೀರಾಮ ರೆಡ್ಡಿಯವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಸಿಎಂ ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯರ ಆಪ್ತರಾಗಿದ್ದರು.
ಸಿಪಿಐಎಂ ರಾಜ್ಯ ಕಾರ್ಯದರ್ಶಿಯಾಗಿದ್ದ ವೇಳೆ ರಾಜ್ಯದಲ್ಲಿ ಎಡಪಂಥೀಯ ಚಳುವಳಿಯನ್ನು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಶ್ರೀರಾಮ ರೆಡ್ಡಿಯವರದ್ದು. ಶ್ರೀರಾಮರೆಡ್ಡಿಯವರು ರಾಜಕಾರಣದಲ್ಲಿ ಸಕ್ರೀಯರಾಗಿದ್ದಷ್ಟೂ ದಿನ ಯುವಜನ ಸಂಘಟನೆ, ವಿದ್ಯಾರ್ಥಿ ಸಂಘಟನೆಗಳು, ರೈತ ಸಂಘಟನೆಗಳು ಸಕ್ರಿಯವಾಗಿದ್ದವು.
ರಾಜಕಾರಣದ ಜೊತೆ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದ ಜಿ ವಿಶ್ರೀರಾಮ ರೆಡ್ಡಿಯವರು ತನ್ನ ಕಾರ್ಯನಿರ್ವಹಣೆಯ ಅವಧಿಯಲ್ಲಿ ಸಂಸ್ಕೃತಿಕ ರಾಜಕಾರಣವನ್ನು ರಾಜ್ಯದೆಲ್ಲೆಡೆ ಚುರುಕುಗೊಳಿಸಿದ್ದರು. ರಾಜ್ಯದಲ್ಲಿರುವ ಹಲವು ಬಂಡಾಯ ಸಾಹಿತ್ಯ ಸಂಘಟನೆಗಳು, ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳನ್ನು ಕಟ್ಟುವಲ್ಲಿ ಶ್ರೀರಾಮರೆಡ್ಡಿಯವರು ಪ್ರಮುಖ ಪಾತ್ರ ವಹಿಸಿದ್ದರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್. ಎನ್. ಸುಬ್ಬಾರೆಡ್ಡಿ ವಿರುದ್ಧ ಕಣಕ್ಕಿಳಿದ್ದ ಇವರು 51,697 ಮತಗಳನ್ನು ಪಡೆದು ಸೋಲು ಕಂಡಿದ್ದರು. 2018ರಲ್ಲಿ ಪಕ್ಷದ ತತ್ವ ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡರು ಎಂಬ ಕಾರಣಕ್ಕೆ ಸಿಪಿಐ(ಎಂ) ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿತ್ತು. ಬಳಿಕವೂ ಅವರು ಜನರನ್ನು ಸೇರಿಸಿ ಹಲವು ಹೋರಾಟ ಮಾಡಿದ್ದರು.
ಸಂತಾಪ : ಮಾಜಿ ಶಾಸಕ ಜಿ. ವಿ. ಶ್ರೀರಾಮ ರೆಡ್ಡಿ ನಿಧನಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಂತಾಪ ಸೂಚಿಸಿದ್ದಾರೆ.