ತುಮಕೂರುಸುದ್ದಿ

ಶಿವಕುಮಾರ ಶ್ರೀಗಳ ದೂರದೃಷ್ಠಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ : ರೈತರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿದ ಶ್ರೀಗಳು : ಸಚಿವ ಬಿ.ಸಿ.ನಾಗೇಶ್

ತುಮಕೂರು: ರೈತರ ಬಗ್ಗೆ ಇದ್ದ ವಿಶೇಷ ಕಳಕಳಿಯಿಂದ ತ್ರಿವಿಧ ದಾಸೋಹಿ ನಡೆದಾಡುವ ದೇವರಾದ ಡಾ.ಶಿವಕುಮಾರಸ್ವಾಮೀಜಿ ಅವರು ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ರೈತರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿದರು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಶ್ರೀ ಸಿದ್ಧಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಆದಾಯವನ್ನು ದ್ವಿಗುಣಗೊಳಿಸುವ ಕೆಲಸವನ್ನು ಸರ್ಕಾರ ಈಗ ಮಾಡುತ್ತಿದ್ದರೆ, ವೈಜ್ಞಾನಿಕವಾಗಿ ಶಿವಕುಮಾರಸ್ವಾಮೀಜಿ ಅಂದಿನ ಕಾಲದಲ್ಲಿಯೇ ಯೋಜನೆ ರೂಪಿಸಿದ್ದರು ಅದಕ್ಕಾಗಿ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದರು ಎಂದರು.
ಸಮಾಜದ ಒಟ್ಟು ವ್ಯವಸ್ಥೆಯನ್ನು ಜನರಿಗೆ ಒಂದೇ ಕಡೆ ತಿಳಿಸುವಂತಹ ಆವಿಷ್ಕಾರಗಳನ್ನು ತೋರಿಸುವ ವಸ್ತುಪ್ರದರ್ಶನವನ್ನು 1964ರಲ್ಲಿಯೇ ಡಾ.ಶಿವಕುಮಾರಸ್ವಾಮೀಜಿ ರೂಪಿಸಿದ್ದರು, ಕೃಷಿಗೆ ಆಧಾರವಾಗಿರುವ ಗೋವುಗಳ ಬಗ್ಗೆ ತಿಳಿಸುವಂತಹ ವ್ಯವಸ್ಥೆಯನ್ನು ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ಶಾಸಕ ಜ್ಯೋತಿಗಣೇಶ್ ಅವರು ಮಾತನಾಡಿ, ಅರವತ್ತು ವರ್ಷಗಳಾದರೂ ಸಿದ್ಧಗಂಗಾ ಮಠದ ಆಕರ್ಷಣೆ ಕಡಿಮೆಯಾಗಿಲ್ಲ ಎಂದರೆ ಅದಕ್ಕೆ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿಗಳ ದೂರದೃಷ್ಠಿಯೇ ಕಾರಣ, ವೈಜ್ಞಾನಿಕವಾಗಿ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಮಾರ್ಗದರ್ಶನ ಮಾಡಿ, ಕೃಷಿ ಕ್ಷೇತ್ರದಲ್ಲಿ ಬದಲಾವಣೆಯನ್ನು ಜನರಿಗೆ ತಲುಪಿಸಿದರು ಎಂದು ಸ್ಮರಿಸಿದರು.
ಸಿದ್ಧಗಂಗಾ ಮಠದ ಮಠಾಧೀಶರಾದ ಶ್ರೀಸಿದ್ಧಲಿಂಗಸ್ವಾಮೀಜಿ ಮಾತನಾಡಿ, ಕೋವಿಡ್ ಕಾರಣದಿಂದ ಜಾತ್ರೆ ನಡೆಯುತ್ತೋ ಇಲ್ಲವೋ ಎನ್ನುವಂತಹ ಪರಿಸ್ಥಿತಿಯಿಂದ ಕೊರೋನಾದಿಂದ ದೂರವಾಗುವ ಪರಿಸ್ಥಿತಿಯಲ್ಲಿ ಸಿದ್ಧಗಂಗಾ ಕ್ಷೇತ್ರದ ಜಾತ್ರೆ ನಡೆಯುತ್ತಿದೆ ಎಂದು ಹೇಳಿದರು.
