ಕೇಂದ್ರ ಬಜೆಟ್ ಮುಂದಿನ 25 ವರ್ಷಗಳ ಅಭಿವೃದ್ಧಿಯ ಮುಂದಾಲೋಚನೆ : ನಗರ ಹಾಗೂ ಗ್ರಾಮಗಳ ಸರ್ವತೋಮುಖ ಬೆಳವಣಿಗೆ ಬಜೆಟ್ : ಸಚಿವ ಎ.ನಾರಾಯಣಸ್ವಾಮಿ
ಮಧುಗಿರಿಯಲ್ಲಿ ಬಿಜೆಪಿಯ ನೂತನ ಜಿಲ್ಲಾ ಕಾರ್ಯಾಲಯ ಉದ್ಘಾಟನೆ
ಮಧುಗಿರಿ: ಸಂವಿಧಾನದ 370 ನೇ ವಿಧಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ನಿಲುವಿಗೆ ದೇಶದಲ್ಲಿ ಬಾಂಬು ಬೀಳುತ್ತೆ ಅರಾಜಕತೆ ತಾಂಡವಾಡುತ್ತೆ ಎಂದವರು ಎಲ್ಲಿ ಹೋದರು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪ್ರಶ್ನಿಸಿದರು.
ಪಟ್ಟಣದಲ್ಲಿ ಬಿಜೆಪಿಯ ನೂತನ ಜಿಲ್ಲಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಮೋದಿಯವರು ಈ ದೇಶದ ಅಖಂಡತೆಯನ್ನು ಎತ್ತಿ ಹಿಡಿಯುವ ಜೊತೆಗೆ ವಿರೋಧಿಗಳು ಹೇಳಿದಂತೆ ಎಲ್ಲಿಯೂ ಒಂದು ಬಾಂಬು ಬೀಳದಂತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ ಇಡೀ ವಿಶ್ವಕ್ಕೆ ನಮ್ಮ ಪಕ್ಷದ ತಾಕತ್ತು ಹಾಗೂ ದೇಶಭಕ್ತಿಯನ್ನು ತೋರಿಸಿದರು ದೇಶದ ರಕ್ಷಣೆ ವಿಚಾರದಲ್ಲಿ ಎಲ್ಲಿಯೂ ರಾಜಿಯಾಗುವುದಿಲ್ಲ ಹಾಗೂ ನಮ್ಮ ಸೈನಿಕರ ಭದ್ರತೆ ಮತ್ತು ಸವಲತ್ತುಗಳಿಗಾಗಿ ವಿಶೇಷ ಕಾಳಜಿವಹಿಸಿರುತ್ತಾರೆ. ನಮ್ಮ ಮೋದಿಯವರ ಸಾಮರ್ಥ್ಯಕ್ಕೆ ಇಂದು ಕಾಂಗ್ರೆಸ್ ನವರು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಅರ್ಹತೆ ಸಹ ಇಲ್ಲ ಎಂದರು. ಈ ಬಾರಿಯ ಬಜೆಟ್ ಮುಂದಿನ 25 ವರ್ಷಗಳ ಅಭಿವೃದ್ಧಿಯ ಮುಂದಾಲೋಚನೆಯಾಗಿದ್ದು ನಗರ ಹಾಗೂ ಗ್ರಾಮಗಳ ಸರ್ವತೋಮುಖ ಬೆಳವಣಿಗೆಗೆ ಈ ಬಜೆಟ್ ಕಾರಣವಾಗಲಿದೆ ಎಂದರು.
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ ವಿರೋಧ ಪಕ್ಷದವರು ಜಾತಿ – ಜಾತಿಗಳ ಮಧ್ಯೆ , ಧರ್ಮ – ಧರ್ಮಗಳ ಮಧ್ಯೆ ಜಗಳ ತಂದಿಟ್ಟು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ . ನಮ್ಮ ಪಕ್ಷದ ಕಾರ್ಯಕರ್ತರು ವಿರೋಧಿಗಳ ಯಾವುದೇ ವಿಚಾರಗಳಿಗೂ ಲೆಕ್ಕಿಸದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದರು .
