ಕೊರಟಗೆರೆ
ಡಾ.ರಾಜಕುಮಾರ್ ಅಭಿಮಾನಿಯಿಂದ ಮಗನಿಗೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟು ನಾಮಕರಣ
ಹೊಳವನಹಳ್ಳಿಯಲ್ಲಿ ಪುನೀತ್‌ರಾಜಕುಮಾರ್ ಹುಟ್ಟುಹಬ್ಬ ಆಚರಣೆ
ಕೊರಟಗೆರೆ : ಕನ್ನಡದ ಮನೆ ಮಗ ರಾಜರತ್ನ ಪುನೀತ್‌ರಾಜಕುಮಾರ್ ಅವರ 47ನೇ ವರ್ಷದ ಹುಟ್ಟುಹಬ್ಬ ಅಭಿಮಾನಿ ಬಳಗದಿಂದ ಕೇಕ್ ಕತ್ತರಿಸಿ ಸಿಹಿ ಹಂಚಿ ಆಚರಣೆ ಮಾಡಿದರು.
ತಾಲೂಕಿನ ಹೊಳವನಹಳ್ಳಿ, ಹೋಬಳಿ ಕೇಂದ್ರದ ಬಸ್ ನಿಲ್ದಾಣದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಕನ್ನಡದ ಮನೆ ಮಗ ರಾಜರತ್ನ ದಿವಂಗತ ಡಾ.ಪುನೀತ್‌ರಾಜ್ ಕುಮಾರ್ ಅವರ ಭಾವ ಚಿತ್ರಕ್ಕೆ ಪೂಜೆಯನ್ನ ಸಲ್ಲಿಸಿ ನಂತರ ಕೇಕ್ ಕತ್ತರಿಸುವ ಮೂಲಕ 47ನೇ ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ಪುನೀತ್‌ರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ ಮಾಡುವ ಸಂದರ್ಭದಲ್ಲಿ ಹೊಳವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಸಿರೋಗನಹಳ್ಳಿ ತಾಂಡದ ಪುಟ್ಟಮ್ಮ ಬಾಯಿ, ಲೋಕೇಶ್ ನಾಯ್ಕ ದಂಪತಿಗೆ ಗಂಡು ಮಗು ಜನಿಸಿದ್ದು, ಅವರು ಕೂಡ ರಾಜಕುಮಾರ್ ಅವರ ಅಭಿಮಾನಿಯಾಗಿದ್ದು, ಅವರ ಮಗನಿಗೆ ಪುನೀತ್ ರಾಜ್ ಕುಮಾರ್ ಎಂದು ಎಲ್ಲರ ಸಮ್ಮುಖದಲ್ಲಿ ನಾಮಕರಣ ಮಾಡಲಾಯಿತು.
ಎಸ್‌ಡಿಎಂಸಿ ಉಪಾಧ್ಯಕ್ಷ ಜಯರಾಜ್ ಮಾತನಾಡಿ ಪುನೀತ್ ರಾಜ್ ಕುಮಾರ್ ಇಲ್ಲದೆ ಹುಟ್ಟು ಹಬ್ಬ ಆಚರಣೆ ಮಾಡುವುದು ನೋವಿನ ಸಂಗತಿ, ಅಪ್ಪು ಅವರು ಮಾಡಿದ ಸಮಾಜಮುಖಿ ಕಾರ್ಯಕ್ರಮಗಳು ಮತ್ತು ಅವರು ನಟಿಸಿರುವ ಚಿತ್ರಗಳಿಂದಾಗಿ ಇನ್ನೂ ನಮ್ಮೊಂದಿಗಿದ್ದಾರೆ ಎಂದು ಹೇಳಿದರು.
ಯುವ ಮುಖಂಡ ಶಿವಕುಮಾರಸ್ವಾಮಿ ಮಾತನಾಡಿ ಪುನೀತ್ ರಾಜ್ ಕುಮಾರ್ ಅವರು ಸಾಮಾಜಿಕ ಸೇವೆಗಳ ಮೂಲಕ 20 ಅನಾಥಶ್ರಮಗಳು, 48 ಉಚಿತಶಾಲೆಗಳು, 19 ಗೋಶಾಲೆ, 16 ವೃದ್ಧಾಶ್ರಮಗಳನ್ನ ನಡೆಸುತ್ತಾ ಬಂದಿದ್ದು, ಸುಮಾರು 1800 ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನ ನೋಡಿಕೊಳ್ಳುತ್ತಿರುವ ಅವರು ಇನ್ನೂ ಬದುಕಿದ್ದರೆ ನೂರಾರು ಕುಟುಂಬಗಳಿಗೆ ಆಸರೆಯಾಗುತ್ತಿದ್ದರು, ಅವರು ನೀಡಿದ ಸರಳ ಮತ್ತು ಎಲ್ಲರಿಗೂ ಸಹಾಯ ಹಸ್ತ ಚಾಚುವ ಬದುಕಿನ ಸಂದೇಶ ಅನುಕರಣೀಯ.
ಸಾವಿನ ನಂತರವೂ ಬದುಕುತ್ತಿರುವ ಅಭಿಮಾನದ ಸಾಹುಕಾರ ನಮ್ಮ ಪುನೀತ್ ರಾಜ್ ಕುಮಾರ್ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಗ್ರಾ ಪಂ ಸದಸ್ಯರಾದ ಜಯರಾಮ್, ಮುಖಂಡ ರಾಧ ಉಮಣ್ಣ, ಕವಿತಾ ನರಸಪ್ಪ, ನರಸಿಂಹಮೂರ್ತಿ, ಕಿಶೋರ್, ರಾಜು, ಅರ್ಜುನ, ಮನು, ಮಣೀಶ್, ಕಿರಣ್, ತಿಮ್ಮರಾಜು, ಪ್ರವೀಣ್, ದರ್ಶನ್, ಮಂಜುನಾಥ್, ಸೋಮಣ್ಣ, ವಿನೋದ್, ಬಾಬು, ರವಿಕುಮಾರ್, ಸೂರಜ್, ಶ್ರೀನಿವಾಸ್ ಸೇರಿದಂತೆ ಅಭಿಮಾನಿಗಳು ಹಾಜರಿದ್ದರು.