ಶಿರಾ : ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಜನರು ಕುಳಿತುಕೊಳ್ಳಲು ಹಾಕಿಸಿರುವ ಕುರ್ಚಿಗಳ ಮೇಲೆ ಕೊಡುಗೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಎಂದು ಹಾಕಿರುವ ಹೆಸರನ್ನು ಕೂಡಲೇ ಶಾಸಕರು ತೆಗೆಸಬೇಕು. ಇಲ್ಲವೇ ಇಲಾಖೆ ತೆಗೆದು ಹಾಕಬೇಕು. ಇಲ್ಲದೇ ಹೋದರೆ ಇದು ಶ್ವೇಚಾಚಾರದ ಆಡಳಿತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಅವರು ನಗರದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ತುರ್ತು ಕೆಲಸಗಳಿ ಮಾತ್ರ ಬಳಸಿಕೊಳ್ಳುವುದಕ್ಕಾಗಿ ಸರಕಾರ ಬಿಡುಗಡೆ ಮಾಡುವ ಅನುದಾನ. ಆದರೆ ಶಿರಾ ಶಾಸಕರು ಈಗಾಗಲೇ ತಮ್ಮ ಸ್ವಂತ ಕರ್ಚಿನಿಂದ ಹಾಕಿಸಿರುವುದಾಗಿ ಅವರೇ ಹೇಳುತ್ತಾರೆ. ಆದರೆ ಮತ್ತೊಮ್ಮೆ ಸರಕಾರದಿಂದ ಹಾಕಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿರುವ ಟಿ.ಬಿ.ಜಯಚಂದ್ರ ಅವರು ಹೋಗಲಿ ಕುರ್ಚಿಗಳನ್ನು ಹಾಕಿಸಿದ ನಂತರ ಇಲ್ಲಿಯವರೆಗೂ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಸಾರ್ವಜನಿಕರು ಕುಳಿತುಕೊಳ್ಳುವ ಕುರ್ಚಿಗಳಿಗೆ 40 ಲಕ್ಷ ಅನುದಾನ ನೀಡಿದ್ದೇನೆ ಎಂದು ಏಕೆ ಹೇಳುತ್ತಿಲ್ಲ. ಇತ್ತೀಚೆಗೆ ನಾನು ಒಂದು ವಿಡಿಯೋದಲ್ಲಿ ನೋಡಿದ ಹಾಗೆ ಅವರ ಆಪ್ತ ಸಹಾಯಕ ಹೇಳುತ್ತಾರೆ. ಸಾರ್ವಜನಿಕರು ಕುಳಿತುಕೊಳ್ಳುವ ಕುರ್ಚಿಗೆ 2.50 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಹೇಳುತ್ತಾರೆ. ನಾನು ಇಲಾಖೆಯಿಂದ ತೆಗೆದುಕೊಂಡ ಮಾಹಿತಿ ಪ್ರಕಾರ 2021 ರ ಸೆ.9 ರಂದು 15 ಲಕ್ಷ ರೂ. ಮಂಜೂರಾಗಿದೆ. ಅದರಲ್ಲಿ ಶೇ. 75 ರಷ್ಟು ಹಣ ಬಿಡುಗಡೆಯಾಗಿದೆ. ಅದೇ ರೀತಿ 2022ರ ಜ.7 ಂದು 25 ಲಕ್ಷ ಹಣ ಮಂಜೂರಾಗಿದೆ ಅದರಲ್ಲಿ 18.75 ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಒಂದು ಬೆಂಚಿಗೆ ಸುಮಾರು 9577 ರೂ. ಹಣ ನೀಡಲಾಗಿದೆ. ಸಾರ್ವಜನಿಕರ ಹಣ ಖರ್ಚು ಮಾಡಿದ ಮೇಲೆ ಪ್ರತಿ ಪೈಸೆಗೂ ಲೆಕ್ಕ ಕೊಡುಗುವುದು ಜನಪ್ರತಿನಿಧಿಗಳ ಕರ್ತವ್ಯ. ಈ ಬಗ್ಗೆ ನಾನು ಪ್ರಶ್ನೆ ಮಾಡುವ ಹಕ್ಕು ಇದೆ. ನಾನು ಪ್ರಶ್ನಿಸಿದರೆ ಬನ್ನಿ ನಾನೇ ವಾಹನ ವ್ಯವಸ್ಥೆ ಮಾಡುತ್ತೇನೆ ಹೋಗಿ ನೊಡಿ ಎಂದು ಹೇಳುತ್ತಾರೆ. ಅವರೇ ಹೋಗಿ ಎಣಿಸಿಕೊಂಡು ಬಂದು ಸಾರ್ವಜನಿಕರಿಗೆ ಲೆಕ್ಕ ಕೊಡುವ ಕೆಲಸ ಮಾಡಬೇಕು. ಇದು ವೈಕ್ತಿಕ ವಿಚಾರಕ್ಕೆ ಕೊಟ್ಟ ಹಣವಲ್ಲ. ತುರ್ತು ಕೆಲಸಗಳಿಗೆ ಕೊಟ್ಟ ಹಣ ಎಂದರು.
