ಪ್ರತಿ ವಾರ್ಡಿಗೂ ಸಾಂಸ್ಕೃತಿಕ ಚಟುವಟಿಕೆಗಾಗಿ ವರ್ಷಕ್ಕೆ ಒಂದು ಲಕ್ಷ ರೂ ಅನುದಾನ : ಶ್ರೀಮತಿ ರೇಣುಕಾ ಪಾಲಿಕೆ ಆಯುಕ್ತರು
ತುಮಕೂರು : 1907 ರಲ್ಲಿ ಕ್ಲಾರಾ ಜೆಟ್‌ಕಿನ್ ಎಂಬ ಜರ್ಮನಿಯ ಮಹಿಳೆ ಸಿದ್ದ ಉಡುಪುಗಳ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ದಿನದಲ್ಲಿ 8 ಗಂಟೆಗಳ ಕಾಲ ಕೆಲಸವನ್ನು ಮಾಡಿಸುತ್ತಿದ್ದ ಕಂಪನಿಯ ವಿರುದ್ಧ ಕೆಲಸದ ವೇಳೆಯನ್ನು 6 ಗಂಟೆಗೆ ಸೀಮಿತಗೊಳಿಸಿ ಅದಕ್ಕೆ ತಕ್ಕ ಪ್ರತಿಫಲಕ್ಕಾಗಿ ಬೀದಿಗಿಳಿದು ಮೊಟ್ಟ ಮೊದಲು ಹೋರಾಟ ನಡೆಸಿದಳು. ಆಕೆಯ ಹೋರಾಟವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಆಕೆಯ ಮೊದಲ ಹೋರಾಟದ ದಿನ ಮಾರ್ಚಿ 8 ಆಗಿದ್ದ ಕಾರಣ. ಆ ದಿನವನ್ನು ಅಂತರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು. ಅಂದಿನಿಂದ 8 ರಂದು ಮಹಿಳಾ ದಿನವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇಂತಹ ಹೋರಾಟಗಳು ಮೊದಲು ತಮ್ಮ ತಮ್ಮಲ್ಲೆ ಪ್ರಾರಂಭವಾಗಬೇಕು ಅದಕ್ಕೆ ಮಾನಸಿಕ ಸದೃಢತೆ ಮುಖ್ಯವಾಗುತ್ತದೆ. ಎಂದು ಕ.ಸಾ.ಪ ಮಾಜಿ ಅಧ್ಯಕ್ಷರಾದ ಬಾ.ಹ. ರಮಾಕುಮಾರಿ ಹೇಳಿದರು. ಅವರು ವನಿತೆಯರ ಬಳಗ 26 ನೇ ವಾರ್ಡ್, ತುಮಕೂರು ಅಶೋಕ ನಗರ ನಾಗರಿಕ ಹಿತರಕ್ಷಣಾ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ತುಮಕೂರು ನಗರ ಶಾಸಕರಾದ ಸನ್ಮಾನ್ಯ ಬಿ.ಜಿ. ಜ್ಯೋತಿ ಗಣೇಶ್ ಅವರು ತುಮಕೂರಿನ 35 ವಾರ್ಡ್ಗಳಲ್ಲಿ 26 ನೇ ವಾರ್ಡ್ನಲ್ಲಿ ತುಂಬಾ ಅಭಿವೃದ್ಧಿಯ ಕೆಲಸಗಳು ನಡೆಯುತ್ತಿವೆ. ಅದಕ್ಕೆ ಕಾರಣ, ಪಾಲಿಕೆಯ ಸದಸ್ಯರಾದ ಮಲ್ಲಿಕಾರ್ಜುನ್‌ರವರ ಇಚ್ಚಾಶಕ್ತಿಯೇ ಆಗಿದೆ. ಅವರು ಹಗಲು ರಾತ್ರಿಯೆನ್ನದೆ ವಾರ್ಡಿನ ಚಿಂತನೆಯಲ್ಲಿ ತೊಡಗಿರುತ್ತಾರೆ. ಇಡೀ ನಗರದಲ್ಲಿ ಅತಿ ಹೆಚ್ಚಿನ ಅನುದಾನವನ್ನು ಬಳಕೆ ಮಾಡಿರುವ ವಾರ್ಡ್ ಎಂದರೆ ಅದು ಈ ವಾರ್ಡ್ ಎಂದರೆ ತಪ್ಪಾಗಲಾರದು. ಹಾಗೂ ಈ ವಾರ್ಡಿನ ಮಹಿಳೆಯರು ಸಾಂಸ್ಕೃತಿಕವಾಗಿ ತೊಡಗಿಕೊಂಡಿರುವುದು ಹೆಗ್ಗಳಿಕೆಯಾಗಿದೆ ಎಂದು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕಾ ಅವರು ಮಾತನಾಡುತ್ತಾ ನಗರದಲ್ಲಿ 26 ನೇ ವಾರ್ಡ್ ಸ್ವಚ್ಚತೆ ಮತ್ತು ವ್ಯಾಕ್ಸಿನೇಷನ್, ಹಾಗೂ ತೆರಿಗೆ ಪಾವತಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದಿದೆ ಮತ್ತು ಇಲ್ಲಿನ ಹೆಣ್ಣು ಮಕ್ಕಳು ಜಾಗೃತರಾಗಿದ್ದಾರೆ. ಎಂದು ಹೇಳಿದರು. ಹಾಗೂ ತಾವು ಮಹಿಳಾ ಅಧಿಕಾರಿಯಾಗಿ ನಡೆದು ಬಂದ ಹಾದಿಯ ಬಗ್ಗೆ ಮೆಲುಕು ಹಾಕುತ್ತಾ ಪ್ರಾಮಾಣಿಕವಾಗಿ, ಬದ್ಧತೆಯಿಂದ ಕೆಲಸ ಮಾಡಿದ ಪರಿಣಾಮ ಪ್ರಶಸ್ತಿಗಳನ್ನು ಪಡೆದುದರ ಬಗ್ಗೆ ಹೆಮ್ಮೆ ಇದೆ ಎಂದರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರತಿವರ್ಷವೂ ಪ್ರತಿವಾರ್ಡಿಗೂ ಒಂದು ಲಕ್ಷ ರೂಪಾಯಿಗಳನ್ನು ಮಹಾನಗರ ಪಾಲಿಕೆಯಿಂದ ನೀಡುವೆ ಎಂದು ಅಲ್ಲಿ ನಡೆದಂತಹ ಕಾರ್ಯಕ್ರಮವನ್ನು ನೋಡಿ ಉತ್ತೇಜಿತರಾಗಿ ಸ್ಥಳದಲ್ಲಿಯೇ ಘೋಷಣೆ ಮಾಡಿದರು.
