ಕೊರಟಗೆರೆ

ಉಕ್ರೇನ್‌ನಿಂದ ವಾಪಸಾದ ಇಬ್ಬರು ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು : ಡಾ.ಜಿ.ಪರಮೇಶ್ವರ್

ಕೊರಟಗೆರೆಯಲ್ಲಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಡಾ.ಜಿ.ಪರಮೇಶ್ವರ್

ಕೊರಟಗೆರೆ : ಉಕ್ರೇನ್‌ನಿಂದ ಸ್ವದೇಶಕ್ಕೆ ವಾಪಸಾದ ಪಟ್ಟಣದ ಇಬ್ಬರು ವಿದ್ಯಾರ್ಥಿಗಳನ್ನು ಶಾಸಕ ಡಾ.ಜಿ.ಪರಮೇಶ್ವರ್ ಅಭಿನಂದಿಸಿ ಪತ್ರಕರ್ತರಾಗಿ ವಿದ್ಯಾರ್ಥಿಗಳನ್ನು ಸಂದರ್ಶನ ಮಾಡಿ ಧೈರ್ಯ ತುಂಬಿದರು.
ಕೊರಟಗೆರೆ ಪಟ್ಟಣದ ಕಾಳಿದಾಸ ಬಡಾವಣೆ ನಿವಾಸಿಗಳಾದ ಜಾವೀದ್, ಫತೀಮಾ ದಂಪತಿ ಮಗನಾದ ತೌಕಿತ್ ಅಹಮದ್ 3ನೇ ವರ್ಷದ ಎಂ.ಬಿ.ಬಿ.ಎಸ್. ಹಾಗೂ ಸೈಯದ್‌ನವಾಜ್, ಶಬಾನಾ ದಂಪತಿ ಮಗನಾದ ಸೈಯ್ಯದ್ ನೋಮನ್ 1ನೇ ವರ್ಷದ ಎಂ.ಬಿ.ಬಿ.ಎಸ್. ಪದವಿಯನ್ನು ರಾಜಧಾನಿ ಕೀವ್‌ನ ಪೊಗೋಮೆಲೆಟ್ ನಗರದ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಉಕ್ರೇನ್ ಮೇಲೆ ರಷ್ಯ ಬಾಂಬ್ ದಾಳಿ ನಡೆಸಿದಾಗ ಇವರು ಸುಮಾರು ದಿನಗಳ ಕಾಲ ಬಂಕರ್‌ಗಳಲ್ಲಿದ್ದು ಸುಮಾರು 10 ಕಿ.ಮೀಗಳಷ್ಟು ನಡೆದು ಸ್ಲೋವೇಕಿಯಾ ದೇಶದ ಮುಖಾಂತರ ಭಾರತಕ್ಕೆ ಬಂದಿರುವುದಾಗಿ ತಿಳಿಸಿದರು. ಆ ಸಂಧರ್ಭದಲ್ಲಿ ಆತಂಕಕ್ಕೊಳಗಾಗಿದ್ದರೂ ಭಾರತದ ರಾಯಭಾರಿ ಅಧಿಕಾರಿಗಳ ಸೂಚನೆ ಮೇರೆಗೆ ಧೈರ್ಯದಿಂದ ಹೊರಬಂದು ದೇಶ ತಲುಪಿದೆವು ಎಂದು ಶಾಸಕರು ಅವರನ್ನು ಸಂದರ್ಶಿಸಿದ ವೇಳೆ ತಿಳಿಸಿದರು.
ನಂತರ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ ಕ್ಷೇತ್ರದ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್ ಯುದ್ಧ ಪೀಡಿತ ಪ್ರದೇಶದಿಂದ ಸುರಕ್ಷಿತವಾಗಿ ತಮ್ಮ ಮನೆಗೆ ಹಿಂತಿರುಗಿರುವುದು ಅತ್ಯಂತ ಸಂತೋಷ ತಂದಿದೆ, ನಾನು ಕೇರಳದ ಪ್ರವಾಸದಲ್ಲಿದ್ದರೂ ಸಹ ಈ ಇಬ್ಬರು ವಿದ್ಯಾರ್ಥಿಗಳ ಜೊತೆಗೆ ತಾಲ್ಲೂಕು ತಹಶಿಲ್ದಾರ್ ರವರಿಂದ ಮಾಹಿತಿಯನ್ನು ಪಡೆಯುತ್ತಿದ್ದೆ. ಇವರಂತೆ ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ಮತ್ತು ದೇಶದ ನಾಗರೀಕರು ಮತ್ತು ವಿದ್ಯಾರ್ಥಿಗಳು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಮರಳಲಿ ಎಂದು ಕೋರುವುದಾಗಿ ತಿಳಿಸಿದ ಅವರು ಸದ್ಯದ ಪರಿಸ್ಥಿತಿಯಲ್ಲಿ ಉಕ್ರೇನ್‌ನಿಂದ ವಾಪಸ್ ಆಗಿರುವ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳ ಭವಿಷ್ಯ ಆತಂಕದಲ್ಲಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕಿದೆ. ನಮ್ಮ ಕ್ಷೇತ್ರದ ಇಬ್ಬರು ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾದು ನೊಡಲಾಗುವುದು ಹಾಗೂ ನಮ್ಮ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲೂ ಸಹ ಈ ವಿದ್ಯಾರ್ಥಿಗಳಿಗೆ ಎಲ್ಲಾ ಅಗತ್ಯವಾದ ನೆರವು ಮತ್ತು ಪ್ರವೇಶವನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಶಾಸಕರೊಂದಿಗೆ ತಹಶೀಲ್ದಾರ್ ನಾಹಿದಾ ಜಮ್ ಜಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥ್ನಾರಾಯಣ, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಹೂಲೀಕುಂಟೆ ಪ್ರಸಾದ್, ಪ.ಪಂ.ಸದಸ್ಯ ನಂದೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್, ಮುಖಂಡರಾದ ಮಕ್ತಿಯಾರ್, ರವಿಕುಮಾರ್, ಅರವಿಂದ್, ಮಹಮದ್ ಫಾರೂಕ್ ಇನ್ನಿತರರು ಹಾಜರಿದ್ದರು.

 

 

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker