ಗ್ರಾಮದ ಎಲ್ಲಾ ಅರ್ಹ ಫಲಾನುಭವಿಗಳಿಗೂ ಸರ್ಕಾರದ ಸೌಲಭ್ಯ : ಸಚಿವ ಜೆ.ಸಿ.ಮಾಧುಸ್ವಾಮಿ
ಸಾಕ್ಷಿಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ
ಶಿರಾ : ಸಾರ್ವಜನಿಕರು ಸಣ್ಣ ಪುಟ್ಟ ಕೆಲಸಗಳಿಗೂ ತಹಶೀಲ್ದಾರ್ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ `ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ರೂಪಿಸಿದೆ. ಈ ಮೂಲಕ ಗ್ರಾಮದ ಎಲ್ಲಾ ಅರ್ಹ ಫಲಾನುಭವಿಗಳಿಗೂ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡುವುದು ಕಾರ್ಯಕ್ರಮ ಉದ್ದೇಶವಾಗಿದೆ ಎಂದು ಕಾನೂನು, ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಅವರು ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿಯ ಸಾಕ್ಷಿಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಧ್ಯವರ್ತಿಗಳ ಕಾಟ ಇಲ್ಲಿ ಇಲ್ಲದೆ, ಅಧಿಕಾರಿ ವರ್ಗ ಅನಾವಶ್ಯಕ ಕಾರಣ ಒಡ್ಡಿ ಜನರನ್ನು ಅಲೆದಾಡಿಸುವುದನ್ನು ತಪ್ಪಿಸಿ, ಜನಸ್ನೇಹಿ ಆಡಳಿತ ನೀಡುವ ಉದ್ದೇಶದಿಂದ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿರಾ ತಾಲೂಕು ತಹಸೀಲ್ದಾರ್ ಮಮತ ಅವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಸಾಗುವಳಿ ಪತ್ರಕ್ಕಾಗಿ ಹತ್ತಾರು ವರ್ಷಗಳಿಂದ ಕಂಡ ಕಂಡವರ ಬಳಿ ಅಂಗಲಾಚುವ ರೈತರ ಬವಣೆಗೆ ಅಂತ್ಯ ಹಾಡಲಾಗುತ್ತಿದೆ. ಈಗಾಗಲೇ ಒಂದು ನೂರಕ್ಕೂ ಹೆಚ್ಚು ಅರ್ಹ ರೈತರಿಗೆ ಸಾಗುವಳಿ ಪತ್ರ ನೀಡಿದ್ದು ಬರುವ ಕೆಲ ತಿಂಗಳಲ್ಲಿ ಸಾಗುವಳಿ ಮಾಡಿಕೊಂಡಿರುವ ಎಲ್ಲ ರೈತರಿಗೂ ಸಾಗುವಳಿ ಪತ್ರ ನೀಡಲಾಗುವುದು ಎಂದರು.
ತಹಶೀಲ್ದಾರ್ ಮಮತ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರದ ಆದೇಶದಂತೆ ಪ್ರತಿ ಮೂರನೇ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ರೈತರ ಸಾರ್ವಜನಿಕ ಸಮಸ್ಯೆಗಳಿಗೆ ಅವರು ಇದ್ದಲ್ಲಿಯೇ ಪರಿಹಾರ ನೀಡುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಇಂದು ಬುಕ್ಕಾಪಟ್ಟಣ ಹೋಬಳಿಯ ಸಾಕ್ಷಿಹಳ್ಳಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿ ಮುಖ್ಯ ಇಲಾಖೆಯಾದ ಕಂದಾಯ ಇಲಾಖೆಯಿಂದ ಒಂದು ವಾರದಿಂದ ಅರ್ಜಿಗಳನ್ನು ಪಡೆದು 390 ಪಿಂಚಣಿ ಆದೇಶ ಪ್ರತಿ, 25 ಸಾಗುವಳಿ ಪತ್ರ, 26 ನಿವೇಶನ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ರಮದ ಉದ್ದೇಶ ಅರಿತು ಸದ್ಬಳಕೆ ಮಾಡಿಕೊಳ್ಳಿ ಹಾಗೂ ಇತರೆ ಇಲಾಖೆಗಳಿಗೂ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 400 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಂದ್ಯಾ ಸುರಕ್ಷಾ, ವೃದ್ಯಾಪ್ಯ ಯೋಜನೆ, ಅಂಗವಿಕಲ ವೇತನ, ಮನಸ್ವಿನಿ ಯೋಜನಾ ಮಾಸಾಶನ ಮಂಜೂರಾತಿ ಪತ್ರ ಪಡೆದರು. ಈ ಸಂದರ್ಭದಲ್ಲಿ ಮಾಜಿ ತಾ.ಪಂ. ಅಧ್ಯಕ್ಷ ಬುಕ್ಕಾಪಟ್ಟಣ ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ ರಂಗನಾಥ್, ರಾಮಲಿಂಗಪುರ ಗ್ರಾ.ಪಂ. ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷೆ ಯಮುನ, ಬುಕ್ಕಾಪಟ್ಟಣ ಗ್ರಾ.ಪಂ. ಪ್ರಭಾರ ಅಧ್ಯಕ್ಷೆ ಹೇಮಲತಾ ಸೇರಿದಂತೆ ಹಲವರು ಹಾಜರಿದ್ದರು.