ತುಮಕೂರು: ದೆಹಲಿಯ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ತೆಗೆದು ಕೇಸರಿ ಬಾವುಟ ಹಾರಿಸುವುದಾಗಿ ಸಚಿವ ಈಶ್ವರಪ್ಪ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ನಡೆಯಿತು.
ನಗರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್ ನೇತೃತ್ವದಲ್ಲಿ ಸಮಾವೇಶಗೊಂಡ ನಗರ ಯುವ ಕಾಂಗ್ರೆಸ್ ಘಟಕ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರುಗಳು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತಯಿಂದ ಬಿಜೆಪಿ ಕಚೇರಿಯತ್ತ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದರು.
ಬಿಜೆಪಿ ಕಚೇರಿ ಸಮೀಪದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಪೊಲೀಸರು ಪ್ರತಿಭಟನಾನಿರತ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕದಂತೆ ಮನವೊಲಿಸಲು ಪ್ರಯತ್ನಿಸಿದರು.
ಆದರೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಮಾತಿಗೆ ಸೊಪುö್ಪ ಹಾಕದೆ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಅವರನ್ನು ತಡೆದು ಬಂಧಿಸಿ ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ದರು.
ಇದಕ್ಕೂ ಮುನ್ನ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ ಮಠ್, ನಮ್ಮ ದೇಶದ ಬಾವುಟದ ವಿರುದ್ಧವಾಗಿ ಯಾರಾದರೂ ಮಾತನಾಡುತ್ತಾರಾ, ಬಿಜೆಪಿಯವರು ಬಾಯಿ ಬಿಟ್ಟರೆ ಬರೀ ಸಂವಿಧಾನ ಬದಲಾವಣೆ, ಬಾವುಟ ಬದಲಾವಣೆ ಎಂದೆಲ್ಲಾ ಹೇಳಿಕೆ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ತೆಗೆದು ಕೇಸರಿ ಬಾವುಟ ಹಾರಿಸುವುದಾಗಿ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಹುಚ್ಚನ ರೀತಿಯಲ್ಲಿ ಸಚಿವ ಈಶ್ವರಪ್ಪ ಮಾತನಾಡುತ್ತಾರೆ. ಅವರ ಹೇಳಿಕೆಯಿಂದ ದೇಶದ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಹಾಗಾಗಿ ಬಿಜೆಪಿಯವರಿಗೆ ನೂರಕ್ಕೆ ನೂರರಷ್ಟು ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಈ ಹಿಂದೆ ಬಿಜೆಪಿಯ ಸಂಸದರೊಬ್ಬರು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಈಗ ಸಚಿವ ಈಶ್ವರಪ್ಪ ಅವರು ರಾಷ್ಟ್ರಧ್ವಜವನ್ನೆ ಬದಲಾವಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದೇ ರೀತಿ ಕೋಮುವಾದಿ ಬಿಜೆಪಿ ಪಕ್ಷವನ್ನು ಬೆಳೆಯಲು ಬಿಟ್ಟರೆ ಇಡೀ ದೇಶವನ್ನೆ ಬದಲಾವಣೆ ಮಾಡುತ್ತಾರೆ ಎಂದು ಕಿಡಿಕಾರಿದರು.
ದೇಶದಲ್ಲಿ ಈ ರೀತಿಯ ಯಾವುದೇ ಬದಲಾವಣೆಗಳಿಗೆ ಅವಕಾಶ ನೀಡಲ್ಲ. ಕೋಮುವಾದಿ ಬಿಜೆಪಿಯ ಆಟಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹರಿಹಾಯ್ದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್, ಮುಖಂಡರಾದ ಇಲಾಯಿ ಸಿಕಂದರ್, ಮೋಹನ್, ಆಕಾಶ್, ರಾಜೇಶ್ ದೊಡ್ಮನೆ, ಪುನೀತ್, ನಿಖಿಲ್‌ಕುಮಾರ್, ಅಖಿಲೇಶ್, ಶಾನು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.