ಏ. 21 ರಂದು ಬೆಂಗಳೂರಿನಲ್ಲಿ ರೈತರ ಬೃಹತ್ ಸಮಾವೇಶ
ಹುಳಿಯಾರು: ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ಚಿಂತನೆ ನಡೆದಿದ್ದು, ಅದಕ್ಕೆ ಪೂರ್ವಭಾವಿಯಾಗಿ ಇದೇ 21 ರಂದು ಬೆಂಗಳೂರಿನಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ತಿಳಿಸಿದರು.
ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ರೈತರ ಬೃಹತ್ ಸಮಾವೇಶದಲ್ಲಿ ಆಮ್ ಆದ್ಮಿ ಪಕ್ಷದ ಅರವಿಂದ ಕ್ರೇಜಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಭಾಗವಹಿಸಿ ದೇಶದ ಬೆನ್ನೆಲುಬಾಗಿರುವ ರೈತರ ಮುಂದೆ ಪರ್ಯಾಯ ರಾಜಕಾರಣದ ಚಿಂತನೆಯನ್ನು ಮಂಡಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸದ್ಯ ಪವರ್ ಪಾಲಿಟಿಕ್ಸ್ ನಡೆದಿದ್ದು, ಅಧಿಕಾರ ಹಿಡಿಯಲು ಏನೆಲ್ಲ ವಂಚನೆ -ಮೋಸದ ತಂತ್ರಗಳನ್ನು ಅನುಸರಿಸಲಾಗುತ್ತಿದೆ. ಪಕ್ಷಗಳು–ವ್ಯಕ್ತಿಗಳಿಗೆ ಒಂದು ಸಿದ್ಧಾಂತ ಎಂಬುದೇ ಇಲ್ಲದಾಗಿದೆ ಎಂದು ಅವರು ಟೀಕಿಸಿದರಲ್ಲದೆ ಕೇಂದ್ರ ಸರ್ಕಾರ ಬಂಡವಾಳಶಾಹಿ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಿದೆ. 1995 ರ ನಂತರ ದೇಶದಲ್ಲಿನ ಎಲ್ಲ ಸಾರ್ವಜನಿಕ ಉದ್ದಿಮೆಗಳನ್ನು ಸಂಪೂರ್ಣ ಕಾರ್ಪೋರೇಟ್ ಕಂಪನಿಗಳಿಗೆ ವಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಕೃಷಿಯನ್ನೂ ಸಹ ಕಾರ್ಪೇರೇಟ್ ವಲಯಕ್ಕೆ ವಹಿಸುವ ದಿಕ್ಕಿನಲ್ಲಿ ರಾಜ್ಯದಲ್ಲಿ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ, ಗೋಹತ್ಯೆ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಆದರೆ ಕೇಂದ್ರ ಸರ್ಕಾರ ತನ್ನ ತಪ್ಪಿನ ಅರಿವಾಗಿ ಕಾಯ್ದೆಗಳನ್ನು ಹಿಂಪಡೆದಿದ್ದರೂ ಸಹ ರಾಜ್ಯ ಸರ್ಕಾರ ಕೃಷಿ ಸಂಬಂಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲು ಮೀನಾಮೇಷ ನೋಡುತ್ತಿದ್ದು ಈ ಸಮಾವೇಶದ ಮೂಲಕ ಸರ್ಕಾರಕ್ಕೆ ಕೊನೆಯ ಎಚ್ಚರಿಗೆ ನೀಡಲಾಗುವುದು ಎಂದರು.
ದೇಶದಲ್ಲಿ ಸದ್ಯ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ಆಗಿದೆ. ಔಷಧಗಳ ಬೆಲೆಯನ್ನೂ ಶೇ 11 ರಷ್ಟು ಹೆಚ್ಚಿಸಲಾಗಿದೆ. ಹಾಗಾಗಿ ಬೆಲೆ ಏರಿಕೆ ತಡೆಯುವುದು ಸೇರಿದಂತೆ ಸಮಾವೇಶದಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ, ಗ್ರಾಮೀಣ ಕೈಗಾರಿಕೆಗೆ ಆಧ್ಯತೆ ನೀಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಕಂದಿಕೆರೆ ನಾಗರಾಜು, ತಾಲೂಕು ಗೌರವ ಅಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ, ತಮ್ಮಡಿಹಳ್ಳಿ ಮಲ್ಲಿಕಾರ್ಜುನ್, ದಸೂಡಿ ನಾಗರಾಜು, ಸೀಗೇಬಾಗಿ ಬನಜ್ಜ, ಲೋಕಣ್ಣ, ದೊಡ್ಡಬಿದರೆ ಮಂಜುನಾಥ್, ರಾಂಪುರ ಚೇತನ್, ತಮ್ಮಡಿಹಳ್ಳಿಕಾಟಜ್ಜ, ಹುಳಿಯಾರು ದಾಸಪ್ಪ, ಕಂಪನಹಳ್ಳಿ ಮರುಳಪ್ಪ ಮತ್ತು ಯೋಗಣ್ಣ ಉಪಸ್ಥಿತರಿದ್ದರು.