ರೈತರು ಗಂಗಾ ಕಲ್ಯಾಣ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ : ಡಾ.ಸಿ.ಎಂ.ರಾಜೇಶ್ ಗೌಡ
ಶಿರಾದಲ್ಲಿ ಫಲಾನುಭವಿಗಳಿಗೆ ಪಂಪು ಮೋಟಾರ್ ವಿತರಣೆ
ಶಿರಾ : ರಾಜ್ಯ ಸರಕಾರದಿಂದ ನೀಡುವ ಗಂಗಾ ಕಲ್ಯಾಣ ಯೋಜನೆಯು ರೈತರಿಗೆ ವರದಾನವಾಗಿದ್ದು, ಸರಕಾರದಿಂದಲೇ ಉಚಿತವಾಗಿ ಕೊಳವೆಬಾವಿ ಕೊರೆಸಿ ರೈತರ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ರೈತರು ಇದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಇಳುವರಿ ಪಡೆಯಿರಿ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ ಮತ್ತು ತಾಂಡಾ ಅಭಿವೃದ್ಧಿ ನಿಗಮಗಳ ವತಿಯಿಂದ ಗಂಗಾ ಕಲ್ಯಾಣ ಯೋಜನೆಯ ಪಲಾನುಭವಿಗಳಿಗೆ ಮೋಟಾರ್ ಪಂಪ್ ಸೆಟ್ ವಿತರಣೆ ಮಾಡಿದರು. ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಂತಹ ಕೊಳವೆ ಬಾವಿಗಳಿಗೆ 2018-19ನೇ ಸಾಲಿನಿಂದಲೂ ಸಹ ಪಂಪು ಮೋಟಾರ್ ನೀಡಿರಲಿಲ್ಲ. ಈ ಬಗ್ಗೆ ಸದನದಲ್ಲಿ ಸಮಾಜ ಕಲ್ಯಾಣ ಸಚಿವರಾದ ಕೊಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದ್ದೆ ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭವರವಸೆ ಕೊಟ್ಟಿದ್ದರು. ಅದಕ್ಕೆ ಅನುಗುಣವಾಗಿ 2018-19ನೇ ಸಾಲಿನ 37 ಫಲಾನುಭವಿಗಳಿಗೆ ಇಂದು ಪಂಪು ಮೋಟಾರ್ ವಿತರಿಸಲಾಗುತ್ತಿದೆ. 2019-20, 2020-21 ನೇ ಸಾಲಿನ ಫಲಾನುಭವಿಗಳಿಗೆ ಪಂಪು ಮೋಟಾರ್‌ಗಳನ್ನು ಶೀಘ್ರವಾಗಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕ್ಷಕರಾದ ತಿಮ್ಮರಾಯಪ್ಪ, ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಡಿ.ಜಯರಾಮಣ್ಣ, ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಹೆಚ್.ರಾಜಶೇಖರ್, ಮಾಜಿ ಜಿ.ಪಂ. ಸದಸ್ಯ ಪ್ರಕಾಶ್ ಗೌಡ, ತರೂರು ಬಸವರಾಜ್, ಕೋಟೆ ರವಿ ಸೇರಿದಂತೆ ಹಲವರು ಹಾಜರಿದ್ದರು.