ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಿಜಾಬ್, ದುಪ್ಪಟ್ಟ ಧರಿಸಿ ಬಂದ ವಿದ್ಯಾರ್ಥಿಗಳು
ತಿಪಟೂರು : ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಹಿಜಾಬ್, ದುಪ್ಪಟ್ಟ ಧರಿಸಿ ಕೆಲ ವಿದ್ಯಾರ್ಥಿಗಳು ಆಗಮಿಸಿದ್ದು ಪರೀಕ್ಷೆಗೂ ಮುಂಚಿತವಾಗಿಯೇ ತೆರವು ಮಾಡಿಸಿ ಪರೀಕ್ಷೆ ಬರೆಸುವಲ್ಲಿ ಯಶಸ್ವಿಯಾದ ಘಟನೆ ನಡೆದಿದೆ.
ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರದಿಂದ ಪ್ರಾರಂಭವಾಗಿದ್ದು ಧಾರ್ಮಿಕ ಭಾವನೆ ಪ್ರತಿನಿಧಿಸುವ ಯಾವುದೇ ವಸ್ತ್ರಗಳಿಗೆ ಅವಕಾಶ ಇಲ್ಲ ಎಂದು ಸ್ಪಷ್ಟನೆಯ ನಡುವೆಯೂ ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಕೆಲ ವಿದ್ಯಾರ್ಥಿಗಳು ಆಗಮಿಸಿದ ಘಟನೆ ತಿಪಟೂರಿನಲ್ಲಿ ನಡೆದಿದೆ.
ನಗರದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿನ ಪರೀಕ್ಷಾ ಕೇಂದ್ರಕ್ಕೆ ಸುಮಾರು 10-15 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಪರೀಕ್ಷಾ ಕೇಂದ್ರದ ಗೇಟ್ ಬಳಿಯಲ್ಲಿ ಯಾವುದೇ ಸೂಚನೆ ನೀಡದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದವರೆವಿಗೂ ತೆರಳಿ ಕುಳಿತುಕೊಂಡಿದ್ದರು. ವಿಷಯ ತಿಳಿದ ಪರೀಕ್ಷಾ ಕೇಂದ್ರದ ಅಧಿಕಾರಿ ಉಮೇಶ್ ಗೌಡ ನೇತೃತ್ವದಲ್ಲಿ ಎಲ್ಲಾ ಕೊಠಡಿಗಳಿಗೂ ತೆರಳಿ ವಿದ್ಯಾರ್ಥಿನಿಯರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ಗೇಟ್ ಬಳಿಯಲ್ಲಿ ಹಿಜಾಬ್ ತೆರವು ಮಾಡಲು ಪ್ರತ್ಯೇಕ ಕೊಠಡಿ ಇಲ್ಲದ ಕಾರಣ ಪರೀಕ್ಷಾ ಕೇಂದ್ರದ ವರೆವಿಗೂ ಬರಬೇಕಾಯಿತು ಎಂದು ತಿಳಿಸಿದ ವಿದ್ಯಾರ್ಥಿಗಳು ನಂತರ ಹಿಜಾಬ್, ದುಪ್ಪಟ್ಟ ತೆಗೆದು ಪರೀಕ್ಷೆ ಬರೆದಿದ್ದಾರೆ. ಇನ್ನೂ ಉಳಿದಂತೆ ಹಲವು ವಿದ್ಯಾರ್ಥಿಗಳು ಎಂದಿನಂತೆ ಸಮವಸ್ತ್ರ ಧರಿಸಿ ಶಿಸ್ತಿನಿಂದ ಸರಿಯಾದ ಸಮಯಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ.
ತಿಪಟೂರು ತಾಲ್ಲೂಕಿನಲ್ಲಿ ಸೋಮವಾರ ಪ್ರಥಮ ಭಾಷೆ ವಿಷಯವನ್ನು ಸುಮಾರು 2839 ವಿದ್ಯಾರ್ಥಿಗಳು ತೆಗೆದುಕೊಂಡಿದ್ದು ಅದರಲ್ಲಿ 2773 ಹಾಜರಾಗಿದ್ದು ಒಟ್ಟು 66 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಲಾಗುತ್ತಿತ್ತು. ಒಟ್ಟಾರೆ ಶಾಂತಿಯುತವಾಗಿ ಪರೀಕ್ಷೆ ನಡೆದಿದೆ.