
ಶಿರಾ : ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಮಹಿಳೆಯೊಬ್ಬರು ಇರುತ್ತಾರೆ. ಅವರು ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಸಹೋದರಿಯಾಗಿ ಬಹುದೊಡ್ಡ ಪಾತ್ರ ವಹಿಸುತ್ತಾರೆ. ಒಂದು ಮಗುವಿನ ಬೆಳವಣಿಗೆ ಹಿಂದೆ ತಾಯಿಯ ಅಪಾರ ಶ್ರಮ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮಹಿಳೆಯರಿಗೆ ಗೌರವ ನೀಡಿದಾಗ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಬರಲಿದೆ ಎಂದು ಎಂದು ತಹಶೀಲ್ದಾರ್ ಮಮತ ಹೇಳಿದರು.
ಅವರು ತಾಲೂಕಿನ ದ್ವಾರನಕುಂಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿನ ಪ್ರತಿಯೊಂದು ಸಮಸ್ಯೆಗೆ ಶಿಕ್ಷಣ ಒಂದೇ ಮಾರ್ಗ, ಪ್ರತಿಯೊಬ್ಬ ಹೆಣ್ಣು ಮಗುವೂ ಶಿಕ್ಷಣ ಪಡೆಯಬೇಕು. ಇದರಿಂದ ದೇಶ ಮತ್ತಷ್ಟು ಬಲಿರಾಷ್ಟ್ರವಾಗಲು ಸಾಧ್ಯ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸರಕಾರಗಳು ಹಲವಾರು ಯೋಜನೆ ಜಾರಿಗೆ ತಂದಿದ್ದು ಮಹಿಳೆಯರಿಗೆ ಹೊಸ ಆಯಾಮ ನೀಡಿದೆ. ಹೆಣ್ಣು ಸಬಲೆಯಾಗಬೇಕೆ ಹೊರತು, ಅಬಲೆಯಾಗ ಬಾರದು. ಮಹಿಳೆಯ ಸಾಧನೆಗೆ ಹಿಂದೆ ತಂದೆತಾಯಿಯ ಪಾತ್ರ ಮಹತ್ವದ್ದಾಗಿದೆ ಎಂದರು.
ವೈದ್ಯಾಧಿಕಾರಿ ಡಾ.ತಿಮ್ಮರಾಜು ಮಾತನಾಡಿ ಮಾತೆ, ಮಡದಿ, ತಂಗಿಯಾಗಿ ಹೆಣ್ಣು ಬೇಕು, ಆದರೆ ಹೆಣ್ಣು ಮಗಳಾಗಿ ಬೇಡ ಎಂಬ ಕೀಳರಿಮೆ ಪೋಷಕರಿಂದ ದೂರವಾಗ ಬೇಕಿದೆ. ಪ್ರಸಕ್ತ ಸನ್ನಿವೇಶದಲ್ಲಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ತಂತ್ರಜ್ಞಾನ ತನ್ನದೆಯಾದ ಸಾಧನೆಯೊಂದಿಗೆ ಮುನ್ನಡೆಯುತ್ತಿದ್ದು, ಎಂತಹ ಕಠಿಣ ಕೆಲಸವನ್ನು ಮಾಡುವಂತ ಸಾರ್ಮಥ್ಯ ಮಹಿಳೆಯರಿಗಿದೆ. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಲ್ಲಿ ಉತ್ತಮ ಪ್ರತಿಭೆ ಇದ್ದು, ತಂದೆ ತಾಯಂದಿರು ಹೆಣ್ಣು ಮಗಳಿಗೆ ಉನ್ನತ ಶಿಕ್ಷಣ ಶಿಕ್ಷಣ ಕೊಡಿಸಬೇಕು ತನ್ನ ಹೊಣೆಗಾರಿಕೆಯಿಂದ ನುಣಚಿಕೊಳ್ಳಲು ಯಾವುದೇ ಕಷ್ಟ ಬಂದರು ಬಾಲ್ಯ ವಿವಾಹ ಮಾಡಬಾರದು ಎಂದರು.
ಕಾರ್ಯಕ್ರಮದಲ್ಲಿ ಶಿರಾ ತಾಲೂಕಿನಲ್ಲಿ ಉತ್ತಮ ಸೇವೆ ಮಾಡಿ ದಕ್ಷ ತಹಸೀಲ್ದಾರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ದಂಡಾಧಿಕಾರಿ ಎಂ.ಮಮತರನ್ನು ವಿಶ್ವ ಮಹಿಳಾ ದಿನದ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.
ದ್ವಾರನಕುಂಟೆ ಗ್ರಾ.ಪಂ. ಅಧ್ಯಕ್ಷೆ ಶ್ರೀದೇವಿ ಶ್ರೀರಾಮಯ್ಯ, ಉಪಾಧ್ಯಕ್ಷೆ ಮಮತ ಜೆ.ಹೆಚ್.ನಾಯ್ಕ , ಆಭಿಯಂತರ ಪಾಲಣ್ಣ, ಮುಖ್ಯಶಿಕ್ಷಕ ಶಿವಣ್ಣ, ಮಹಲಿಂಗಪ್ಪ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಮುದ್ದುರಾಜಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಕಿಶೋರ್, ನಿರಂಜನ್, ಭವ್ಯ, ಅನುರಾಧ, ನರಸಿಂಹಮೂರ್ತಿ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಹಾಜರಿದ್ದರು.