ತನಿಖೆ ಮಾಡಿಸಿ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಖರ್ಚಾಗಿರುವ ಸಾರ್ವಜನಿಕರು ಕುಳಿತುಕೊಳ್ಳುವ ಬೆಂಚುಗಳ ಖರ್ಚು ಹಾಗೂ ಅವುಗಳನ್ನು ಎಲ್ಲೆಲ್ಲಿ ಹಾಕಿಸಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾವಚಿತ್ರ: ಬಿಜೆಪಿ ಸರಕಾರ ಆಡಳಿತಕ್ಕೆ ಬಂದು 2 ವರ್ಷಗಳಾದರೂ ಸಹ ಇದುವರೆಗೂ ಒಂದು ಮನೆ ಮಂಜೂರು ಮಾಡಿಲ್ಲ. ಒಂದು ನಿವೇಶನಗಳನ್ನು ಜನರಿಗೆ ನೀಡಿಲ್ಲ. ನನ್ನ ಅಧಿಕಾರಾವಧಿಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ನಿವೇಶನ ಗುರುತಿಸಿ ಸುಮಾರು 18 ಸಾವಿರ ನಿವೇಶನಗಳನ್ನು ನಿವೇಶನ ರಹಿತರಿಗೆ ಹಂಚಲು ತಯಾರಿ ಮಾಡಿದ್ದೆ ದುರಾದೃಷ್ಟವಶಾತ್ ನನಗೆ ಸೋಲಾಯಿತು. ಈಗ ಶಿರಾ ಕ್ಷೇತ್ರದ ಶಾಸಕರು ನಮ್ಮ ಅವಧಿಯಲ್ಲಿ ತಯಾರಾಗಿದ್ದ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಿಸುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಫೆ. 14, 2022 ರಂದು ತಾಲ್ಲೂಕು ಕಚೇರಿಯಲ್ಲಿ ಮೇಕೆರಹಳ್ಳಿ ಗ್ರಾಮದ ನಿವೇಶನ ರಹಿತರಿಗೆ ಹಕ್ಕು ಪತ್ರಗಳನ್ನು ನೀಡಿದ್ದಾರೆ. ಇದರಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಯಡಿಯೂರಪ್ಪ ಹಾಗೂ ಸೋಮಣ್ಣ ಅವರ ಭಾವಚಿತ್ರಗಳನ್ನು ಹಾಕಿದ್ದಾರೆ. ಇಂತಹ ಕೀಳುಮಟ್ಟದ ರಾಜಕಾರಣ ನಾನೆಲ್ಲೂ ನೋಡಿಲ್ಲ. ಸರಕಾರ ಇಂದು ಇರುತ್ತದೆ. ನಾಳೆ ಬೇರೆ ಯಾರೋ ಅಧಿಕಾರಕ್ಕೆ ಬರಬಹುದು ಆದರೆ ಈ ರೀತಿಯ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯೆ ಪೂಜಾ ಪೆದ್ದರಾಜು, ಮುಖಂಡ ಗುಳಿಗೇನಹಳ್ಳಿ ನಾಗರಾಜು, ಮಾಜಿ ಜಿ.ಪಂ. ಸದಸ್ಯ ಅರೆಹಳ್ಳಿ ರಮೇಶ್, ಕೋಟೆ ಲೋಕೇಶ್, ಅಜಯ್‌ಕುಮಾರ್ ಗಾಲಿ ಸೇರಿದಂತೆ ಹಲವರು ಹಾಜರಿದ್ದರು