ಒಕ್ಕಲಿಗ ಉಪ ಜಾತಿಯಂದೆ ಕುಂಚಿಟಿಗ ಸಮುದಾಯ ಪರಿಗಣಿಸಿ ಸರಕಾರ ಒಬಿಸಿ ಮೀಸಲಾತಿ ನೀಡಲಿ: ನಂಜಾವಧೂತ ಶ್ರೀ
ಕ್ಯಾದಿಗುಂಟೆ ಗ್ರಾಮದಲ್ಲಿ ನಡೆದ ಶ್ರೀ ರಂಗನಾಥ ಸ್ವಾಮಿ ರಥೋತ್ಸವ

ಶಿರಾ : ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಉಪಜಾತಿ ಎಂದೇ ಪರಿಗಣಿಸಲಾಗುವ ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಸರಕಾರ ತಕ್ಷಣ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಸ್ಪಟಿಕಪುರಿ ಸಂಸ್ಥಾನಮಠದ ಪೀಠಾಧ್ಯಕ್ಷರಾದ ನಂಜಾವಧೂತ ಶ್ರೀಗಳು ಒತ್ತಾಯಿಸಿದರು.
ಅವರು ತಾಲೂಕಿನ ಕ್ಯಾದಿಗುಂಟೆ ಐತಿಹಾಸಿಕ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಶ್ರೀ ರಂಗನಾಥಸ್ವಾಮಿ ಕಲ್ಲುಗಾಲಿ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶ್ರೀಮಠದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಹಾಗೂ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ಪತ್ರ ಬರೆಯಲಾಗಿತ್ತು, ಕುಂಚಿಟಿಗ ಸಮುದಾಯದಲ್ಲಿ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಅಂತಹ ಪ್ರತಿಭೆಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಕೇಂದ್ರ ಸರಕಾರ ಓಬಿಸಿ ಮೀಸಲಾತಿ ನೀಡದ ಕಾರಣ ತೀವ್ರ ಅನ್ಯಾಯವಾಗಿದೆ ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡ ಕಾರಣ ವಿಸ್ತ್ರ್ರತ ವರದಿಯನ್ನು ಸಿದ್ಧಪಡಿಸಿ ಎಚ್.ಡಿ.ಕುಮಾರಸ್ವಾಮಿ ಅವರ ಸರಕಾರ ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿತ್ತು. ಕುಂಚಿಟಿಗ ಸಮುದಾಯದ ಮೀಸಲಾತಿಗೆ ಸಂಬಂಸಿದಂತೆ ಹಾವನೂರು ಮತ್ತು ಚಿನ್ನಪ್ಪರೆಡ್ಡಿ ನೀಡಿರುವ ವರದಿಯನ್ವಯ ಒಕ್ಕಲಿಗ ಸಮುದಾಯದ ಅಡಿಯಲ್ಲಿಯೇ ಕುಂಚಿಟಿಗ ಸಮುದಾಯಕ್ಕೆ ಓಬಿಸಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಪಡಿಸಿದ ಶ್ರೀಗಳು ಸುಪ್ರಿಂ ಕೋರ್ಟ್ ಆದೇಶದನ್ವಯ ರಾಜ್ಯ ಸರಕಾರವೇ ಓಬಿಸಿ ಮೀಸಲಾತಿ ಕಲ್ಪಿಸಬೇಕೆಂಬ ನಿರ್ದೇಶನ ಇದೆ ಈ ನಿರ್ದೇಶನವನ್ನೇ ಪಾಲಿಸುವ ಮೂಲಕ ರಾಜ್ಯ ಸರ್ಕಾರ ಇಲ್ಲವೇ ಕೇಂದ್ರ ಸರಕಾರ ತಕ್ಷಣ ಕುಂಚಿಟಿಗರ ಓಬಿಸಿ ಮೀಸಲಾತಿ ನೀಡ ಬೇಕೆಂದು ಆಗ್ರಹಿಸಿದರು.
ರಾಜ್ಯ ಕೂಡ ಒಕ್ಕಲಿಗ ಸಮುದಾಯಕ್ಕೆ 3.5 ರಷ್ಟು ಮೀಸಲಾತಿ ನೀಡಿದೆ ಆದರೆ 3ಎ ಮೀಸಲಾತಿಯಲ್ಲಿ 15ಕ್ಕೂ ಹೆಚ್ಚು ಜಾತಿಗಳು ಸೇರ್ಪಡೆಗೊಂಡಿವೆ ಇದರಿಂದ ಒಕ್ಕಲಿಗ ಸಮುದಾಯದ ಶೈಕ್ಷಣಿಕ ಪ್ರಗತಿ ಹಾಗೂ ಉದ್ಯೋಗ ಮೀಸಲಾತಿ ಅನ್ಯಾಯವಾಗಿದೆ ಸರಕಾರ ತಕ್ಷಣ ಈ ಮೀಸಲಾತಿ ಪ್ರಮಾಣವನ್ನು ಶೇಕಡ 9 ರಷ್ಟಕ್ಕೆ ಏರಿಕೆ ಮಾಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕ್ಯಾದಿಗುಂಟೆ ತಿಪ್ಪೇಸ್ವಾಮಿ, ಮಡಕಶಿರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಗ್ರಾಪಂ ಸದಸ್ಯ ನಾಗೇಶ್, ರಂಗನಾಥಪ್ಪ, ರಾಜು, ರಂಗನಾಥ್, ಕಿರಣ್ ಕುಮಾರ್, ಜೆಡಿಎಸ್ ಮುಖಂಡ ಗಂಗಾಧರ್ ಸೇರಿದಂತೆ ಹಲವರು ಹಾಜರಿದ್ದರು.