ಶಿರಾ ನಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸಲು ಶ್ರಮವಹಿಸುವೆ : ನೂತನ ಅಧ್ಯಕ್ಷ ಬಿ.ಆಂಜಿನಪ್ಪ
ಅಂಬೇಡ್ಕರ್ ಉದ್ಯಾನವನ ಅಭಿವೃದ್ಧಿಗೆ ಪ್ರಥಮವಾಗಿ 20 ಲಕ್ಷ ಬಿಡುಗಡೆ
ಶಿರಾ : ಶಿರಾ ನಗರದ ಅಭಿವೃದ್ಧಿಗೆ ಪಕ್ಷಬೇದ ಮರೆತು ನಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿ ಮಾಡಲು ಶ್ರಮಿಸುತ್ತೇನೆ ಹಾಗೂ ಪ್ರಪ್ರಥಮವಾಗಿ ಅಂಬೇಡ್ಕರ್ ಉದ್ಯಾನವನ ಅಭಿವೃದ್ಧಿಗೆ ಹದಿನೈದು ದಿನಗಳೊಳಗೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ನೂತನ ನಗರಸಭೆ ಅಧ್ಯಕ್ಷರಾದ ಬಿ.ಆಂಜಿನಪ್ಪ ಹೇಳಿದರು.
ಅವರು ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಮದ ಇಂದು ಸಾಮಾನ್ಯ ವ್ಯಕ್ತಿಯೂ ಅಧಿಕಾರ ಪಡೆಯಲು ಅವಕಾಶವಾಗಿದೆ. ಶಿರಾ ನಗರದಲ್ಲಿ ಪ್ರಥಮಬಾರಿಗೆ ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಸೇರಿ ಮೈತ್ರಿ ಮಾಡಿಕೊಂಡು ನಗರಸಭೆ ಅಧಿಕಾರಕ್ಕೆ ಬಂದಿದ್ದೇವೆ. ನಗರದ ಅಭಿವೃದ್ಧಿಗೆ ಯಾವುದೇ ಪಕ್ಷ ಬೇದ ಇಲ್ಲದೆ ಹಗಲಿರುಳು ಶ್ರಮಿಸುತ್ತೇನೆ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷರು ಹಾಗೂ ಮಾಜಿ ನಗರಸಭಾ ಸದಸ್ಯರಾದ ಆರ್.ಉಗ್ರೇಶ್ ಅವರು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಬರೆಯದಿದ್ದರೆ ಇಂದು ಸಾಮಾನ್ಯ ಪ್ರಜೆಗಳು ಅಧಿಕಾರ ಪಡೆಯುವುದು ಸಾಧ್ಯವಾಗುತ್ತಿರಲಿಲ್ಲ. ಸಂವಿಧಾನದಿAದ ಇಂದು ಎಲ್ಲಾ ಸಮುದಾಯದವರು ಅಧಿಕಾರ ಪಡೆಯಲು ಸಾಧ್ಯವಾಗಿದೆ ಎಂದ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಜಾರಿ ಮಾಡಿದ್ದನ್ನು ನಾವು ಈ ಸಮಯದಲ್ಲಿ ನೆನಪು ಮಾಡಿಕೊಳ್ಳಬೇಕು. ಶಿರಾ ನಗರದಲ್ಲಿ ಸುಮಾರು 70 ರಿಂದ 80 ಸಾವಿರ ಜನಸಂಖ್ಯೆ ಇದ್ದು, ತುಮಕೂರು ಬಿಟ್ಟರೆ ಹೆಚ್ಚು ಅಭಿವೃದ್ದಿ ಹೊಂದುತ್ತಿರುವ ನಗರವಾಗಿದೆ. ನೂತನ ಅಧ್ಯಕ್ಷರು ತಮ್ಮ ಅಧಿಕಾರವಧಿಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಲಿ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಅಂಬುಜಾಕ್ಷಿ ನಟರಾಜ್, ಸದಸ್ಯರಾದ ಗಿರಿಜಾ ವಿಜಯ್‌ಕುಮಾರ್, ಪೌರಾಯುಕ್ತರಾದ ಶ್ರೀನಿವಾಸ್, ದಲಿತ ಮುಖಂಡ ಜೆ.ಎನ್.ರಾಜಸಿಂಹ, ಮಾಜಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಟರಾಜ್, ಸದಸ್ಯರಾದ ಆರ್.ರಾಘವೇಂದ್ರ, ಶ್ರೀರಂಗ, ಸುನಿಲ್ ಕುಮಾರ್, ಕೋಟೆ ಮಹದೇವ್ ಸೇರಿದಂತೆ ಹಲವರು ಹಾಜರಿದ್ದರು.