ವಸ್ತುಪ್ರದರ್ಶನ ಎಲ್ಲ ವರ್ಗದವರಿಗೂ ಅನುಕೂಲವಾಗಬೇಕು, ವ್ಯಾಪಾರಿಗಳಿಗೆ ಅವಕಾಶ ಸಿಗಬೇಕೆಂಬ ಮಹಾದಾಸೆಯಿಂದ ಸ್ವಾಮೀಜಿಗಳು ಈ ವಸ್ತು ಪ್ರದರ್ಶನವನ್ನು ಪ್ರಾರಂಭಿಸಿದರು. ಅದಕ್ಕೆ ಸರ್ಕಾರ ನೀಡುತ್ತಿರುವ ಬೆಂಬಲ ಅಮೋಘವಾದದ್ದು, ಖಾಸಗಿಯಾಗಿ ವ್ಯಕ್ತಿಗಳು ಮಾಡುತ್ತಿರುವ ಸಂಶೋಧನೆಯನ್ನು ಜನರಿಗೆ ತಲುಪಿಸಲು ಇಂತಹ ವಸ್ತು ಪ್ರದರ್ಶನ ಸಹಕಾರಿಯಾಗಲಿದೆ ಎಂದರು.
ಕೃಷಿ ಕ್ಷೇತ್ರ ಇಂದು ಯಂತ್ರೋಪಕರಣಗಳ ಮೇಲೆ ಅವಲಂಬಿತವಾಗಿದ್ದು, ಎಲ್ಲ ಆವಿಷ್ಕಾರಗಳು ರೈತರಿಗೆ ಅನುಕೂಲವಾಗಬೇಕು, ಕೃಷಿಗೆ ಉಪಯುಕ್ತವಾಗಬೇಕೆಂದು ಇಂತಹ ವಸ್ತು ಪ್ರದರ್ಶನ ಸಹಕಾರಿಯಾದರು, ಕೃಷಿ ಇಲಾಖೆ ಪ್ರಾತ್ಯಕ್ಷಿಕೆ ನೀಡಲು ಮೂರು ತಿಂಗಳು ಶ್ರಮ ಪಡುತ್ತಾರೆ, ಕೃಷಿ ಮತ್ತು ಕೈಗಾರಿಕೆ ಪೂರಕವಾದ ಅಂಶಗಳು ಒಂದನ್ನು ಬಿಟ್ಟು ಇನ್ನೊಂದು ಇರಲು ಸಾಧ್ಯವಿಲ್ಲ ಎಂದರು.
ಆಧುನಿಕತೆ ಬೆಳೆದಂತೆ ಬೃಹತ್ ಕೈಗಾರಿಕೆಗಳು ಅವಶ್ಯಕವಾಗಿದ್ದು, ಅನೇಕ ಜನರ ಬದುಕು ಹಸನು ಮಾಡಲು, ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೈಗಾರಿಕಾಗಳ ಪಾತ್ರ ದೊಡ್ಡದಿದೆ, ಕೃಷಿ ಅನ್ನ ನೀಡಿದರೆ, ಕೈಗಾರಿಕೆ ಉದ್ಯೋಗ ನೀಡಿದೆ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಿದ್ಧಗಂಗಾ ಜಾತ್ರೆಯ ಪ್ರತಿಷ್ಠೆಯಲ್ಲಿ ಒಂದಾಗಿದೆ ಎಂದರು.
ಮೇಯರ್ ಬಿ.ಜಿ.ಕೃಷ್ಣಪ್ಪ ಮಾತನಾಡಿದರು, ಕಾರ್ಯಕ್ರಮದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಸಮಿತಿ ಕಾರ್ಯದರ್ಶಿ ಪ್ರೊ.ಬಿ.ಗಂಗಾಧರಯ್ಯ, ಜಂಟಿ ಕಾರ್ಯದರ್ಶಿಗಳಾದ ಎಸ್.ಶಿವಕುಮಾರ್, ಕೆ.ಬಿ.ರೇಣುಕಯ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕ ಕೆ.ಎಸ್.ಉಮಾಮಹೇಶ್, ಸೇರಿದಂತೆ ಇತರರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker