ಕೊರಟಗೆರೆ : ರಾಜ್ಯದಲ್ಲಿ ಹಿಜಾಬ್ ವಿಚಾರವಾಗಿ ನಡೆಯುತ್ತಿರುವ ವಿದ್ಯಮಾನಗಳು ಅತ್ಯಂತ ಖಂಡನೀಯ ವಾಗಿದೆ ಇದರ ಹಿಂದೆ ರಾಜಕೀಯ ಹುನ್ನಾರವಿದ್ದು ಸರ್ಕಾರವು ಕೂಡಲೇ ಇದನ್ನು ಹಿತ್ತಿಕ್ಕಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂಬರುವ ಪರಿಸ್ಥಿತಿಗೆ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಶಾಸಕ ಡಾ.ಜಿ.ಪರಮೇಶ್ವರ ಎಚ್ಚರಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ ರಾಜ್ಯದಲ್ಲಿ ಇತ್ತೀಚೆಗೆ ಹಿಜಾಬ್ ಮತ್ತು ಕೇಸರಿ ಶಾಲ್ ವಿಚಾರವಾಗಿ ನಡೆಯತ್ತಿರುವ ಬೆಳವಣಿಗೆ ಅತ್ಯಂತ ಕಳವಳಕಾರಿಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್‌ರವರು ತಮ್ಮ ಸಂವಿಧಾನದಲ್ಲಿ ದೇಶದಲ್ಲಿ ಎಲ್ಲರೂ ಅವರ ಧರ್ಮಗಳನ್ನು ಶಾಂತಿ ಸೌಹಾರ್ದತೆಯಿಂದ ಗೌರವವಾಗಿ ಆಚರಿಸಿಕೊಂಡು ಹೋಗಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಇದು ಭಾರತದಲ್ಲಿ ಕಳೆದ 73 ವರ್ಷದಿಂದ ನಡೆದುಕೊಂಡು ಬರುತ್ತಿದೆ, ದೇಶದಲ್ಲಿ ಪ್ರತಿಯೋಬ್ಬರಿಗೂ ಶಿಕ್ಷಣ ಸಿಗಬೇಕು ಎಂದು ಕೇಂದ್ರ ಮತ್ತು ರಾಜ್ಯಸರ್ಕಾರಗಳು ಸಾವಿರಾರು ಕೋಟಿರೂಗಳ ಯೋಜನೆಯನ್ನು ಶಿಕ್ಷಣಕ್ಕಾಗಿ ಖರ್ಚುಮಾಡುತ್ತಿದೆ, ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಆಯೋಗದ ವರದಿಯಲ್ಲಿ ಅಲ್ಪಸಂಖ್ಯಾತರು ಅತ್ಯಂತ ಕಡಿಮೆ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ, ವಿಶೇಷವಾಗಿ ಕೆಳಸ್ತರದ ಮತ್ತು ಅಲ್ಪಸಂಖ್ಯಾತರು ಶಿಕ್ಷಣದಿಂದ ವಂಚಿತರಾಗ ಬಾರದು, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚು ಒಲವು ತೋರುತ್ತಿದ್ದು, ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಧರಿಸಿರುವ ಉಡುಗೆ-ತೊಡುಗೆ ಬಟ್ಟೆಗಳ ಅಧಾರದ ಮೇಲೆ ಶಾಲೆಗಳಿಗೆ ಅಡ್ಡಿಪಡಿಸುವುದು ಸರಿಯಾದ ಕ್ರಮವಲ್ಲ ಎಂದರು.
ಹಿಜಾಬ್ ಧರಿಸುವುದು ಹಲವು ವರ್ಷಗಳಿಂದಲು ಮುಸ್ಲಿಂ ಧರ್ಮದಲ್ಲಿ ನಡೆದುಕೊಂಡು ಬಂದಿರುವ ಪದ್ಧತಿ ಮತ್ತು ನಂಬಿಕೆಯಾಗಿರುತ್ತದೆ ಅವರವರ ಧರ್ಮದ ಧಾರ್ಮಿಕ ಸಂಕೇತ ಮತ್ತು ಲಾಂಚನಗಳನ್ನು ಧರಿಸುವುದು ದೇಶದಲ್ಲಿ ಹಿಂದಿನಿಂದಲೂ ಕಾಣುತ್ತಾ ಬಂದಿದ್ದೇವೆ, ಇತ್ತೀಚೆಗೆ ಇದರ ಬಗ್ಗೆ ಪ್ರತಿಕ್ರಿಯೆ ನೀಡುವುದು ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ವಿಚಾರಗಳನ್ನು ತಲೆಎತ್ತುವಂತೆ ಮಾಡಿದರೆ ವಿದ್ಯಾರ್ಥಿಗಳ ಮುಗ್ಧ ಮನಸ್ಸಿನಲ್ಲಿ ವಿಷಬೀಜವನ್ನು ನಾವುಗಳೇ ಬಿತ್ತಿದಂತೆ ಆಗುತ್ತದೆ, ಮಕ್ಕಳಲ್ಲಿ ಮತೀಯ ಬಾವನೆಗಳನ್ನು ಅಂಟಿಸಿ ದೇಶದ ಭವಿಷ್ಯವನ್ನು ಹಾಳು ಮಾಡಲು ಕುತಂತ್ರ ಮಾಡುತ್ತಿರುವ ಸಮಾಜ ಘಾತುಕ ಶಕ್ತಿಗಳನ್ನು ಮುಖ್ಯ ಮಂತ್ರಿಗಳು ಎಚ್ಚರಿಕೆ ವಹಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳದಿದ್ದರೆ ಸಮಾಜದ ಶಾಂತಿ ನೆಮ್ಮದಿ ಹಾಳಾಗುತ್ತದೆ, ಇದು ದೇಶದ ಏಕತೆಗೆ ಮತ್ತು ಅಖಂಡತೆಗೆ ದುಡಿದ ಅನೇಕ ಮಹನೀಯರ ಸಾಧನೆ ಮತ್ತು ತ್ಯಾಗಗಳು ವ್ಯರ್ಥವಾಗುತ್ತವೆ ಎಂದರು.