ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ : ದೇಶಕ್ಕೆ ಹೊಸ ಸಂದೇಶ ನೀಡಿದ ಪಂಜಾಬ್, ಜನಪರ ಆಡಳಿತ ನೀಡಲು ಎಎಪಿ ಬದ್ದ : ಸಂಚಾಲಕ ಡಾ.ವಿಶ್ವನಾಥ್
ತುಮಕೂರು : ಜೆ.ಪಿ. ಆಂದೋಲನದ ನಂತರ ಜನಸಾಮಾನ್ಯರು ರಾಜಕೀಯ ಪ್ರವೇಶಿಸಿ ಇತಿಹಾಸ ಸೃಷ್ಠಿಸಿದ ಹೆಗ್ಗಳಿಕೆ ಆಮ್ ಆದ್ಮಿ ಪಕ್ಷದ್ದಾಗಿದ್ದು ತುಮಕೂರು ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ತುಮಕೂರು ಜಿಲ್ಲಾ ಸಂಚಾಲಕ ಡಾ|| ವಿಶ್ವನಾಥ್ ತಿಳಿಸಿದರು.
ಅವರು ತುಮಕೂರಿನಲ್ಲಿ ಅಂಬೇಡ್ಕರ್ ಜಯಂತಿಯಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೆಹಲಿಯ ಜನತೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಯನ್ನು ಸತತ ಮೂರನೇ ಬಾರಿಗೆ ಚುನಾಯಿಸುವುದರ ಮೂಲಕ ಜನಪರ ಸರ್ಕಾರ ಎಂದು ಘೋಷಿಸಿದ್ದಾರೆ ಎಂದರು.
ನಗರ ಕೇಂದ್ರಿತ, ದೆಹಲಿಗಷ್ಟೆ ಸೀಮಿತ, ಹಳ್ಳಿ ಕಡೆ ನೆಲೆಯಿಲ್ಲದ ರಾಜಕೀಯ ಪಕ್ಷ ಎಂದು ಅವಹೇಳನ ಮಾಡುತ್ತಿದ್ದ ಕಾಂಗ್ರೆಸ್, ಬಿಜೆಪಿ ಮತ್ತಿತರೆ ರಾಜಕೀಯ ಪಕ್ಷಗಳಿಗೆ ಪಂಜಾಬ್‌ನಲ್ಲಿ ಆಮ್ ಆದ್ಮಿಯನ್ನು ಅಧಿಕಾರಕ್ಕೆ ತರುವ ಮೂಲಕ ಆ ರಾಜ್ಯದ ಜನತೆ ಇಡೀ ದೇಶಕ್ಕೆ ಹೊಸ ಸಂದೇಶವನ್ನು ನೀಡಿದ್ದಾರೆ.
ದೆಹಲಿಯ ಜನಪರ ಆಡಳಿತ ಪಂಜಾಬ್‌ನಲ್ಲಿ ಆಮ್ ಆದ್ಮಿಗೆ ಅಧಿಕಾರ ಹಿಡಿಯಲು ಸಹಕಾರಿಯಾಯಿತು ಎನ್ನುವುದು ಗಮನಾರ್ಹ. ಉಚಿತ ಉತ್ತಮ ಶಿಕ್ಷಣ, ಉಚಿತ ಉತ್ತಮ ಚಿಕಿತ್ಸೆ, ವಿಶ್ವ ದರ್ಜೆಯ ಆಸ್ಪತ್ರೆಗಳು, ಉಚಿತ ಬಸ್ ಪ್ರಯಾಣ, ಮನೆಯ ಬಾಗಿಲಿಗೆ ಸರ್ಕಾರಿ ಸೇವೆಗಳು, ಉತ್ತಮ ರಸ್ತೆಗಳ ಮೂಲಕ ಜನಸಾಮಾನ್ಯರಿಗೆ ಭರವಸೆ ಮೂಡಿಸಿದ ಪರಿಣಾಮ ದೇಶಾದ್ಯಂತ ಆಮ್ ಆದ್ಮಿ ಬಗ್ಗೆ ಚರ್ಚೆಗೆ ಕಾರಣವಾಯಿತು. ಇದೇ ಜನಪರ ಆಡಳಿತವನ್ನು ಪಂಚಾಬ್‌ನಲ್ಲಿ ನೀಡಲು ಸಿದ್ದತೆ ನಡೆದಿದೆ ಎಂದು ತಿಳಿಸಿದರು.