ವಿಧಾನಪರಿಷತ್ ಸದಸ್ಯಚಿದಾನಂದ ಎಂ. ಗೌಡ ಮಾತನಾಡಿ ಸ್ಥಳೀಯ ಮುಖಂಡರೆಲ್ಲರೂ ಒಮ್ಮತದಿಂದ ತೀರ್ಮಾನಿಸಿ ಹಿರಿಯ ಹಾಗೂ ಸಂಘಟನಾ ಚತುರ ಈ ಬಾಗದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿರುವ ಬಿ.ಕೆ.ಮಂಜುನಾಥ್ ಅವರನ್ನು ಆಯ್ಕೆ ಮಾಡಿದ್ದೇವೆ . ಅವರು ಮಧುಗಿರಿ ಸಂಘಟನಾತ್ಮಕ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುತ್ತಾರೆ ಎಂಬ ವಿಶ್ವಾಸವಿದೆ . ಸತತ ಬರಗಾಲಕ್ಕೆ ತುತ್ತಾಗಿರುವ ಮಧುಗಿರಿಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದು ಈ ಭಾಗವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ಪಣ ತೊಡಬೇಕು ಎಂದರು. ಶಿರಾ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ ಸಂಘಟನಾತ್ಮಕ ದೃಷ್ಟಿಯಿಂದ ನಮ್ಮ ವರಿಷ್ಟರು ಜಿಲ್ಲೆಯನ್ನು ವಿಂಗಡಿಸಿ ಮಧುಗಿರಿ ಉಪವಿಭಾಗಕ್ಕೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಈ ಭಾಗಕ್ಕೆ ಹೆಚ್ಚಿನ ಒತ್ತು ಕೊಡಬೇಕೆಂದು ನಿರ್ಧರಿಸಿದ್ದು ನಾವೆಲ್ಲರೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.
ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ , ವಿರೋಧ ಪಕ್ಷದವರು ನಮ್ಮ ಕಡೆಯ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ , ಇದಕ್ಕೆ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದು ನಮ್ಮ ಪಕ್ಷದ ಶಿಸ್ತಿನ ಹಾಗೂ ಒಗ್ಗಟ್ಟಿನ ಉತ್ತರ ನೀಡಿದ್ದು ಎಲ್ಲರ ಕಣ್ಣಮುಂದಿದೆ ಮುಂದಿನ ಚುನಾವಣೆಯಲ್ಲಿ ಉಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಗುರಿಯಾಗಿದೆ ಎಂದರು.
ಶಾಸಕ ಜೆ.ಬಿ.ಜ್ಯೋತಿಗಣೇಶ್,ಮಾಜಿ ಶಾಸಕ ಗಂಗಹನುಮಯ್ಯ,ರಾಜ್ಯ ಉಪಾಧ್ಯಕ್ಷ ಎಂ.ಬಿ.ನAದೀಶ್ , ತಾಲ್ಲೂಕು ಅಧ್ಯಕ್ಷ ಪಿ.ಎಲ್ .ನರಸಿಂಹಮೂರ್ತಿ , ಚನ್ನಮಲ್ಲಿಕಾರ್ಜುನ ಪಾಟೀಲ್ , ವೈ .ಹೆಚ್.ಹುಚ್ಚಯ್ಯ,ಎಸ್ .ಆರ್ .ಗೌಡ , ರವಿ ಪಾವಗಡ , ಪವನ್ ಕುಮಾರ್ , ರಂಗಸ್ವಾಮಿ , ಲಕ್ಷ್ಮೀಶ್ , ಡಾ.ವೆಂಕಟರಾಮಯ್ಯ , ಹನುಮಂತರಾಜು , ಲಕ್ಷ್ಮೀ ಪ್ರಕಾಶ್ , ಸುರೇಶ್ , ಮಾರುತಿ ಗಂಗಹನುಮಯ್ಯ ,ಕಂಬಣ್ಣ,ರವಿ, ನಾಗೇಂದ್ರ,ಸುರೇಶ್,ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು