ಸದಾಶಿವ ಆಯೋಗ ಜಾರಿಗೆ ಮುಂದಾಳತ್ವವಹಿಸಲು ಶಾಸಕ ಡಾ.ಜಿ.ಪರಮೇಶ್ವರ್ ಗೆ ಮಾದಿಗ ಸಮುದಾಯದ ಮುಖಂಡರುಗಳ ಮನವಿ
ಒಳಮೀಸಲಾತಿ ಜಾರಿಗೆ ಶ್ರಮಿಸುತ್ತೇನೆ : ಡಾ.ಜಿ.ಪರಮೇಶ್ವರ್
ತುಮಕೂರು : ನಾನು ಮಾದಿಗರ ಪರವಾಗಿದ್ದು ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ ನಾನು ಎಂದಿಗೂ ಒಳಮೀಸಲಾತಿ ವಿರೋಧವಾಗಿ ನಡೆದುಕೊಂಡಿಲ್ಲ ನಾನು ಈವರೆಗೂ ರಾಜಕಾರಣದಲ್ಲಿ ಬೆಳೆದುಬಂದಿದ್ದು ಮಾದಿಗ ಸಮುದಾಯದ ಆಶೀರ್ವಾದದಿಂದ ಉಪ ಮುಖ್ಯಮಂತ್ರಿಯಾದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಲಿ ಶಾಸಕ ಡಾ.ಜಿ. ಪರಮೇಶ್ವರ್ ತಿಳಿಸಿದರು.
ನಗರದ ಸಿದ್ದಾರ್ಥ ಕಾಲೇಜಿನಲ್ಲಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾದಿಗ ಸಮುದಾಯದ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಪರಮೇಶ್ವರ್ ಅವರು ನಾನು ಯಾವತ್ತಿಗೂ ಒಳಮೀಸಲಾತಿಯ ಪರವಾಗಿದ್ದು, ಜಾರಿಗೆ ಶ್ರಮಿಸುತ್ತೇನೆ. ಒಳಮೀಸಲಾತಿಯ ವಿಚಾರವಾಗಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಇದರ ಬಗ್ಗೆ ಸರ್ಕಾರಕ್ಕೆ ಗಮನ ಸೆಳೆಯಲಿದ್ದು ಮುಖ್ಯಮಂತ್ರಿಗಳಿಗೆ ಈ ವಿಚಾರವಾಗಿ ಪತ್ರ ಬರೆಯುತ್ತೇನೆ ಎಂದು ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದರು.
ರಾಜ್ಯಾದ್ಯಂತ ಪರಿಶಿಷ್ಟ ಜಾತಿಯಲ್ಲಿ ಮಾದಿಗ ಜನಾಂಗವು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಸ್ವಾತಂತ್ರ‍್ಯಾ ನಂತರ ಸುಮಾರು 15 ವರ್ಷಗಳಲ್ಲಿ ಪರಿಶಿಷ್ಟ ಜಾತಿಯ ಕೆಲವರು ಮೀಸಲಾತಿ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಮಾದಿಗ ಜನಾಂಗವು ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಔದ್ಯೋಗಿಕ ರಂಗಗಳಲ್ಲಿ ಸೌಲಭ್ಯವಂಚಿತರಾಗಿ ರಾಜ್ಯದ ಪ್ರಗತಿಯಲ್ಲಿ ಒಂದು ಅಂಗವಿಕಲತೆಯ ಕುರುಹಾಗಿ ಉಳಿದುಕೊಂಡಿದೆ.
ಹಾಗಾಗಿ ಈ ಕೂಡಲೇ ಮಾದಿಗ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಿ ಸದಾಶಿವ ಆಯೋಗ ವರದಿ ಜಾರಿ ಮಾಡಲು ಮುಂದಾಳತ್ವ ವಹಿಸಿ ಬೆಂಬಲಿಸುವಂತೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೆ ಮಾದಿಗ ಸಮುದಾಯದ ವಿವಿಧ ಮುಖಂಡರು ಮನವಿ ಸಲ್ಲಿಸಿದರು.
ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಔದ್ಯೋಗಿಕ ರಂಗಗಳಲ್ಲಿ ಸರ್ಕಾರವು ಶೇ.15ರ ಮೀಸಲಾತಿಯನ್ನು ಸಮರ್ಪಕವಾಗಿ ಆಯಾ ಜಾತಿ ಜನಸಂಖ್ಯೆಯ ಆಧಾರದಲ್ಲಿ ಹಂಚಿಕೆ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಾಗಿರುವ ಈ ಅನ್ಯಾಯವನ್ನು ಸರಿಪಡಿಸಲು ಅನೇಕ ರೀತಿಯ ಹೋರಾಟಗಳ ಮುಖಾಂತರ ಸರ್ಕಾರದ ಗಮನ ಸೆಳೆದು, ನಿಯೋಗಗಳ ಮುಖಾಂತರ ಸರ್ಕಾರಗಳಿಗೆ ಮನವಿ ಮಾಡಲಾಗಿದೆ.
ಕಳೆದ ಎರಡು ದಶಕಗಳಿಂದ ಕರ್ನಾಟಕ ರಾಜ್ಯದಲ್ಲಿ ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಹೆಸರಿನಲ್ಲಿ ರಾಜ್ಯಾದ್ಯಂತ ಹತ್ತು ಹಲವು ರೀತಿಯ ವಿನೂತನ ಹಾಗೂ ವಿಶೇಷ ರೀತಿಯಲ್ಲಿ ಉಗ್ರ ಪ್ರತಿಭಟನೆಗಳ ನಡೆಯುತ್ತಿದ್ದರೂ ಸರ್ಕಾರ ಕಿಮ್ಮತ್ತೂ ನೀಡಿಲ್ಲ ಈ ಕಾರಣದಿಂದಾಗಿ ದಲಿತ ಮುಖಂಡರಾದ ನೀವು ಈ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು.
ಬಿಜೆಪಿ ಪಕ್ಷ ಚುನಾವಣೆ ಸಂದರ್ಭದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸುವುದಾಗಿ ಹೇಳಿ ಮುಗ್ಧ ಮಾದಿಗರನ್ನು ಯಾಮಾರಿಸಿ ಪ್ರಬಲ ಜಾತಿಗಳನ್ನು ಅಭಿವೃದ್ಧಿಗೊಳಿಸಲು ಮುಂದಾಗಿದೆ. 2020ರ ಶಿರಾ ಉಪಚುನಾವಣೆಯಲ್ಲೂ ಕೂಡ ಒಳಮೀಸಲಾತಿಯನ್ನು ಜಾರಿಗೊಳಿಸುವುದಾಗಿ ಸುಳ್ಳು ಹೇಳಿ ಬಿಜೆಪಿ ಪಕ್ಷ ಅಧಿಕಾರ ಮಾಡುತ್ತಿದೆ ಇದರಿಂದಾಗಿ ತಾವುಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಇದರ ಪರ ಹೋರಾಟ ನಡೆಸಿ, ಸದನದಲ್ಲಿ ಸರ್ಕಾರದ ಗಮನ ಸೆಳೆದು ಮಾದಿಗ ಸಮುದಾಯಕ್ಕೆ ಸಾಮಾಜಿಕವಾಗಿ ಬರಬೇಕಾದ ಮೀಸಲಾತಿಯನ್ನು ಕೊಡಿಸಬೇಕೆಂದು ವಿವಿಧ ಮುಖಂಡರುಗಳು ಒತ್ತಾಯಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಮಾದಿಗ ಸಮುದಾಯದ ಮುಖಂಡ ವಾಲೆ ಚಂದ್ರಯ್ಯ, ಮಾದಿಗ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೊಡಿಯಾಲ ಮಹಾದೇವ್, ಸೂರ್ಯ ಆಸ್ಪತ್ರೆಯ ಲಕ್ಷ್ಮಿಕಾಂತ್, ಮಾರುತಿ ಗಂಗಹನುಮಯ್ಯ, ಸ್ವಾಭಿಮಾನಿ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಬಂಡೆ ಕುಮಾರ್, ಮರಿ ಚೆನ್ನಮ್ಮ, ರಂಜನ್, ಪಿ.ರಾಮಯ್ಯ, ಬಿಡಿಪುರ ಸುರೇಶ್, ಜಯರಾಮಯ್ಯ, ಹೊಳವನಹಳ್ಳಿ ಕಿಶೋರ್, ಶಂಕರ್, ನರಸಿಂಹಯ್ಯ ಗುಳಹರಿವೆ ಸೆರಿದಂತೆ ಇತರರು ಹಾಜರಿದ್ದರು.