ಸನ್ಮಾನಿರ ಪರವಾಗಿ ಮಾತನಾಡಿದ ಲೇಖಕಿ ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ನಾಗರತ್ನ ಚಂದ್ರಪ್ಪನವರು ಮಾತನಾಡುತ್ತಾ ನಮ್ಮ ವಾರ್ಡಿನಲ್ಲಿ ಇದುವರೆವಿಗೂ ಯಾವ ಪಾಲಿಕೆ ಸದಸ್ಯನೂ ಮಾಡಿರದ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ವಿಭಿನ್ನ ಕಾರ್ಯಗಳನ್ನು ನಮ್ಮ ವಾರ್ಡಿನ ಯುವ ನೇತಾರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನಯ್ಯನವರು ಹಮ್ಮಿಕೊಂಡಿದ್ದಾರೆ. ಗಾಂಧೀ ಜಯಂತಿ, ಗಣರಾಜ್ಯೋತ್ಸವ, ಸ್ವತಂತ್ರ ದಿನಾಚರಣೆ ಮುಂತಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ಎಲ್ಲರ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಹಾಗೂ ವಾರ್ಡ್ ನಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರಗಳ ಪರಂಪರ ಬೆಳೆಸುವ ಅಗತ್ಯವಿದೆ. ಎಂದರು.
ಮಹಾನಗರ ಪಾಲಿಕೆಯ ಸದಸ್ಯರಾದ ಮಲ್ಲಿಕಾರ್ಜುನಯ್ಯ ಮಾತನಾಡುತ್ತಾ ವಾರ್ಡಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಮಾಡುವ ಕಲ್ಪನೆ ಬಂದಾಗ ನಮ್ಮ ವಾರ್ಡಿನ ಹೆಣ್ಣುಮಕ್ಕಳು ತೋರಿದ ಆಸಕ್ತಿ, ಸ್ಪಂದಿಸಿದ ರೀತಿ ಇಂದು ಇಷ್ಟು ಹೆಣ್ಣುಮಕ್ಕಳು ಸೇರಿ ಸಾಂಸ್ಕೃತಿಕ ಮತ್ತು ಕ್ರೀಡೆ ಗಳೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಸಾಧ್ಯವಾಗಿದೆ. ಮುಂದೆಯೂ ಇಂತಹ ಕಾರ್ಯಕ್ರಮಗಳೊಂದಿಗೆ ನಮ್ಮ ವಾರ್ಡಿನಲ್ಲಿ ಇನ್ನಷ್ಟು ಕಾರ್ಯಗಳನ್ನು ಹಮ್ಮಿಕೊಳ್ಳೋಣ ಇದಕ್ಕೆ ನಮ್ಮ ಶಾಸಕರು, ಹಾಗೂ ಪಾಲಿಕೆಯ ಸಹಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಳಿನಾ ಶಿವಾನಂದ್, ಮಮತ, ಹೇಮ ಮಲ್ಲಿಕಾರ್ಜುನ್, ಭಾಗ್ಯಲಕ್ಷಿö್ಮ ನಾಗರಾಜು, ಜಯರತ್ನ, ಲತ, ಜ್ಯೋತಿ, ಅರುಣ, ನಾಗು, ರಾಣಿ, ಗಂಗ, ರೋಹಿಣಿ. ಗಿರಿಜಾ, ಇನ್ನು ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಸಿದ್ಧ ಗಾಯಕರಾದ ಮಲ್ಲಿಕಾರ್ಜುನ್ ಕೆಂಕೆರೆ ಮತ್ತು ಶಂಕರ್ ಭಾರತೀ ಪುರ, ತಂಡದವರಿAದ ಸುಗಮ ಸಂಗೀತ. ಹಾಗೂ ವಾರ್ಡಿನ ಮಹಿಳೆಯರಿಂದ ಜಾನಪದ ನೃತ್ಯ, ಭರತನಾಟ್ಯ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಇದೇ ಸಂದರ್ಭದಲ್ಲಿ ಆಟೋಟ ಸ್ಪರ್ಧೆ ಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಾ.ಹ. ರಮಾಕುಮಾರಿ, ನಾಗರತ್ನ ಚಂದ್ರಪ್ಪ ಆಯುಕ್ತರಾದ ರೇಣುಕಾ ಅವರನ್ನು ಸನ್ಮಾನಿಸಲಾಯಿತು.