ನಾಲ್ಕನೇ ದಿನಕ್ಕೆ ಕಾಲಿರಿಸಿದ ಕೋಳಘಟ್ಟ ಗ್ರಾಮಸ್ಥರ ಅಹೋರಾತ್ರಿ ಧರಣಿ : ರಾಜಕೀಯ ಬದಿಗಿಟ್ಟು ಜನತೆಯ ಸಮಸ್ಯೆಗೆ ಪರಿಹಾರ ದೊರಕಿಸಿ : ಮುರುಳಿಧರಹಾಲಪ್ಪ
ತುರುವೇಕೆರೆ : ಶಾಸಕರೇ, ಸಂಸದರೇ ರಾಜಕೀಯವನ್ನು ಬದಿಗಿರಿಸಿ ಕೋಳಘಟ್ಟ ಜನತೆಯ ಸಮಸ್ಯೆಗೆ ಪರಿಹಾರ ದೊರಕಿಸಿ, ಮಾನವೀಯತೆ ಪ್ರದರ್ಶಿಸಿ ಎಂದು ಕಾಂಗ್ರೇಸ್ ವಕ್ತಾರ ಮುರುಳಿಧರಹಾಲಪ್ಪ ಆಗ್ರಹಿಸಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕಳೆದ 4 ದಿನಗಳಿಂಧ ಅಹೋರಾತ್ರಿ ಧರಣಿ ನಡೆಸುತ್ತಿರುವ ಕೋಳಘಟ್ಟ ಗ್ರಾಮದ ಜನತೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು ಕಳೆದ ಒಂದೂವರೆ ತಿಂಗಳಿನಿಂದ ಕಲ್ಲುಗಣಿಗಾರಿಕೆ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡದಿರುವುದು ಬೇಸರದ ಸಂಗತಿ. ಕೋಳಘಟ್ಟ ಜನ ವಸತಿ ಪ್ರದೇಶದಲ್ಲಿ ಸ್ಫೋಟಕದಿಂದ ಅನಾಹುತ ಸಂಭವಿಸುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಗಣಿ ಸಚಿವರಿಗೆ ತುರುವೇಕೆರೆ ಎಲ್ಲಿ ಬರುತ್ತದೆ ಎಂದು ತಿಳಿಯದಾಗಿದೆ ಎಂದರು.
ವಿ.ಪ. ಮಾಜಿ ಸದಸ್ಯ ಬೆಮೆಲ್‌ಕಾಂತರಾಜ್ ಮಾತನಾಡಿ ಕೋಳಘಟ್ಟ ಕಲ್ಲುಗಣಿಗಾರಿಕೆಯನ್ನು ಗ್ರಾಮಸ್ಥರ ಒತ್ತಾಯದಂತೆ ಸ್ಥಗಿತಗೊಳಿಸುವ ತೀರ್ಮಾನವನ್ನು ಜಿಲ್ಲಾಡಳಿತ ಕೈಗೊಳ್ಳಬೇಕು, ಸ್ಥಳೀಯರ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ಮುಂದಾಗದಿದ್ದರೇ ತುರುವೇಕೆರೆ ಬಂದ್ ಮಾಡುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.
ಕಚೇರಿ ಆವರಣಕ್ಕೆ ದನಕರುಗಳು
.ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಕಳೆದ ಮೂರು ದಿನಗಳಿಂದ ಗ್ರಾಮದ ಮಹಿಳೆಯರು ಹಾಗೂ ಪರುಷರು ಪ್ರತಿಭಟನೆಗೆ ಸೀಮಿತವಾಗಿದ್ದರು. ಒಟ್ಟಾರೇ ಇಡೀ ಕೋಳಘಟ್ಟ ಗ್ರಾಮವೇ ತಾಲೂಕು ಕಚೇರಿ ಆವರಣಕ್ಕೆ ಸ್ಥಳಾಂತರಗೊಂಡಿದ್ದು, ಅಡಿಗೆ ತಯಾರು ಮಾಡಿಕೊಂಡು ಬಯಲ ಬೋಜನ ಮಾಡುತ್ತಿದ್ದಾರೆ. ಇದೀಗ ಗ್ರಾಮದಲ್ಲಿದ್ದ ತಮ್ಮ ದನಕರುಗಳನ್ನು ತಾಲೂಕು ಕಚೇರಿ ಆವರಣದಲ್ಲಿ ಕಟ್ಟುವ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಇಂದಿನ ಪ್ರತಿಭಟನೆಯಲ್ಲಿ ಕಾಂಗ್ರೇಸ್ ಮುಖಂಡರುಗಳಾದ ಚೌದ್ರಿರಂಗಪ್ಪ,ಬೆಸ್ಕಾಂ ಮಾಜಿನಿರ್ಧೇಶಕ ವಸಂತಕುಮಾರ್, ದಾನಿಗೌಡ, ರೈತ ಸಂಘದ ಅಧ್ಯಕ್ಷರುಗಳಾದ ತಿಮ್ಮಲಾಪುರ ಶಂಕರಣ್ಣ, ನಾಗೇಂದ್ರ, ಶ್ರೀನಿವಾಸ್‌ಗೌಡ, ಕಿಸಾನ್ ಘಟಕದ ಸ್ವರ್ಣಕುಮಾರ್, ಪ ಪಂ. ಸದಸ್ಯ ಯಜಮಾನ್ ಮಹೇಶ್ ಸೇರಿದಂತೆ ಅನೇಕರಿದ್ದರು.