ಸದಸ್ಯತ್ವ ಅಭಿಯಾನ :
ಆಮ್ ಆದ್ಮಿ ಪಂಜಾಬ್ ವಿಜಯದ ನಂತರ ದೇಶಾದ್ಯಂತ ಬಹಳ ಜನ ಪಕ್ಷ ಸೇರುತ್ತಿದ್ದಾರೆ. ಸಾಮಾನ್ಯ ಜನ ಜಡ್ಡುಗಟ್ಟಿರುವ ವ್ಯವಸ್ಥೆಯಿಂದ ಬೇಸತ್ತಿದ್ದು ಆಮ್ ಆದ್ಮಿಯತ್ತ ನೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ದೆಹಲಿ, ಪಂಜಾಬ್ ಗೆದ್ದಾಗಿದೆ, ಕರ್ನಾಟಕ ಸಿದ್ಧವಾಗಿದೆ ಆಮ್ ಆದ್ಮಿ ಕೇಜ್ರಿವಾಲ್‌ರಿಗೆ ಒಂದು ಅವಕಾಶ ಕೊಡಿ ಎಂಬ ಘೋಷಣೆಯಡಿ 7669400410 ನಂಬರ್‌ಗೆ ಮಿಸ್ ಕಾಲ್ ನೀಡಿ ಸದಸ್ಯರಾಗುವಂತೆ ಡಾ|| ವಿಶ್ವನಾಥ್ ಮನವಿ ಮಾಡಿದರು. ಮಾಹಿತಿಗಾಗಿ 9980555144, 8553408266, 9449746844 ಸಂಪರ್ಕಿಸುವಂತೆ ಮನವಿ ಮಾಡಿದರು.
ದೆಹಲಿ ಮಾದರಿ :
ತುಮಕೂರು ನಗರ ಘಟಕದ ಅಧ್ಯಕ್ಷ ಮುನೀರ್ ಅಹಮದ್ ಮಾತನಾಡಿ ಪಂಜಾಬ್ ಗೆಲುವಿನ ನಂತರ ದೇಶಾದ್ಯಂತ ಆಮ್ ಆದ್ಮಿ ಪಕ್ಷದ ಅಲೆ ಎದ್ದಿದೆ. ತುಮಕೂರು ಜಿಲ್ಲಾದ್ಯಂತ ಪಕ್ಷಕ್ಕೆ ಸೇರ್ಪಡೆಗೊಳ್ಳಲು ದಿನನಿತ್ಯ ಜನತೆ ತಮ್ಮನ್ನು ಸಂಪರ್ಕಿಸುತ್ತಿದ್ದು, ಈಗಾಗಲೇ ಬೆಂಗಳೂರಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್‌ರಾವ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ತುಮಕೂರಿನಲ್ಲೂ ಸಹ ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಸಂಪರ್ಕಿಸಿದ್ದು ಪಕ್ಷಕ್ಕೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು. ಮುಂದಿನ 5 ತಿಂಗಳ ಕಾಲಾವದಿಯಲ್ಲಿ ಪ್ರತಿ ತಾಲ್ಲೂಕಿನಲ್ಲೂ ಸುಮಾರು 10 ಸಾವಿರ ಸದಸ್ಯತ್ವವನ್ನು ಮಾಡುವ ಗುರಿ ಹೊಂದಲಾಗಿದೆ ಎಂದರು. ತುಮಕೂರು ಜಿಲ್ಲಾ ಮಾಧ್ಯಮ ವಕ್ತಾರ ನಾಗೇಶ್ ಮಾತನಾಡಿ, ಕೇವಲ 7 ವರ್ಷಗಳ ಅವದಿಯಲ್ಲಿ ದೆಹಲಿಯಲ್ಲಿ ಅತ್ಯುತ್ತಮ ಸೇವೆ ಒದಗಿಸಿ ದೆಹಲಿ ಮಾದರಿ ಎಂದೇ ಖ್ಯಾತವಾಗಿರುವ ಕೇಜ್ರಿವಾಲ್‌ರ ಆಮ್ ಆದ್ಮಿ ಮಾಡಲ್‌ಅನ್ನು ದೇಶಾದ್ಯಂತ ಭವಿಷ್ಯದ ಜನಾಂಗಕ್ಕಾಗಿ ವಿಸ್ತರಿಸಲು ನಿರ್ದರಿಸಲಾಗಿದ್ದು ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಕೆ.ಎಸ್.ಆರ್.ಟಿ.ಸಿ ನೌಕರ ಬಷೀರ್ ಅಹಮದ್, ನಾರಾಯಣಮೂರ್ತಿ,ಪಕ್ಷಕ್ಕೆ ಸೇರ್ಪಡೆಗೊಂಡರು.
ಸುದ್ದಿಗೋಷ್ಠಿಯಲ್ಲಿ ಗುಬ್ಬಿ ತಾಲ್ಲೂಕು ಪ್ರಭಾರ ಉಸ್ತುವಾರಿ ಪ್ರಭುಸ್ವಾಮಿ, ಗೋವರ್ದನ್, ಪ್ರೇಮ್‌ಕುಮಾರ್, ಕಾರ್ತಿಕ್, ಮಾರುತಿ, ಗುಬ್ಬಿ ಮಂಜುನಾಥ್, ಕುಣಿಗಲ್‌ನ ವಕೀಲ ಲೋಕೇಶ್, ಜಯರಾಮಯ್ಯ, ಶಿರಾ ಶಶಿಕುಮಾರ್, ಮೋಹನ್‌ಕುಮಾರ್ ಇದ್ದರು.