ರೈತ ವಿರೋಧಿ ನೀತಿ ಖಂಡಿಸಿ ಮಾರ್ಚ14 ಕ್ಕೆ ತುರುವೇಕೆರೆ ಬೆಸ್ಕಾಂ ಕಚೇರಿಗೆ ಮುತ್ತಿಗೆ

ತುರುವೇಕೆರೆ : ಬೆಸ್ಕಾಂ ಸಂಬಂದಿತ ರೈತರ ನಾನಾ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚಿ 14 ರಂದು ರಾಜ್ಯ ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳೊಡಗೂಡಿ ಬೆಸ್ಕಾಂ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್‌ಗೌಡ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ನಿಗದಿತ ಸಮಯಕ್ಕೆ ವಿದ್ಯುತ್ ನೀಡದಿರುವುದರಿಂದ ರೈತರು ತಾವು ಬೆಳೆದ ಬೆಳೆಗಳಿಗೆ ನೀರುಣಿಸಲು ಚಾತಕ ಪಕ್ಷಿಯಂತೆ ಕಾದು ಕೂರುವಂತಾಗಿದೆ. ಟಿ.ಸಿ. ಪಡೆದುಕೊಳ್ಳಲು ರೈತರು 10 ರಿಂದ 20 ಸಾವಿರ ಲಂಚ ನೀಡಬೇಕಾಗಿದೆ.ನಿರಂತರಜ್ಯೋತಿ ಅಸಮರ್ಪಕ ಪೋರೈಕೆಯಿಂದ ಎಸ್.ಎಸ್.ಎಲ್.ಸಿ. ಮಕ್ಕಳು ಪರಿತಪಿಸುವಂತಾಗಿದೆ ಎಂದು ದೂರಿದ ಅವರು ರೈತ ಹಾಗೂ ಪ್ರಗತಿಪರ ಸಂಘಟನೆಗಳೊಂದಿಗೆ ಕಚೇರಿ ಮುತ್ತಿಗೆ ಹಾಕುವ ಮೂಲಕ ನ್ಯಾಯಕ್ಕಾಗಿ ಹೋರಾಟ ಮಾಡಲಾಗುವುದು ಎಂದರು.
ಲಂಚ ಕೇಳುವ ಎಸ್.ಓ. ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್.ಓ.ಕಾಂತರಾಜ್ ವಿದ್ಯುತ್ ಸಮಸ್ಯೆ ಬಗೆಹರಿಸಲು ಲಂಚ ಕೇಳುತ್ತಾರೆ. ರೈತರ ದೂರು ನೀಡಲು ಹೋದರೇ ಸೌಜನ್ಯಯುತವಾಗಿ ವರ್ತಿಸದೇ ಉಡಾಫೆ ಉತ್ತರ ನೀಡುತ್ತಾರೆ.ಮೀಟರ್ ರೀಡರ್ ಕಾಂತರಾಜರನ್ನು ಪ್ರಭಾರಿ ಎಸ್.ಓ. ಆಗಿ ನೇಮಿಸಿರುವ ಬೆಸ್ಕಾಂ ರೈತರನ್ನು ಸುಲಿಗೆ ಮಾಡಲು ಕೂರಿಸಿದಂತಿದೆ. ಮೇಲಾಧಿಕಾರಿಗಳು ಈ ಕೂಡಲೇ ಕಾಂತರಾಜನನ್ನು ಬದಲಾಯಿಸಿ ರೈತರಿಗಾಗುತ್ತಿರುವ ಶೋಷಣೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಪ.ಪಂ. ಮಾಜಿ ಅಧ್ಯಕ್ಷ ಹೆಚ್. ಆರ್. ರಾಮೇಗೌಡ ಮಾತನಾಡಿ ಪಟ್ಟಣಕ್ಕೆ ಸಮೀಪದ ಗೊಂದಿ ಬಾರೆ ಸಮೀಪ 110 ಕೆ.ವಿ.ಸಾಮರ್ಥ್ಯದ ವಿದ್ಯುತ್ ಕಂಬ ಮುರಿದು ಬಿದ್ದ ತಿಂಗಳುಗಳೇ ಉರುಳಿದರೂ ಬೆಸ್ಕಾಂ ದುರಸ್ತಿ ಮಾಡಿಲ್ಲ. ಈ ಬಗ್ಗೆ ದೂರು ನೀಡಿದ್ದರೂ ಸ್ಪಂದಿಸಿಲ್ಲ, ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯತೆ ಅವಘಡ ಸಂಭವಿಸಲಿ ಎಂಬಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಟಿಯಲ್ಲಿ ರೈತ ಸಂಘದ ಗೌರವಾದ್ಯಕ್ಷ ಅಸ್ಲಾಂಪಾಷ, ಸಿ.ಐ.ಟಿ.ಯು. ಕಾರ್ಯದರ್ಶಿ ಸತೀಶ್, ಮುಖಂಡ ಹಾವಾಳರಾಮೇಗೌಡ,ದ.ಸಂ.ಸ.ಪದಾದಿಕಾರಿ ರಾಮಯ್ಯ, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ, ಆಟೋ ಚಾಲಕ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಗಂಗಾಧರ್, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್, ವೆಂಕಟೇಶ್, ಮತ್ತಿತರಿದ್ದರು,